ವಿಶೇಷ ಲೇಖನಗಳು

ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲೂ ನಮ್ಮವರ ಮನಸ್ಥಿತಿ: ಮೋಹನದಾಸ ಕಿಣಿ

ಪರ-ವಿರೋಧ, ಅಭಿಪ್ರಾಯ- ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಸಹಜ, ಆದರೆ ರಾಷ್ಟ್ರೀಯ ಹಿತಾಸಕ್ತಿಯ ತುರ್ತು ಸ್ಥಿತಿಯಲ್ಲೂ ರಾಡಿಯೆಬ್ಬಿಸುವ ರಾಜಕೀಯ ಮನಸ್ಥಿತಿ ಬಹುಶಃ ನಮ್ಮ ದೇಶದ ಏಕಸ್ವಾಮ್ಯವೆಂದರೆ ತಪ್ಪಾಗಲಾರದು. ಕಳೆದ ಕೆಲವು ದಿನಗಳಿಂದ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಬರುತ್ತಿರುವ ಟೀಕೆ ಪ್ರತಿ ಟೀಕೆಗಳ ಸರಮಾಲೆಗಳನ್ನು ನೋಡುವಾಗ ಸ್ವತಂತ್ರ ಭಾರತದ ಪ್ರಜೆಗಳ ಮತ್ತು ನಮ್ಮ ನಾಯಕರೆನಿಸಿಕೊಂಡವರ, ಸ್ವಯಂ ಘೋಷಿತ ಬುದ್ದಿಜೀವಿಗಳ ಪುಂಕಾನುಪುಂಖ ಟೀಕೆ-ಟಿಪ್ಪಣಿ, ಹೇಳಿಕೆ-ಪ್ರತಿ ಹೇಳಿಕೆಗಳ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ. ಇದು ಮನರಂಜನೆಗೆ ಅಲ್ಲ, ಕೇವಲ ನಮ್ಮವರ ಯೋಚನಾ ಲಹರಿಯ ಕುರಿತೊಂದು ಪಕ್ಷಿನೋಟ ಅಷ್ಟೇ.

◆ವಿದೇಶದಲ್ಲಿ ಕೊರೋನಾ ವೈರಸ್ ಹಾವಳಿ ಅತೀ ಹೆಚ್ಚು ಇರುವ ಕೆಲವು ದೇಶಗಳಲ್ಲಿ, ಅತ್ತ ಸೂಕ್ತ ಚಿಕಿತ್ಸೆಯನ್ನೂ ನೀಡದೆ, ಇತ್ತ ಸ್ವದೇಶಕ್ಕೆ ವಾಪಸ್ಸು ಬರಲು ಸೂಕ್ತ ವ್ಯವಸ್ಥೆಯನ್ನೂ ಮಾಡದೇ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರಿಗೆ, (ಉದಾಹರಣೆಗೆ ಇರಾನ್) ಪರೀಕ್ಷೆ ಮತ್ತು ಚಿಕಿತ್ಸೆಗೆ ಸಹಕರಿಸಲು ಸುಸಜ್ಜಿತ ಪ್ರಯೋಗಶಾಲೆ ಮತ್ತು ವೈದ್ಯಕೀಯ ಸಿಬ್ಬಂದಿ ಕಳುಹಿಸಲು ಕೇಂದ್ರ ಸರಕಾರ ವ್ಯವಸ್ಥೆ ಮಾಡಿತ್ತು. ಇದಕ್ಕೆ ಒಬ್ಬರ ಪ್ರತಿಕ್ರಿಯೆ ಹೇಗಿತ್ತೆಂದರೆ, “ಅದಕ್ಕಾಗಿ ಮಾಡಿದ ವೆಚ್ಚವನ್ನು ಭಾರತದಲ್ಲಿ ಇರುವವರಿಗೆ ಚಿಕಿತ್ಸೆ ನೀಡಲು ಉಪಯೋಗಿಸಬಹುದಿತ್ತು “ಅಂದರೆ, ಅಲ್ಲಿದ್ದವರು ಭಾರತೀಯರಲ್ಲವೇ? ಆ ಗುಂಪಿನಲ್ಲಿ ಹೀಗೆ ಟೀಕಿಸಿದವರ ಬಂಧುಮಿತ್ರರು ಇದ್ದಿದ್ದರೆ ಅವರ ಪ್ರತಿಕ್ರಿಯೆ ಹೀಗಿರುತ್ತಿತ್ತೇ? ಕರ್ನಾಟಕದ ಸಚಿವರಿಬ್ಬರ ಮಕ್ಕಳು ವಿದೇಶದಲ್ಲಿ ಇದ್ದು ಅವರನ್ನು ಕರೆಸಲು ಒದ್ದಾಟ ನಡೆಸಿದ ಪ್ರಕರಣ ಇನ್ನೂ ಹಸಿರಾಗಿದೆ. ಹಾಗೆ ವಾಪಸ್ಸು ಬಂದವರನ್ನು ನಿಗದಿತ ಅವಧಿ ಮುಗಿಯುವವರೆಗೆ ದೆಹಲಿಯಲ್ಲಿ ಕ್ವಾರಂಟೈನ್ ಶಿಬಿರದಲ್ಲಿ ಇರಿಸಿ, ನಂತರವಷ್ಟೇ ಅವರವರ ಊರಿಗೆ ಕಳುಹಿಸಿರುವುದರ ಬಗ್ಗೆ ಯಾರೂ ಸೊಲ್ಲೆತ್ತಿಲ್ಲ.

◆ಒಬ್ಬರು ಕೊರೋನ ವೈರಸ್ ವಿಶ್ವಕ್ಕೇ ಮಾರಣಾಂತಿಕವಾದರೂ ಮೋದಿ  ಸರಕಾರಕ್ಕೆ ಸಂತೋಷದ ವಿಷಯವಂತೆ, ಏಕೆಂದರೆ ಪೆಟ್ರೋಲ್ ಡೀಸೆಲ್ ಸುಂಕ ಏರಿಸಲು ಒಂದು ನೆಪ ಸಿಕ್ಕಿದೆಯಂತೆ! ಎಂಬ ಹೇಳಿಕೆ ಕೊಟ್ಟರು. ಅಂದರೆ ಸುಂಕ ಏರಿಕೆಯ ಲಾಭ ಮೋದಿಯವರ ಕಿಸೆಗೆ ಎಂದರ್ಥವೇ?

◆”ಆಂತರಿಕ ಸಮಸ್ಯೆಗಳ ಕಾರಣಕ್ಕೆ ದೇಶದಲ್ಲಿರಲಾಗದೆ, ಕೊರೋನಾದಿಂದ ವಿದೇಶಕ್ಕೂ ಹೋಗಲಾಗದೆ ದ್ವಂದ್ವದಲ್ಲಿದ್ದಾರೆ ನಮ್ಮ ಪ್ರಧಾನಿ” ಎಲ್ಲಿಂದೆಲ್ಲಿಯ ಹೋಲಿಕೆ? ಹಿಂದೆಲ್ಲಾ ವಿಪಕ್ಷಗಳ ನಾಯಕರು ದೇಶದೊಳಗೆ ಸಮಸ್ಯೆ ಇದ್ದಾಗಲೂ, ತಮ್ಮ ಜವಾಬ್ದಾರಿ ಮರೆತು ಇಟೆಲಿ, ಸಿಂಗಪುರಕ್ಕೆ ಹೋದಂತೆ ಎಂದಾದರೂ ಮೋದಿಯವರು ವಿದೇಶಕ್ಕೆ ಹೋದ ಉದಾಹರಣೆ ಇದೆಯೇ? ಅಷ್ಟಕ್ಕೂ ಅವರ ವಿದೇಶಿ ಪ್ರವಾಸ ದೇಶದ ಹಿತಕ್ಕಾಗಿಯೇ ಹೊರತು ಮೋಜು ಮಸ್ತಿಗಲ್ಲ ತಾನೇ?

◆ಮನುಷ್ಯನೆಂದು ಕರೆಸಿಕೊಳ್ಳುವ ಯಾರೇ ಆದರೂ ಇಂತಹ ರೋಗ ತಮ್ಮ ಶತ್ರುವಿಗೂ ಬಾರದಿರಲೆಂದು ಆಶಿಸುತ್ತಾರೆ. ಆದರೆ ಮುಖ್ಯ ಚುನಾವಣಾ ಆಯುಕ್ತರಾಗಿ ದೇಶದ ಪ್ರಭಾವೀ ಹುದ್ದೆಯ ಅಧಿಕಾರ ಮತ್ತು ಸೌಲಭ್ಯಗಳನ್ನು ಅನುಭವಿಸಿದ ಎಸ್. ವೈ.ಖುರೇಶಿಯವರು ಮೋದಿಯವರಿಗೆ ಕೊರೋನಾ ಬರಲೆಂದು ಹಾರೈಸಿದ್ದರು!

◆”ಕೇರಳದ ಆರೋಗ್ಯ ಸಚಿವರು ಮಾದರಿ”-ಯಂತೆ, ಅವರಿಂದ ಕರ್ನಾಟಕ ಸರಕಾರ ಕಲಿಯಬೇಕೆಂದು ಒಬ್ಬರು ಜಾಲತಾಣದಲ್ಲಿ “ಅಮೂಲ್ಯ ಸಲಹೆ” ಕೊಟ್ಟರು, ಅದರೆ ಭಾರತದ ಮೊದಲ ಪ್ರಕರಣ ವರದಿಯಾದದ್ದು ಕೇರಳದಲ್ಲಿ ವಿದೇಶದಿಂದ ಬಂದ ಮೂವರಲ್ಲಿ ಸೋಂಕು ಇದ್ದುದು ದೃಢಪಟ್ಟಿದ್ದರೂ, ಅವರು ಸರಕಾರದ ನಿರ್ದೇಶನವನ್ನು ಧಿಕ್ಕರಿಸಿ, ಚಿಕಿತ್ಸೆ ನೀಡಲು ಬಂದ ಸಿಬ್ಬಂದಿಯವರನ್ನು ದಬಾಯಿಸಿ, ಚರ್ಚಿಗೆ ಭೇಟಿ ನೀಡಿದ, ವಿವಾಹ ಮತ್ತಿತರ ಸಮಾರಂಭಗಳಲ್ಲಿ ಭಾಗವಹಿಸಿದ ಕಾರಣಕ್ಕೆ ಅವರ ಸಂಪರ್ಕಕ್ಕೆ ಬಂದಿರಬಹುದಾದ ಸಾವಿರಾರು ಜನರ ಮೇಲೆ ನಿಗಾ ಇರಿಸಬೇಕಾದ ಅನಿವಾರ್ಯತೆ ಕೇರಳ ಸರಕಾರಕ್ಕೆ ಬಂದಿತ್ತು. ಮಾತ್ರವಲ್ಲ ದಕ್ಷಿಣ ಕನ್ನಡದಲ್ಲಿ ಪಾಸಿಟಿವ್ ಬಂದ ಬಹುತೇಕ ಪ್ರಕರಣಗಳು ಕೇರಳ ಮೂಲದವು! ಚಿಕಿತ್ಸೆಗೆ ಅತ್ಯುತ್ತಮ ಸೌಲಭ್ಯವಿದೆಯೆಂದು ಪ್ರತಿಪಾದಿಸುವ ಕಾಸರಗೋಡು ಸರಕಾರಿ ಆಸ್ಪತ್ರೆ ಇದ್ದರೂ, ಎಲ್ಲರೂ ಮಂಗಳೂರಿಗೆ ಮುಗಿಬೀಳುವುದೇಕೆಂದು ಯಾರು ಉತ್ತರಿಸಬೇಕು?

◆ವಿದೇಶದಿಂದ ವಾಪಸ್ ಬಂದ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟ ಕಾರಣಕ್ಕೆ ಅವರು ಓಡಾಡಿದ ಪ್ರದೇಶದಲ್ಲಿ ಇದ್ದವರನ್ನೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದು ಮಾತ್ರವಲ್ಲದೆ ಅವರ ಪತ್ನಿ ಆಗ್ರಾಕ್ಕೆ ಹೋಗಿರುವ ವಿಷಯ ತಿಳಿದು ಅಲ್ಲಿಗೂ ಹೋಗಿ ಪರಿಶೀಲನೆ ನಡೆಸಿದ್ದು ಕರ್ನಾಟಕ ಸರಕಾರ. ಮನೆಯೊಳಗೆ ಇದ್ದರೂ ಆಕೆಯ ಹೆತ್ತವರು ಇಲ್ಲವೆಂದು ಸುಳ್ಳು ಹೇಳಿದ್ದನ್ನು ನಂಬದೆ, ಪೋಲೀಸರ ಸಹಕಾರದೊಂದಿಗೆ ಆಕೆಯನ್ನು ಚಿಕಿತ್ಸೆಗೆ ಕರೆದೊಯ್ದದ್ದು ಕರ್ನಾಟಕ ಸರಕಾರದ ಅಧಿಕಾರಿಗಳು.

●ಕರ್ನಾಟಕ ಸರಕಾರದ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸಮಾಲೋಚನೆ ನಡೆಸಿ ಹೇಳಿಕೆ ಕೊಡಲಿ, ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಾತ್ರವಲ್ಲ ಪ್ರಧಾನಿಯವರ ಪ್ರತಿಯೊಂದು ಹೆಜ್ಜೆಯನ್ನೂ ಟೀಕಿಸುತ್ತಾ ಇರುವವರು ಅವರು ಮಾತ್ರ. ಅವರು ಯಾವುದಾದರೂ ಕ್ರಿಯಾತ್ಮಕ ಸಲಹೆ ನೀಡಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು, ಇಲ್ಲಿ ಪ್ರಚಾರ ಪಡೆದದ್ದು ಸಚಿವರೋ, ಮಾಜಿ ಮುಖ್ಯಮಂತ್ರಿಯವರೋ? ಆದರೂ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಕ್ರಮ ಕೈಗೊಂಡು ಈ ವಿಷಯಕ್ಕೆ ಅಧಿಕೃತ ಮಾಹಿತಿ ನೀಡುವ ಕರ್ತವ್ಯವನ್ನು ಸುರೇಶ್ ಕುಮಾರ್ ಅವರಿಗೆ ವಹಿಸಿಕೊಟ್ಟು ಇದಕ್ಕೆ ಅಂತ್ಯ ಹಾಡಿದ್ದಾರೆ. ಈ ಹಜ್ಜೆಯ ಕುರಿತು ಒಂದಕ್ಷರವೂ ಮಾತನಾಡಿಲ್ಲ?

●ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಯಾವುದೋ ಭ್ರಮೆಯಲ್ಲಿದ್ದಂತೆ “ಸರಕಾರ ಏನೂ ಮಾಡುತ್ತಿಲ್ಲ” ಎಂದು ಅಪ್ಪಣೆ ಕೊಡಿಸಿದರೆ, ಪಕ್ಷದ ಅಧ್ಯಕ್ಷರು ಪ್ರಧಾನಮಂತ್ರಿ ಪರಿಹಾರ ನಿಧಿಯ ಬದಲಿಗೆ ಬೇರೆ ನಿಧಿ ಸ್ಥಾಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪರಿಹಾರ ನಿಧಿಯ ಸಮಿತಿಯಲ್ಲಿ ಒಂದು ರಾಜಕೀಯ ಪಕ್ಷದ ಅಧ್ಯಕ್ಷರು (ಕಾಂಗ್ರೆಸ್) ಸದಸ್ಯರಾಗಿದ್ದು,ಯಾವುದೇ ವೆಚ್ಚ ಮಾಡಬೇಕಾದರೂ ಅವರ ಒಪ್ಪಿಗೆ ಕೂಡಾ ಅಗತ್ಯವಂತೆ! ನಿಧಿಗೆ ಇವರ್ಯಾರೂ ಕೊಡುಗೆ ನೀಡಿದ ಬಗ್ಗೆ ಎಲ್ಲೂ ವರದಿಯಾಗಿಲ್ಲ, ಆದರೆ ಇವರು ಮಾತ್ರ ಬಡವರಿಗೆ ಅಷ್ಟು ಕೊಡಿ, ಇಷ್ಟು ಕೊಡಿ ಎಂದೆಲ್ಲಾ ಪುಕ್ಕಟೆ ಸಲಹೆ ಕೊಡುತ್ತಾರೆ!

◆ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಲಾಕ್ ಡೌನ್ ಮುಂತಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಇದಕ್ಕೆ ಓರ್ವ ಬುದ್ದಿವಂತರು ಜಾಲತಾಣದಲ್ಲಿ ಬರೆದ ಪ್ರತಿಕ್ರಿಯೆ ಹೀಗಿದೆ: ಇದೆಲ್ಲಾ ಅಗತ್ಯವಿತ್ತೇ? “ಇದು ನೆಗಡಿ ಬಂದರೆ ಮೂಗನ್ನೇ ಕತ್ತರಿಸಿದಂತೆ” ಹೀಗೆ ಹೇಳುವವರು Prevention is better than cure ಎಂಬ ಆಡುಮಾತನ್ನು ಮರೆತಂತಿದೆ?

◆ಇಂತಹ ಕ್ರಮವನ್ನು ಹಲವಾರು ರಾಷ್ಟ್ರಗಳಲ್ಲಿ ಜ್ಯಾರಿಗೊಳಿಸಲಾಗಿದೆ. ವೈದ್ಯಕೀಯ ತುರ್ತುಪರಿಸ್ಥಿತಿ ಘೋಷಿಸುವ ಮೂಲಕ ತ್ವರಿತವಾಗಿ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು, ಮತ್ತು ವೆಚ್ಚ ಇತ್ಯಾದಿಗಳಿಗೆ ಆಡಳಿತಕ್ಕೆ ಅಧಿಕಾರ ನೀಡುವ ಕ್ರಮವಿದು. ಇದಕ್ಕೆ ಆಯಾ ದೇಶದಲ್ಲಿ ಪಕ್ಷ ಬೇಧವಿಲ್ಲದೆ ಬೆಂಬಲ ಸೂಚಿಸಿದೆ, ಅದೇ ವೇಳೆ ನಮ್ಮವರ ಮನಸ್ಥಿತಿ ದೇವರಿಗೇ ಪ್ರೀತಿ.

◆ದೇಶದ ಆಂತರಿಕ ಸ್ಥಿತಿಯೇನೇ ಇದ್ದರೂ ಕೆಲವು ಕಠಿಣ ಕ್ರಮಗಳಿಂದ ಬಂದಷ್ಟೇ ವೇಗದಲ್ಲಿ ಈ ಮಾರಕ ರೋಗ ಚೀನಾದಲ್ಲಿ ನಿಯಂತ್ರಣಕ್ಕೆ ಬಂತು. ಆದರೆ ನಾವೋ ತಲೆಗೊಂದು ಮಾತನಾಡಿ ನಮ್ಮ ಮತ್ತು ಮುಂದಿನ ಪೀಳಿಗೆಯ ತಲೆಗೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದ್ದೇವೇನೋ ಅನಿಸುವಂತಿದೆ.

◆ನಮ್ಮ ದೇಶದಲ್ಲಿ ವಿದೇಶೀಯರೂ ಸೇರಿದಂತೆ ಕೊರೋನಾ ಪರೀಕ್ಷೆ, ಚಿಕಿತ್ಸೆಗೆ ಯಾವುದೇ ಶುಲ್ಕ ವಸೂಲಿ ಮಾಡದಿರುವುದನ್ನು ಉಲ್ಲೇಖಿಸಿ, ಅಮೇರಿಕಾದಲ್ಲೂ ಉಚಿತವಾಗಿ ಮಾಡಲು ನಿರ್ಧಿರಿಸಿರುವ ಸುದ್ದಿ ಬಂದಿದೆ. ಇದು ನಮಗೆ ಹೆಮ್ಮೆಯ ವಿಷಯವಲ್ಲವೇ?

◆ಇದೆಲ್ಲದಕ್ಕೂ ಭಿನ್ನವಾದ ಇನ್ನೊಂದು ಪ್ರತಿಕ್ರಿಯೆ ನೋಡಿದರೆ ನಮ್ಮಲ್ಲಿ ಎಷ್ಟೊಂದು ಸಂಕುಚಿತ ಮನಸ್ಥಿತಿ ಇದೆಯೆಂದು ಅರ್ಥವಾಗುತ್ತದೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ  ಸುಧಾಮೂರ್ತಿಯವರು ತಮ್ಮ ಪ್ರತಿಷಾನ ಮತ್ತು ಡಾ.ದೇವಿ ಶೆಟ್ಟಿಯವರ ಜಂಟಿ ಸಹಭಾಗಿತ್ವದಲ್ಲಿ ಕೊರೋನಾ ಸೋಂಕಿತರ ಪರೀಕ್ಷೆ ಮತ್ತು ಚಿಕಿತ್ಸೆಗೆ ಒಂದು ಪ್ರತ್ಯೇಕ ಆಸ್ಪತ್ರೆಯನ್ನು ತೊಡಗಿಸುವ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದಾರೆ. ಇದಕ್ಕೆ ಜಾಲತಾಣದಲ್ಲಿ ಒಬ್ಬರ ಪ್ರತಿಕ್ರಿಯೆ ಹೇಗಿತ್ತೆಂದರೆ,  ಸುಧಾಮೂರ್ತಿಯವರು ಇಂತಹ ಕೆಲಸಗಳನ್ನು ರಾಜ್ಯಸಭಾ ಸ್ಥಾನ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಮಾಡುತ್ತಿದ್ದಾರಂತೆ. ಇದು ನಿಜವೇ ಆಗಿದ್ದಲ್ಲಿ ಹೀಗೆಲ್ಲಾ ಶ್ರಮಪಡುವ ಅಗತ್ಯವಿರಲಿಲ್ಲ. ವಿಜಯ ಮಲ್ಯರಂತವರು ಒಂದಿಷ್ಟು ಖರ್ಚು ಮಾಡಿ ಸದಸ್ಯತ್ವ ಗಿಟ್ಟಿಸಿಕೊಂಡಂತೆ ಮಾಡಬಹುದಿತ್ತಲ್ಲ? ಅಷ್ಟಕ್ಕೂ ಅವರಿಗೆ ರಾಜಕೀಯಕ್ಕೆ ಬರುವ ಉದ್ದೇಶ ಇರಲಾರದು, ಇದ್ದರೂ ಅವರು ರಾಜ್ಯಸಭಾ ಸದಸ್ಯರಾದರೆ ಅವರಿಗಿಂತ ದೇಶಕ್ಕೆ ಹೆಚ್ಚು ಗೌರವ.

◆ಇಷ್ಟೆಲ್ಲಾ ಕ್ರಮಗಳ ನಡುವೆ ಊಟಕ್ಕಿಲ್ಲದಿದ್ದರೂ ಗುಂಡು ಸಿಗುವುದೇ ಎಂಬ ಹುಡುಕಾಟದಲ್ಲಿ ಕೆಲವರಿದ್ದರೆ, ಬೆಂದ ಮನೆಯಲ್ಲಿ ಹಿರಿದದ್ದೇ ಲಾಭ ಎಂಬಂತೆ ಉಚಿತವಾಗಿ ಹಂಚಲು ನೀಡಿದ ಹಾಲು ಮಾರಾಟ, ಜೀವನಾವಶ್ಯಕ ವಸ್ತು, ಔಷಧಿಗಳ ಬೆಲೆಯಲ್ಲಿ ಯದ್ವಾತದ್ವಾ ಬೆಲೆಯೇರಿಕೆ ಮಾಡಿದವರೂ ಇದ್ದಾರೆ. ಲಾಕ್ ಡೌನ್ ಘೋಷಣೆಯ ಹಿಂದಿನ ದಿನ ಜೀವನಾವಶ್ಯಕ ವಸ್ತುಗಳ ಖರೀದಿಗೆ ನೀಡಲಾದ ರಿಯಾಯತಿ ಅವಧಿಯಲ್ಲಿ ಬೇರೆಡೆಗಿಂತ ಮದ್ಯದಂಗಡಿ ಎದುರು ಇದ್ದ ಜನಸಂದಣಿ ಹೆಚ್ಚಾಗಿದ್ದು ಅದನ್ನು ಚದುರಿಸಲು ಪೋಲೀಸರೇ ಬರಬೇಕಾಯ್ತಂತೆ!

◆ಅಗತ್ಯ ವಸ್ತುಗಳ ಪೂರೈಕೆ ವಾಹನಗಳಲ್ಲಿ ಮದ್ಯ, ಪಾನ್ ಮಸಾಲಾ ಪೂರೈಕೆ, ತುರ್ತು ವಾಹನ ಮೂಲಕ ಸುಳ್ಳು ಹೇಳಿ ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಟ, ಗಡಿಯಲ್ಲಿ ಪ್ರವೇಶ ನಿರ್ಬಂಧವಿದ್ದರೂ ಪ್ರಭಾವ ಬಳಸಿ, ಗಣ್ಯ ವ್ಯಕ್ತಿಗಳು ವಿನಾಯಿತಿ ಪಡೆಯುವುದು, ಅದೇ ವೇಳೆ ತುರ್ತು ವೈದ್ಯಕೀಯ ಅವಶ್ಯಕತೆಗೆ ವಾಹನ ದೊರೆಯದೇ ಸಾವನ್ನಪ್ಪಿದ ಪ್ರಕರಣಗಳು, ಒಂದೇ ಮನೆಗೆ ಬೇರೆ ಬೇರೆ ಮೂಲಗಳಿಂದ ಅವಶ್ಯಕತೆಗಿಂತ ಹೆಚ್ಚು ಆಹಾರ ಪದಾರ್ಥಗಳನ್ನು ಕೊಟ್ಟರೂ ಪಡೆದವರು ಒಂದೆಡೆಯಾದರೆ, ನಿಜವಾಗಿಯೂ ಅಗತ್ಯವಿದ್ದವರಿಗೆ ಏನೂ ಸಿಗದವರ ಸಂಖ್ಯೆ ದೊಡ್ಡದೇ ಇದೆ.

ಇದೆಲ್ಲಾ ನೋಡಿದರೆ ನಾಳೆ ಯುದ್ಧ ಘೋಷಣೆಯಾದರೂ ನಮ್ಮವರ ಮನಸ್ಥಿತಿ ಇದಕ್ಕಿಂತ ಹೆಚ್ಚು ಭಿನ್ನವಾಗಿರಲಿಕ್ಕಿಲ್ಲ. ಆದರೂ ಈ ಮದ್ಯೆ ಅಲ್ಲೊಂದು ಇಲ್ಲೊಂದು ಸಮಾಧಾನ ತರುವ ಸುದ್ಧಿಗಳೆಂದರೆ ವಿದೇಶದಿಂದ ಬಂದ ಟೆಕ್ಕಿಯೊಬ್ಬರು ಸೋಂಕಿನ ಸೂಚನೆ ಇಲ್ಲದಿದ್ದರೂ ಸರಕಾರದ ಸೂಚನೆಯಂತೆ 14ದಿನ ಯಾರ ಸಂಪರ್ಕಕ್ಕೂ ಬರದೆ ಸ್ವಯಂ ಪ್ರೇರಿತವಾಗಿ ಮನೆಯಲ್ಲೇ ಉಳಿದಿದ್ದಾರಂತೆ. ಸರಕಾರದ ಕಠಿಣ ಕ್ರಮಗಳಿಂದ ಪ್ರಪಂಚದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾದರೂ ಸೋಂಕಿನ ಮತ್ತು ಮರಣದ ಸಂಖ್ಯೆ ಇನ್ನೂ ಹಿಡಿತದಲ್ಲಿದೆ.

ಮುಗಿಸುವ ಮುನ್ನ: ಯಾರೇನೇ ಹೇಳಲಿ, ಕ್ಷಣಕ್ಷಣಕ್ಕೂ ತಮ್ಮ ಜೀವವನ್ನು ಪಣಕ್ಕಿಟ್ಟು ಸೋಂಕಿತರ ನಡುವೆ, ಅವರ ಪರೀಕ್ಷೆ, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಲು ಯಾವ ರಾಜಕಾರಣಿಗಳಿಗೂ ಬಿಡುವಿಲ್ಲ, ಬುದ್ಧಿಜೀವಿಗಳಿಗೂ ನೆನಪಿಲ್ಲ! ಆ ಕೆಲಸ ನಾವಾದರೂ ಮಾಡೋಣ.

★ಮೋಹನದಾಸ ಕಿಣಿ, ಕಾಪು

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker