
ಹಿಂದಿನಕಾಲದಲ್ಲಿ ಕೆಲವು ಆಟ ಹಾಗು ಕೆಲಸ ಪುರುಷರಿಗೆ ಮಾತ್ರ ಸೀಮಿತವಾಗಿತ್ತು ಆದರೆ ಇಂದು ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದರೆ ಇಂತಹ ಹಾದಿಯಲ್ಲಿ ಪುರುಷರ ಆಟವೆಂಬ ಖ್ಯಾತಿಗಳಿಸಿದ ಕಬಡ್ಡಿ ಆಟದ ನಾಯಕತ್ವವನ್ನ ವಹಿಸಿ, ಭಾರತ ತಂಡವನ್ನ ಪ್ರತಿನಿಧಿಸಿ ಗೆದ್ದು ಬಂದಿದ್ದಾರೆ ಅವರೇ ನಮ್ಮ ಕರಾವಳಿಯ ಬೆಡಗಿ ಮಮತಾ ಪೂಜಾರಿ.
ಮಮತಾ ಪೂಜಾರಿಯವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ರೈತ ಕುಟುಂಬದಲ್ಲಿ 1986ರಲ್ಲಿ ಭೋಜ ಪೂಜಾರಿ ಹಾಗೂ ಕಿಟ್ಟಿ ಪೂಜಾರಿಯ ಮಗಳಾಗಿ ಜನಿಸಿದರು . ತಮ್ಮ ಪದವಿ ಶಿಕ್ಷಣವನ್ನ ಮಂಗಳೂರಿನಲ್ಲಿರುವ ಕಾಲೇಜ್ ನಲ್ಲಿ ಮುಗಿಸುತ್ತಾರೆ . ತಮ್ಮ ಬಾಲ್ಯದ ದಿನಗಳಿಂದಲೇ ಕ್ರೀಡೆಯಲ್ಲಿ ಆಸಕ್ತಿಯಿದ್ದ ಮಮತಾ ಅವರಿಗೆ ಪೋಷಕರು ತುಂಬಾನೇ ಸಪೋರ್ಟ್ ಮಾಡ್ತಾರೆ.
ತಮ್ಮ ಕಾಲೇಜಿನ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ತಿರುನಲ್ವೇಲಿಯಲ್ಲಿ ನಡೆದ ಅಂತರಕಾಲೇಜು ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಕರಾವಳಿಯ ಮುಕುಟ ಮಣಿ ಆಗ್ತಾರೆ. ಅಲ್ಲಿಂದ ತಮ್ಮ ಕ್ರೀಡಾ ಬದುಕಿನ ಮಹತ್ವದ ಪಯಣ ಆರಂಭಿಸಿದ ಮಮತಾ ಪೂಜಾರಿ, ಏಷ್ಯನ್ ಗೇಮ್ಸ್ ಹಾಗೂ ಕಬ್ಬಡ್ಡಿ ವಿಶ್ವಕಪ್ನಲ್ಲಿ ಭಾರತ ತಂಡವನ್ನ ಪ್ರತಿನಿಧಿಸ್ತಾರೆ.
ಭಾರತದ ಮಹಿಳೆಯರ ಕಬ್ಬಡ್ಡಿ ತಂಡದಲ್ಲಿ ಮಹತ್ವದ ಪಾತ್ರ ವಹಿಸುವ ಮಮತಾ ತಂಡದ ನಾಯಕಿಯಾಗಿ ಭಾರತ ತಂಡವನ್ನ ಪ್ರತಿನಿಧಿಸ್ತಾರೆ. 2006ರಲ್ಲಿ ಕೋಲೋಂಬೋದಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ಭಾರತ ಗೆಲ್ಲುವ ಮೂಲಕ ಚಿನ್ನದ ಪದಕವನ್ನ ಮುಡಿಗೆರಿಸ್ತಾರೆ.
ಕಬ್ಬಡ್ಡಿಯಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿ, ಭಾರತೀಯ ಕಬ್ಬಡ್ಡಿ ತಂಡದ ನಾಯಕಿಯಾಗಿ ಭಾರತ ತಂಡವನ್ನ ಪ್ರತಿನಿಧಿಸಿದ ಮಮತಾ ಪೂಜಾರಿ ಮುಕುಟಕ್ಕೆ 2014ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನ ನೀಡಿ ಗೌರವಿಸಿವೆ.
ಕಬ್ಬಡ್ಡಿಯನ್ನ ಉಸಿರಾಗಿಸಿಕೊಂಡ ಮಮತಾ ಸದ್ಯ ಭಾರತೀಯ ಸೌತ್ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗಿಯಾಗಿ ತಮ್ಮ ಮತ್ತೋಂದು ಇನ್ನಿಂಗ್ಸ್ ಶುರುಮಾಡಿದ್ದಾರೆ.ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಮಾತಿಗೆ ಮಮತಾ ಪೂಜಾರಿ ಸ್ಪಷ್ಟ ನಿದರ್ಶನವಾಗಿದ್ದು, ಭಾರತೀಯರ ಪಾಲಿನ ಹೆಮ್ಮೆಯ ಮಗಳಾಗಿದ್ದಾಳೆ.