ಈ ಮಾತು ಸುಮ್ಮನೇ ಹೇಳಿದ್ದು ಅಂತ ತಿಳಿಯಬೇಡಿ. ವಾಸ್ತವ ಸಂಗತಿ ಹಾಗೆಯೇ ಇದೆ . ಸರಕಾರದ ಯಾವುದೇ ಜನಪರ ಚಿಂತನೆ , ಯೋಜನೆಯು ಒಂದು ಕಡೆ ಸಾಧಕವಾದರೆ ಇನ್ನೊಂದು ಕಡೆ ಬಾಧಕವಾಗಿಯೇ ಇರುವದು ಹೆಚ್ಚು . ಬ್ಯಾಂಕ್ ಸಾಲ ಪಡೆದವರಿಗೆ ಸಾಲದ ಮರುಪಾವತಿಗೆ ಒಂದಿಷ್ಟು ತಿಂಗಳ ಗಡುವು ನೀಡಿದೆ . ಸರಿ ಇದರಿಂದ ಸಾಲ ಪಡೆದವರು ನಿಟ್ಟುಸಿರು ಬಿಟ್ಟರು . ಆದರೆ ಕೋ-ಅಪರೇಟ್ಹೀವ್ ಸೊಸೈಟಿ , ಸಾಮಾನ್ಯ ಬ್ಯಾಂಕ್ ಗಳ ಪರಿಸ್ಥಿತಿ ಬಗ್ಗೆ ಯಾರಾದರೂ ಯೋಚಿಸಿಯಾರೇ ? ಬ್ಯಾಂಕ್ ನಲ್ಲಿ ಇಟ್ಟ ಡಿಪೋಸಿಟ್ , ಫಿಗ್ಮಿ ಹಣವನ್ನು ಆ ಬ್ಯಾಂಕ್ ನ ಗ್ರಾಹಕ ಹಣದ ಅವಶ್ಯಕತೆಗಾಗಿ ದಿಡೀರನೆ ಬಂದು ತನ್ನ ಹಣ ಮರಳಿ ಕೊಡಲು ಕೇಳಿ ಕೊಳ್ಳುತ್ತಾನೆ. ಸಾಲದ ಮರುಪಾವತಿ ಇಲ್ಲದೇ ಬ್ಯಾಂಕ್ ಲಾಕರ್ ಒಳಗಡೆ ಹಣ ಈಗಾಗಲೇ ಲೊಳಲೊಟ್ಟೆಯಾಗಿದೆ. ಬ್ಯಾಂಕ್ ನವರು ಹಣವನ್ನು ಎಲ್ಲಿಂದ ತಂದು ಕೊಟ್ಟಾರು ? ನೀವೇ ಯೋಚಿಸಿ . ಮನೆಯಿಂದ ಕೊಡಲು ಸಾಧ್ಯವೇ ? ಇಲ್ಲ ಹೊಸ ನೋಟುಗಳನ್ನು ಮುದ್ರಿಸಿ ಕೊಡಲು ಸಾಧ್ಯವೇ ?
ಈ ಸಮಸ್ಯೆಗೆ ಸರಕಾರ ಬ್ಯಾಂಕ್ ಹಾಗೂ ಸಾಲಗಾರರ ಎರಡು ಕಡೆಯ ಸಾಧಕ-ಬಾಧಕಗಳ ಅರಿತು ಸಮಾನ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಚಿಸಬೇಕಿತ್ತು. ಇಲ್ಲಿಯೂ ಕೂಡ ಸಂಕಷ್ಟ ಎದುರಿಸಬೇಕಾಗಿ ಬರುವದು ಜನರಿಗೆ ಆಗಿದೆ . ಬ್ಯಾಂಕ್ ನಲ್ಲಿ ಹಣ ಇದ್ದರೆ ಗ್ರಾಹಕರ ಹಣ ಮರಳಿ ಕೊಡಬಹುದು ಇಲ್ಲದೇ ಹೋದರೆ ಹೇಗೆ ಕೊಡಲು ಸಾಧ್ಯ ಅಲ್ಲವೇ ? ಆಗಲೂ ತೊಂದರೆಗೆ ಒಳಗಾಗುವವರು ಜನರೇ ಅಲ್ಲವೇ ? ಬ್ಯಾಂಕ್ ನಿಂದ ಸಾಲ ಪಡೆದವರು ತುಸು ಮಾನವೀಯ ನೆಲೆಯಲ್ಲಿ ಯೋಚಿಸಬೇಕು . ಸರಕಾರ ಸಧ್ಯಕ್ಕೆ ಸವಲತ್ತುಗಳ ಕೊಟ್ಟಿದೆ ಅಷ್ಟೇ . ಇದರಿಂದ ಸಾಲಗಾರರಿಗೆ ತಾತ್ಕಾಲಿಕ ರೀಲ್ಹೀಪೇ ಹೊರತು ಶಾಶ್ವತವಾಗಿ ಸಿಗಲಾರದು. ಅನೇಕರು ಈ ಕಾರಣಕ್ಕಾಗಿ ಇನ್ನಷ್ಟು ಸಾಲದ ಹೊರೆ ಹೆಚ್ಚು ಮೈಮೇಲೆ ಎಳೆದು ಕೊಂಡಂತಾಗುತ್ತದೆ. ಹತ್ತು ರೂಪಾಯಿ ತುಂಬುವಲ್ಲಿ ಇಪ್ಪತ್ತು ರೂಪಾಯಿ ತುಂಬುವ ಪರಿಸ್ಥಿತಿ ಒಮ್ಮೆಲೇ ಬರಬಹುದು . ಬ್ಯಾಂಕ್ ನವರ ಬಡ್ಡಿ ಗೆ ಸರಕಾರ ಬ್ರೇಕ್ ಹಾಕಿಲ್ಲ. ಬಡ್ಡಿ ಕೊರೋನಾ ವೈರಸ್ ನಂತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತದೆ . ಬಡ್ಡಿ , ಚಕ್ರಬಡ್ಡಿ , ವಕ್ರಬಡ್ಡಿ ಎಲ್ಲವೂ ಬಳ್ಳಿಯಾಗಿ ನಾಳೆ ಸುತ್ತಿ ಕೊಳ್ಳುವದು ಸಾಲಗಾರರಿಗೆ ಆಗಿದೆ . ಬ್ಯಾಂಕ್ ನವರು ಲಾಕ್ ಡೌನ್ ಸಡಿಲಗೊಂಡ ನಂತರ ಸುಮ್ಮನೆ ಇರುತ್ತಾರೆಯೇ ? ಹಸಿದ ಹುಲಿ ಹೇಗೆ ಎಗರಿ ಬೀಳುತ್ತದೋ ಹಾಗೆಯೇ ಬ್ಯಾಂಕ್ ನವರು ಸಾಲ ವಸೂಲಿಗೆ ಒಮ್ಮೆಲೇ ಎಗರಿ ಬೀಳುತ್ತಾರೆ . ಇದು ತಪ್ಪು ಎಂದು ಹೇಳಲಿಕ್ಕಾಗದು. ಬ್ಯಾಂಕ್ ನವರ ಅಂದಿನ ಅನಿವಾರ್ಯತೆಯೂ ಹೌದು . ಬ್ಯಾಂಕ್ ನವರ ನಡೆ ನ್ಯಾಯ ಸಮ್ಮತವಾಗಿರುವಾಗ ಸಾಲಗಾರ ಕಾಪಾಡಿ ಕಾಪಾಡಿ ಎಂದು ಕೂಗಿದರೆ ಸರಕಾರ ಆಗ ಮತ್ತೆ ಸಾಲಗಾರರ ರಕ್ಷಣೆಗೆ ಬರುತ್ತದೆಯೇ ? ಕಾನೂನು , ಸರಕಾರ ಎಲ್ಲವೂ ಸಾಲಗಾರರ ಪರವಾಗಿ ರಕ್ಷಣೆಗೆ ಆಗ ಇರುವದಿಲ್ಲ. ಸಾಲಗಾರ ಏಕಾಂಗಿಯಾಗಿ ಬಿಡುತ್ತಾನೆ . ಸರಕಾರ ಮೂರು ತಿಂಗಳ ರಕ್ಷಣೆ ಸಾಲಗಾರರಿಗೆ ಕೊಟ್ಟಿದ್ದೇ ದೊಡ್ಡ ಉಪಕಾರ ಎಂಬುದನ್ನು ನೆನಪು ಮಾಡಿಕೊಡುತ್ತಾರೆ. ಅಲ್ಲಿಗೆ ಸಾಲಗಾರ ನಿರುತ್ತರನಾಗಿ ನಿಲ್ಲಬೇಕಾಗುತ್ತದೆ. ಸಾಲಗಾರರಲ್ಲಿ ಅನೇಕ ವಿಧದ ಸಾಲಗಾರರು ಇರುತ್ತಾರೆ . ಸಾಲದ ಮರುಪಾವತಿಗೆ ನಿಜವಾಗಿ ಸೋತವರು. ಸಾಲ ಮರುಪಾವತಿಸುವ ಸಾಧ್ಯತೆ ಹೊಂದಿಯೂ ಸೋತಂತೆ ನಟಿಸುವವರು. ಇವರಲ್ಲಿ ಎರಡನೇಯದಕ್ಕೆ ಸಂಬಂಧಿಸಿದವರು ಮರು ಪಾವತಿ ಮಾಡಬೇಕು . ಇದರಿಂದ ಬ್ಯಾಂಕ್ ತುಸು ಚೇತರಿಕೆ ಕಾಣುವಂತಾಗುತ್ತದೆ. ಮತ್ತೆ ಆರ್ಥಿಕ ಸಹಾಯಕ್ಕೆ ಎದ್ದು ನಿಂತಿದ್ದಾದರೆ ಮುಂದೊಂದು ದಿನ ಅದು ಪುನ: ಜನರಿಗೆ ಪ್ರಯೋಜನಕ್ಕೆ ಸಿಗುತ್ತದೆ ಎಂಬುದನ್ನು ಮರೆಯಬಾರದು .
ಹೀಗಾಗಿ ಸಧ್ಯದ ಕಠಿಣ ಪರಿಸ್ಥಿತಿಯಲ್ಲಿಯೂ ಕೈಲಾದಷ್ಟು ಸಾಲ ಮರುಪಾವತಿಗೆ ಮುಂದಾದರೆ ಸಾಲಕೊಟ್ಟವರು ಸಾಲ ಪಡೆದವರೂ ಸುರಕ್ಷಿತರಾಗಿರಬಹುದು. ಇಲ್ಲ ಅಂದರೆ ಮುಂದಿನ ಪರಿಸ್ಥಿತಿ ಗಂಭೀರ ಸ್ವರೂಪದ್ದಾಗಿರುತ್ತದೆ. ಪರಿಸ್ಥಿತಿಗೆ ತಕ್ಕಂತೆ ಯೋಚಿಸುವದು ಬುದ್ಧಿವಂತರ ಲಕ್ಷಣ. . . . ಏನಂತೀರಿ ?

ಗೌರೀಶ್ ಶಾಸ್ರ್ತೀ, ಹಿರಿಯ ಪತ್ರಕರ್ತರು