
ನಾವು ಯಾವಾಗಲೂ ನಂಬರ್ ಒನ್ ಆಗಬೇಕು ಎಂಬ ಹಪಾಹಪಿಯಲ್ಲಿ ಆನ್ಲೈನ್ ಕ್ಲಾಸ್ ಆರಂಭಿಸಿದುದರ ದುರಂತ ಇದು. ಆನ್ಲೈನ್ ಕ್ಲಾಸ್ ನಲ್ಲಿ ತನ್ನ ಸಹಪಾಠಿಗಳು ಭಾಗವಹಿಸಿದರೂ, ಸ್ಮಾರ್ಟ್ ಫೋನ್ ಹಾಗೂ ಟಿವಿ ಇಲ್ಲದ ಕಾರಣದಿಂದ ಇದರಲ್ಲಿ ಭಾಗವಹಿಸಲು ಸಾಧ್ಯವಾಗದ ನೋವಿನಿಂದ ಕೇರಳದ ವಲಂಚೇರಿಯ ದಲಿತ ಸಮುದಾಯಕ್ಕೆ ಸೇರಿದ ಬಾಲಕೃಷ್ಣನ್ ಎಂಬವರ ಪುತ್ರಿ ದೇವಿಕಾ (14) ಸ್ವತಃ ಬೆಂಕಿ ಹಚ್ಚಿ ಜೀವ ಕಳೆದುಕೊಂಡಿದ್ದಾರೆ. ಬಾಲಕಿ ಆತ್ಮಹತ್ಯೆಗೈದ ದಾರುಣ ವಾರ್ತೆ ಎಂತಹಾ ಕಲ್ಲು ಹೃದಯಿಗಳನ್ನೂ ನೋಯಿಸುವಂತಹುದು.
ದಿನಗೂಲಿ ಕಾರ್ಮಿಕರಾಗಿರುವ ಬಾಲಕೃಷ್ಣನ್ ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು ಎನ್ನಲಾಗಿದೆ.
ಕುಟುಂಬವು ಸ್ಮಾರ್ಟ್‌ಫೋನ್ ಹೊಂದಿರಲಿಲ್ಲ ಹಾಗೂ ಅವರ ಟಿವಿಯೂ ಸ್ವಲ್ಪ ಸಮಯದ ಹಿಂದೆ ಹಾಳಾಗಿದ್ದು, ಆನ್‌ಲೈನ್ ತರಗತಿಗಳು ಪ್ರಾರಂಭವಾಗುವ ಮೊದಲು ಅದನ್ನು ದುರಸ್ತಿ ಮಾಡಲು ದೇವಿಕಾ ತನ್ನ ತಂದೆಯನ್ನು ಕೇಳಿಕೊಂಡಿದ್ದರು. ಆದರೆ ಆರ್ಥಿಕ ಪರಿಸ್ಥಿತಿಯೂ ಸರಿಯಿಲ್ಲದ ಕಾರಣದಿಂದ ಕುಟುಂಬಕ್ಕೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಅಧಿಕಾರಾರೂಢರು ಸ್ವ ಪ್ರತಿಷ್ಠೆ ಮತ್ತು ಉದ್ಧಟತನ ಮೈಗೂಡಿಸಿಕೊಂಡರೆ ಸಂವೇದನೆ ಸಾಯುತ್ತದೆ !. ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಗಳಲ್ಲಿ ಭಾಗವಹಿಸುವ ಮೂಲಭೂತ ಸೌಕರ್ಯ ಇಲ್ಲವೆಂದು ಗೊತ್ತಿದ್ದರೂ,ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ಬದಲು ಜೂನ್ ಒಂದರಂದೇ ಕ್ಲಾಸ್ ಆರಂಭಿಸಿದೆವು ಎಂದು ಹೆಮ್ಮೆಯಿಂದ ಘೋಷಿಸಿ ಪ್ರಶಂಸೆ ಗಿಟ್ಟಿಸುವ ಧಾವಂತ ಖಂಡನೀಯ.