
ಪ್ಯಾರಿಸ್: ಕೊರೊನಾವೈರಸ್ ಲಾಕ್‌ಡೌನ್ ಮುಕ್ತಾಯದ ಬಳಿಕ ಪ್ರಾನ್ಸ್‌ನಲ್ಲಿ ಶಾಲೆಗಳು ಪುನರಾರಂಭವಾಗಿ ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಮತ್ತೆ ತೀವ್ರ ಆತಂಕ ಸೃಷ್ಟಿಸಿದೆ. ಸರಕಾರದ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆಯೇ ಕೊರೊನಾ ಸಾಂಕ್ರಾಮಿಕ ಮತ್ತೆ ವ್ಯಾಪಕವಾಗಿ ಹರಡಲಾರಂಭಿಸಿದೆ.
ಫ್ರಾನ್ಸ್ ಸರಕಾರ ನಿರ್ಬಂಧಗಳನ್ನು ತೆರವುಗೊಳಿಸಿದ್ದನ್ನು ಪ್ರಜೆಗಳು ಆರಂಭಿಕವಾಗಿ ಸ್ವಾಗತಿಸಿದ್ದರು. ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಪೋಷಕರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವೆಂದು ಬೇಗನೆ ಶಾಲೆ ಆರಂಭಿಸುವಂತೆ ಒತ್ತಾಯಿಸಿದ್ದರು. ಆದರೆ ಈಗ ಶಾಲಾ ಮಕ್ಕಳಿಗೂ ಕೊರೊನಾ ಸೋಂಕು ತಗಲುತ್ತಿರುವುದು ಪೋಷಕರಿಗೆ ವ್ಯಾಪಕ ಆತಂಕ ಉಂಟುಮಾಡಿದೆ.
ಉತ್ತರ ಫ್ರಾನ್ಸ್‌ನಲ್ಲಿ ಏಳು ಶಾಲೆಗಳನ್ನು ಕೊರೊನಾ ಸಾಂಕ್ರಾಮಿಕ ಕಂಡು ಬಂದ ಕಾರಣಕ್ಕೆ ಮುಚ್ಚಲಾಗಿದೆ. ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳಲು ಪೋಷಕರಿಗೆ ಫ್ರೆಂಚ್ ಸರಕಾರ ಅನುಮತಿ ನೀಡಿದೆ.













