
ಉಡುಪಿ ಜಿಲ್ಲೆ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. 3ವಾರಗಳ ಹಿಂದೆ ಕೋವಿಡ್ ಸೋಂಕು ಮುಕ್ತವಾಗಿದ್ದ ಉಡುಪಿ ಜಿಲ್ಲೆ, ಈಗ ರಾಜ್ಯದಲ್ಲೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಾಗಿದೆ. ಇದರ ಮಧ್ಯೆ ಸೋಂಕಿತರ ಸಂಖ್ಯೆ ನಾಲ್ಕು ಅಂಕಿ ದಾಟಿದರೆ ಜಿಲ್ಲೆಯಲ್ಲಿ ಚಿಕಿತ್ಸೆ ನೀಡುವಷ್ಟು ಬೆಡ್‌ಗಳ ಸಂಖ್ಯೆ ಲಭ್ಯವಿದೆಯೇ ಎಂಬ ಆತಂಕವಿದೆ.
ಸದ್ಯ ಕುಂದಾಪುರ, ಕಾರ್ಕಳ ಸರ್ಕಾರಿ ಆಸ್ಪತ್ರೆ ಹಾಗೂ ಉಡುಪಿಯ ಡಾ.ಟಿ.ಎಂ.ಎ ಪೈ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 5 ಸಾವಿರಕ್ಕೂ ಹೆಚ್ಚು ವರದಿ ಬಾಕಿಯಿದೆ. ಹೊರ ರಾಜ್ಯಗಳಿಂದ ಬಂದಿರುವ 8,472 ಮಂದಿ, ವಿದೇಶಗಳಿಂದ ಬಂದ 152 ಮಂದಿ ಹಾಗೂ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದ 12,513 ಜನರ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿ, 7577 ಮಾದರಿಗಳ ಫಲಿತಾಂಶ ಮಾತ್ರ ಬಂದಿದೆ. ಇನ್ನೂ 4,936 ವರದಿಗಳು ಬರುವುದು ಬಾಕಿ ಇದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಆತಂಕಕಾರಿ ವಿಚಾರ ಎಂದರೆ ಪರೀಕ್ಷಾ ವರದಿ ಬರುವ ಮುನ್ನವೇ ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದು, ಮನೆಮಂದಿಗೆ ಸೋಂಕು ತಗುಲುವ ಅಪಾಯ ಎದುರಾಗಿದೆ. ಅದರಲ್ಲೂ ಹಿರಿಯರು ಹಾಗೂ ಮಕ್ಕಳಿಗೆ ತಗುಲಿದರೆ ಸಮಸ್ಯೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.
ಈಗ 2ನೇ ಹಂತದಲ್ಲಿ ಮತ್ತೆ ಮಹಾರಾಷ್ಟ್ರದಿಂದ ಉಡುಪಿಗೆ ಬರಲು 15 ಸಾವಿರಕ್ಕೂ ಹೆಚ್ಚು ಮಂದಿ ಬಂದರೆ, ಇವರೆನ್ನೆಲ್ಲ ಸರ್ಕಾರಿ ಕ್ವಾರಂಟೈನ್ ಮಾಡುವುದು ಜಿಲ್ಲಾಡಳಿತಕ್ಕೆ ನಿಜಕ್ಕೂ ಸವಾಲಿನ ಕೆಲಸ. ಮೇ ಆರಂಭದಲ್ಲಿ ಹೊರ ರಾಜ್ಯಗಳಿಂದ ಬಂದವರಿಗೆ ಜಿಲ್ಲೆಯ ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಸರ್ಕಾರಿ ಕ್ವಾರಂಟೈನ್ ಮಾಡಲಾಗಿತ್ತು. ಈಗ ಜೂನ್ 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿದ್ದು, ಸಿದ್ಧತೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಹೊರ ರಾಜ್ಯಗಳಿಂದ ಬರುವವರನ್ನು ಸರ್ಕಾರಿ ಕ್ವಾರಂಟೈನ್ ಮಾಡುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ?.