
ಹೊರ ರಾಜ್ಯದಿಂದ ಬಂದವರು ಹಾಗೂ ಮುಂದಿನ ದಿನಗಳಲ್ಲಿ ಬರುವವರಿಗೆ ಹೋಂ ಕ್ವಾರಂಟೈನ್ ಮಾಡಿ ಮನೆಯನ್ನು ಸೀಲ್ ಡೌನ್ ಮಾಡುವುದು ಸೂಕ್ತ ಎಂದು ಶಾಸಕ ರಘುಪತಿ ಭಟ್ ಅವರು ನೀಡಿದ ಸಲಹೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರು ಒಪ್ಪಿಗೆ ಸೂಚಿಸಿ ತಕ್ಷಣದಲ್ಲಿ ಆದೇಶಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉಡುಪಿ ಜಿಲ್ಲೆಗೆ ದಿ. 09.06.2020 ರಂದು ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರು ಕೋವಿಡ್ -19 ಕುರಿತು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬೇರೆ ಬೇರೆ ರಾಜ್ಯಗಳಿಂದ ಸಾವಿರಾರು ಮಂದಿ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಅವರಿಗೆ ಸರ್ಕಾರಿ ಕಾರಂಟೈನ್ ಮಾಡುವುದರಿಂದ ಸ್ನಾನಗೃಹ, ಶೌಚಾಲಯದ ಕೊರತೆ ಉಂಟಾಗುತ್ತದೆ. ಇದರಿಂದ ಕೊರೋನಾ ಹರಡುವಿಕೆಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ನಿಟ್ಟಿನಲ್ಲಿ ಅವರವರ ಮನೆಯಲ್ಲಿ ಇರುವಂತೆ ಹೋಂ ಕ್ವಾರಂಟೈನ್ ಮಾಡಿ ಮನೆಯನ್ನು ಸೀಲ್ ಡೌನ್ ಮಾಡುವುದು ಹಾಗೂ ಅವರಿಗೆ ಬೇಕಾದ ದಿನಬಳಕೆ ಸಾಮಾಗ್ರಿಗಳನ್ನು ನೀಡಲು ಸ್ಥಳೀಯಾಡಳಿತಕ್ಕೆ ವಹಿಸುವುದು ಸೂಕ್ತ. ಅವರು ಮನೆಯಿಂದ ಹೊರಬರದಂತೆ ಪೊಲೀಸ್ ಇಲಾಖೆ ನಿಗಾವಹಿಸುವುದು. ಯಾರಾದರು ಕಾಲನಿಗಳಲ್ಲಿ ಇದ್ದು ಹೋಂ ಕ್ವಾರಂಟೈನ್ ಸಾಧ್ಯವಿಲ್ಲ ಎಂದರೆ ಅವರಿಗೆ ಸರಕಾರಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಸಲಹೆ ನೀಡಿ ಈ ಬಗ್ಗೆ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೂ ತಂದಿದ್ದೇನೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿಯೂ ಮಾತನಾಡಿದ್ದೇನೆ ಎಂದು ವಿಷಯವನ್ನು ಪ್ರಸ್ತಾಪಿಸಿದರು.
ಇದಕ್ಕೆ ತಕ್ಷಣದಲ್ಲಿ ಸ್ಪಂದಿಸಿದ ಆರೋಗ್ಯ ಸಚಿವರಾದ ಶ್ರೀರಾಮುಲು ಜಿಲ್ಲಾಡಳಿತದ ಜತೆಗೆ ಚರ್ಚಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಕರೆ ಮಾಡಿ ಹೊರ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಮಾಡಿ ಮನೆ ಸೀಲ್ ಡೌನ್ ಮಾಡುವ ಬಗ್ಗೆ ಸೂಕ್ತ ಆದೇಶ ಹೊರಡಿಸಿ ಜಿಲ್ಲಾಡಳಿತಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ತಕ್ಷಣದಲ್ಲಿ ಕಳುಹಿಸಲು ಸೂಚಿಸಿದರು.