ಮಕ್ಕಳ ಪೋಷಕರಿಗೆ ಆರ್ಥಿಕ ಸಂಕಷ್ಟ :70 ಲಕ್ಷ ಫೀಸ್ ಮನ್ನಾ ಮಾಡಿದ ಉಡುಪಿ ಜಿಲ್ಲೆಯ ಶಾಸಕ ಸುಕುಮಾರ ಶೆಟ್ಟಿ !

ಉಡುಪಿ: ದೇಶದಲ್ಲಿ ಕೊರೊನ ವ್ಯಾಪಕವಾಗಿ ಹರಡುತ್ತಿದ್ದು ಮಕ್ಕಳ ಪೋಷಕರು ಆರ್ಥಿಕ ಸಮಸ್ಯೆಯಲ್ಲಿದ್ದು ತಮ್ಮ ಮಕ್ಕಳ ಫೀಸ್ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಈ ವರ್ಷ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.ಕಳೆದ ವರ್ಷದ ಒಂದೂವರೆ ಕೋಟಿ ಫೀಸ್ ಮಕ್ಕಳಿಂದ ಬಾಕಿಯಿದೆ. ಮಕ್ಕಳಿಗೆ ನಾವು ಶುಲ್ಕಕ್ಕಾಗಿ ಯಾವತ್ತೂ ಒತ್ತಡ ಹೇರಿಲ್ಲ. ಈ ಬಾರಿ ಫೀಸ್ ಶುಲ್ಕದ ಪೈಕಿ 70 ಲಕ್ಷ ರುಪಾಯಿ ಮನ್ನಾ ಮಾಡುತೇವೆ ಎಂದು ಹೇಳಿದ್ದಾರೆ .
ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿರುವ ಇವರು , ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.ಕಡು ಬಡತನದಿಂದ ಬಂದ ಕುಟುಂಬದ ಮಕ್ಕಳಿಗೆ ಫೀಸ್ ತೆಗೆದುಕೊಳ್ಳಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೆಲ ಕುಟುಂಬಗಳಿಗೆ ಅರ್ಧ ಫೀಸ್ ಹಾಗು ಶ್ರೀಮಂತರ ಮಕ್ಕಳಿಗೆ ಫುಲ್ ಫೀಸ್ ಎಂದು ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ.
ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20 ಸಾವಿರ ಫೀಸ್ ಇದೆ. ಮೂರು ಅಥವಾ ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಆದರೆ ಈ ಸಲ ತುಂಬ ಕಷ್ಟವಾಗಿದೆ , ಶಿಕ್ಷಕರಿಗೆ ಸಂಬಳ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷದಷ್ಟು ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಆರ್ಥಿಕವಾಗಿ ಸಬಲರಾಗಿರುವವರು ಫೀಸ್ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಶಾಸಕ ಸುಕುಮಾರ ಶೆಟ್ಟಿ ವಿನಂತಿ ಮಾಡಿದರು.