
ಉಡುಪಿ, ಜೂ.16: ನಗರದ ಸರಕಾರಿ ಬಸ್ಸು ನಿಲ್ದಾಣದ ಸನಿಹದ ಶಾಂಭವಿ ಲಾಡ್ಜಿನಲ್ಲಿ ವಾಸ್ತವ್ಯ ಹೂಡಲು ಬಂದಿರುವ ಅಪರಿಚಿತ ಯುವಕನೊರ್ವನು, ಫ್ಯಾನಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಮಂಗಳವಾರ ನಡೆದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯುವಕನಿಗೆ ಸುಮಾರು 22 ವರ್ಷ ಪ್ರಾಯ ಅಂದಾಜಿಸಲಾಗಿದೆ. ವೀರಭದ್ರ, ಬೆಂಗಳೂರು ಕೆಂಗೇರಿಯ ಪರಿಸರದ ನಿವಾಸಿ ಆಗಿರಬಹುದೆಂದು ಶಂಕಿಸಲಾಗಿದೆ. ಯುವಕ ಮರಣಪತ್ರ ಬರೆದಿಟ್ಟಿದ್ದು ಅದರಲ್ಲಿ ನನ್ನವರು ಅಂತ ನನಗೆ ಯಾರು ಇಲ್ಲ. ಅದಕ್ಕಾಗಿ ಜೀವನದಲ್ಲಿ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣವೆಂದು ಉಲ್ಲೇಖಿಸಿದ್ದಾನೆ.
ಯುವಕ ಆತ್ಮಹತ್ಯೆ ಕೃತ್ಯ ಎಸೆಗುವ ಮುನ್ನ ತನ್ನಲ್ಲಿರುವ ಮೊಬೈಲ್, ಇನ್ನಿತರ ದಾಖಲೆಗಳನ್ನು ಸುಟ್ಟು ನಾಶಗೊಳಿಸಿ ಕಸದ ಬುಟ್ಟಿಗೆ ಹಾಕಿರುವುದು ಕಂಡು ಬಂದಿದೆ. ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ. ಮೃತ ವ್ಯಕ್ತಿಯ ಸಂಬಂಧಿಕರು ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಮೃತ ಯುವಕ ಹೊರ ಜಿಲ್ಲೆಯವನು ಆಗಿರುವುದರಿಂದ, ಶವ ತಪಾಸಣೆಗೆ ಸಾಗಿಸಲು ಪೊಲೀಸರು ಕೊರೊನಾ ಪಡೆಗೆ ಮಾಹಿತಿ ನೀಡಿದ್ದರು. ಆದರೆ ಅವರಿಂದ ಸ್ಪಂದನೆ ದೊರೆಯದೆ ಪೊಲೀಸರೇ ಶವ ವಿಲೇವಾರಿ ಮಾಡಬೇಕಾಯಿತೆಂದು ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.