
ಕೋವಿಡ್ – 19 ಸೋಂಕಿತರ ಸಂಖ್ಯೆಯಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿ ಇದ್ದರೂ ಕೋವಿಡ್ – 19 ನಿಂದ ಗುಣಮುಖರಾದವರಲ್ಲಿಯೂ ಉಡುಪಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾಡಳಿತದ ಜವಾಬ್ದಾರಿಯುತ ಕಾರ್ಯವೈಖರಿ ಹಾಗೂ ಉಡುಪಿಯ ಜನರ ಜಾಗೃತಿಯಿಂದ ಕೋವಿಡ್ – 19 ನಿಯಂತ್ರಣದಲ್ಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಜನರಲ್ಲಿ ಕೋವಿಡ್ – 19 ವಿರುದ್ಧ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿ. 18-06-2020 ರಂದು ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಮಾಸ್ಕ್ ದಿನ ಆಚರಣೆಯ ಜನ ಜಾಗೃತಿ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ಕೋವಿಡ್ – 19 ಕುರಿತು ಭಯ ಪಡುವ ಅಗತ್ಯವಿಲ್ಲ. ಆದರೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಮ್ಮ ನಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಸರ್ಕಾರ, ಅಧಿಕಾರಿಗಳೊಂದಿಗೆ ಜನಸಾಮಾನ್ಯರು ಕೈಜೋಡಿಸಿ ಕೋವಿಡ್ – 19 ವಿರುದ್ಧ ಹೋರಾಡಬೇಕು. ಆಗ ನಾವು ಯಶಸ್ವಿಯಾಗುತ್ತೇವೆ ಎಂದು ಹೇಳಿದರು.
ಬಳಿಕ ನಗರಸಭೆಯಿಂದ ತಾಲೂಕ ಆಫೀಸ್ ವೃತ್ತದವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನ ಜಾಗೃತಿ ಜಾಥ ನೆರವೇರಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ್ ಪ್ರಭು, ಉಡುಪಿ ಪೋಲಿಸ್ ಉಪ ಅಧೀಕ್ಷಕರಾದ ಜೈಶಂಕರ್, ಪೌರಾಯುಕ್ತರಾದ ಆನಂದ್ ಸಿ ಕಲ್ಲೋಲಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್ ಹಾಗೂ ನಗರಸಭೆಯ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.