
ಬೆಂಗಳೂರು: ಗಾಂಧಿ ಜಯಂತಿ ಸೇರಿದಂತೆ ಎಲ್ಲ ಗಣ್ಯರ ಜಯಂತಿಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವುದರ ಬದಲು, ಅರ್ಥಪೂರ್ಣ ಆಚರಣೆಗೆ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅವರು ಗುರುವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪರಿಷತ್ನಲ್ಲಿ ನಡೆದ ಸಭೆಯಲ್ಲಿ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಮಾತುಕತೆ ನಡೆಸಿ ಈ ಬಗ್ಗೆ ತಿಳಿಸಿದ್ದಾರೆ. ಸಭೆಯಲ್ಲಿ 7 ಪ್ರಮುಖ ಶಿಫಾರಸುಗಳ ವರದಿಯನ್ನು ಸಲ್ಲಿಸಿದರು. ರಜೆ ನೀಡುವುದರ ಬದಲು, ಅಂದು ಅಂತಹ ಗಣ್ಯ ವ್ಯಕ್ತಿಗಳ ಬಗ್ಗೆ ಉಪನ್ಯಾಸ- ಕಾರ್ಯಾಗಾರವನ್ನು ಆಯೋಜಿಸಬೇಕು. ಆ ಮೂಲಕ ಇಂದಿನ ಪೀಳಿಗೆಯನ್ನು ಜಾಗೃತರನ್ನಾಗಿಸಬಹುದು. ಇದರಿಂದ ಜಯಂತಿಗಳಿಗೆ ನಿಜವಾದ ಅರ್ಥ ಬರಲಿದೆ ಎಂದು ಪ್ರೊ.ದೊರೆಸ್ವಾಮಿ ಸಲಹೆ ನೀಡಿದರು.