
ಚಾಮರಾಜನಗರ: ಅನ್ಲಾಕ್ ನಂತರ ಬಾಗಿಲು ತೆರೆದು ಭಕ್ತರನ್ನು ಬರ ಮಾಡಿಕೊಳ್ಳುತ್ತಿದ್ದ ಮಹಾದೇಶ್ವರನ ಸನ್ನಿದಿಗೆ ಜೂ.19 ರಿಂದ 21ರವರೆಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಕೋವಿಡ್ 19 ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಮಲೆ ಮಹದೇಶ್ವರ ಸ್ವಾಮಿಗೆ ಜೂ. 19 ರಂದು ಎಣ್ಣೆಮಜ್ಜನ ಹಾಗೂ 20 ಮತ್ತು 21 ರಂದು ಅಮಾವಾಸ್ಯೆ ದಿನದ ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ ಭಾನುವಾರ ಮತ್ತು ರಜಾ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಈ ಸಮಯದಲ್ಲಿಕೊರೊನಾ ವಿರುದ್ಧ ಹೋರಾಡಲು ಸಂರಕ್ಷಣಾ ಕ್ರಮಗಳನ್ನು ಕೈಗೊಂಡರೂ ಸುಮಾರು 50 ಸಾವಿರ ಮಂದಿ ಭಕ್ತರು ಬರುವ ಸಂಭವವಿರುವುದರಿಂದ ಭಕ್ತರನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ದೇವರ ದರ್ಶನ ಮಾಡಿಸಲು ಕಷ್ಟ ಸಾಧ್ಯವಾಗಲಿದೆ.
ಹೀಗಾಗಿ ಸಾರ್ವಜನಿಕರ ಹಾಗೂ ಭಕ್ತಾದಿಗಳ ಆರೋಗ್ಯ ಹಿತದೃಷ್ಟಿಯಿಂದ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜೂ. 19 ರಿಂದ 21 ರವರೆಗೆ ಅಂದರೆ ಮೂರು ದಿನಗಳ ಕಾಲ ಮಲೆ ಮಹದೇಶ್ವರ ದೇವಾಲಯಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.