
ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲು ಸೇನೆ ಪಣತೊಟ್ಟಿದೆ. ಕಳೆದ ಕೆಲ ದಿನಗಳಿಂದ ಜಮ್ಮು ಕಾಶ್ಮೀರದ ವಿವಿಧೆಡೆ ದಾಳಿ ನಡೆಸುತ್ತಿದ್ದು, ಈವರೆಗೆ ಹಲವು ಉಗ್ರರನ್ನು ಹೆಡೆಮುರಿ ಕಟ್ಟಲಾಗಿದೆ. ಇಂದು ಮುಂಜಾನೆ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾ ಪಡೆ ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಶೋಪಿಯಾನ್ ಜಿಲ್ಲೆಯ ಪ್ಯಾಂಪೋರ್ ನ ಮೀಜ್ ಎಂಬಲ್ಲಿ ಉಗ್ರರು ಅಡಗಿರುವ ಬಗ್ಗೆ ಸೇನೆಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭಯೋತ್ಪಾದಕರು ಅಡಗಿದ್ದ ಮಸೀದಿಯನ್ನು ಸುತ್ತುವರಿದ ಸೇನಾಪಡೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ಈ ವೇಳೆ ಉಗ್ರರು ಗುಂಡಿನ ಸುರಿಮಳೆಗರೆದರು. ದಾಳಿಯ ವೇಳೆ, ಸೇನಾಪಡೆಯ ಗುಂಡಿಗೆ ಐವರು ಉಗ್ರರು ಬಲಿಯಾಗಿದ್ದಾರೆ ಎಂದು ಸೇನೆಯ ಮೂಲಗಳು ಸ್ಪಷ್ಟಪಡಿಸಿವೆ. ಇನ್ನು ಸ್ಥಳದ ಆಸುಪಾಸಿನಲ್ಲಿ ಇನ್ನಷ್ಟು ಮಂದಿ ಭಯೋತ್ಪಾದಕರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ..