
ಇಡೀ ಭಾರತದಲ್ಲಿ ಪ್ರಾಯಶಃ ಈ ದೇವಸ್ಥಾನ ಮತ್ತೆಲ್ಲೂ ಇಲ್ಲಎನ್ನಬಹುದು. ಮೈಸೂರಿನ ವಿಶ್ವವಿಖ್ಯಾತ ಅರಮನೆ ಹಾಗೂ ನಗರದ ಮಧ್ಯಭಾಗದಿಂದ ಕೇವಲ 2 ಕಿ.ಮಿ. ದೂರದಲ್ಲಿರುವ ದೇವಸ್ಥಾನ ಇಂದಿಗೂ ಹೆಸರುವಾಸಿಯಾಗದೇ ಹಾಗೆಯೇ ಇರುವುದು ವಿಪರ್ಯಾಸವೇ ಸರಿ. ಸಿಮೆಂಟ್ ಹಾಗೂ ಇಟ್ಟಿಗೆಯನ್ನು ಬಳಸದೆ ಚಪ್ಪಡಿ ಕಲ್ಲಿನಿಂದ ನಿರ್ಮಾಣವಾಗಿರುವ ಈ ದೇವಾಲಯದ ಹೆಸರು ಶ್ರೀ ವಿಜಯವಿಶ್ವೇಶ್ವರ ಕಾಮೇಶ್ವರ ಕಾಮೇಶ್ವರಿ ದೇವಸ್ಥಾನ. ಸ್ಥಳೀಯರು ತಮ್ಮ ಮಾತಿನಲ್ಲಿ ದೇವಾಲಯವನ್ನು ಕಾಮ ಕಾಮೇಶ್ವರಿ ದೇವಸ್ಥಾನ ಎಂದು ಕರೆಯುವುದರಿಂದ ಆ ಹೆಸರಿನಿಂದಲೇ ದೇವಸ್ಥಾನ ಪ್ರಸಿದ್ಧವಾಗಿದೆ.
ದೇವಾಲಯದ ಇತಿಹಾಸ:
ಶ್ರೀ ವಿಜಯ ವಿಶ್ವೇಶ್ವರ ಕಾಮೇಶ್ವರ ಕಾಮೇಶ್ವರಿ ದೇವಾಲಯವನ್ನು ಮೈಸೂರು ಅರಮನೆ ರಾಜವಂಶಸ್ಥರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಕಟ್ಟಿಸಿದ್ದಾರೆ. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ನೇಪಾಳಕ್ಕೆ ಹೋಗಿದ್ದಾಗ ಅಲ್ಲಿರುವ ವಿಶ್ವವಿಖ್ಯಾತ ಪಶುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿನ ವಿಶೇಷ ದೇವಾಲಯದಲ್ಲಿ ಸಂತಾನ ಭಾಗ್ಯ ಇಲ್ಲದವರು ಹರಿಕೆ ಮಾಡಿಕೊಂಡರೆ ಸಂತಾನ ಫಲ ಸಿಗುತ್ತದೆ ಎಂಬ ಪ್ರತೀತಿ. ಹಾಗಾಗಿ ಜಯಚಾಮರಾಜೇಂದ್ರರು ತಮಗೆ ಪುತ್ರಸಂತಾನ ಪ್ರಾಪ್ತವಾಗಲಿ ಎಂದು ಮೈಸೂರಿನಲ್ಲಿ ಕಾಮೇಶ್ವರ ಕಾಮೇಶ್ವರಿ ದೇವಸ್ಥಾನವನ್ನು ಕಟ್ಟಿಸುವುದಾಗಿ ಹರಕೆ ಮಾಡಿಕೊಂಡರು. ಪುತ್ರ ಸಂತಾನವಾದ ನಂತರ ಅರಮನೆಯಿಂದ 2ಕಿ.ಮಿ ದೂರದಲ್ಲಿ ಕಾಮೇಶ್ವರಿ ಕಾಮೇಶ್ವರ ದೇವಸ್ಥಾನವನ್ನು ಕಟ್ಟಿಸಿದರೆಂಬ ಇತಿಹಾಸವಿದೆ.
ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಆಪ್ತರಾದ ಶಿಲ್ಪಿ ಸಿದ್ಧಲಿಂಗಸ್ವಾಮಿ ಅವರು ದೇವಾಲಯದ ವಿಗ್ರಹಗಳನ್ನು ಕಡೆದು ನಿಲ್ಲಿಸಿದ್ದಾರೆ. ಅವರು ಸ್ತಪದಿಯಾದ್ದರಿಂದ ಆಗಮ ಶಾಸ್ತ್ರದ ಪ್ರಕಾರ ವಿಗ್ರಹವನ್ನು ಇಂಚು ಇಂಚಾಗಿ ಕೆತ್ತನೆ ಮಾಡಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದ್ದಾರೆ.
ದೇವಾಲಯದ ವಿಶೇಷ:
ದೇವಾಲಯದ ವಿಶೇಷವೆಂದರೆ ಇಡೀ ಭಾರತದಲ್ಲಿಯೇ ಹುಡುಕಿದರೂ ಸಿಗಲಾರದ ಅಪರೂಪದ ದೇವಾಲಯ ಇದಾಗಿದೆ. ಗರ್ಭಗುಡಿಯಲ್ಲಿ ಎರಡು ಶಕ್ತಿ ದೇವತೆಗಳಿರುವುದು ದೇವಾಲಯದ ಮತ್ತೊಂದು ವೈಶಿಷ್ಠವಾಗಿದೆ.
ದೇವಾಲಯದ ಸುತ್ತ ಈಶ್ವರನ 24 ಅವತಾರದ ವಿಗ್ರಹಗಳನ್ನು ನಿರ್ಮಾಣಮಾಡಲಾಗಿದೆ. ನಾಲ್ಕು ವೇದದ ಬಗ್ಗೆ ತಿಳಿಸಿಕೊಡುವ ಅತ್ಯದ್ಭುತವಾದ ನಾಲ್ಕು ಸ್ತಂಬಗಳು, ಸ್ತಂಬಗಳು ನವರಸ ಕೆತ್ತನೆಯಿಂದ ಕೂಡಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಆಗಮ ಶಾಸ್ತ್ರದ ಪ್ರಕಾರ ಷೋಡಶ ಕಲೆಯಲ್ಲಿ ಮುಖ್ಯವಾದಂತಹ 14 ಕಲೆಗಳುಳ್ಳ ದೇವಸ್ಥಾನ ಇದಾಗಿದೆ ಎಂಬುದು ವಾಸ್ತುತಜ್ಞರ ಅಭಿಪ್ರಾಯವಾಗಿದೆ. ದೇವಾಲಯದ ಕೆಲವು ಕೆತ್ತನೆಗಳಲ್ಲಿ ವೈಜ್ಞಾನಿಕತೆಯನ್ನು ಕಾಣಬಹುದಾಗಿದೆ. ಪ್ರತಿಸೋಮವಾರ, ಪ್ರದೋಶ ಪೂಜೆ, ಅಮವಾಸ್ಯೆ ಪೂಜೆ, ಸಂಕಷ್ಠಹರಗಣಪತಿ ಪೂಜೆ ಇತ್ಯಾದಿ ಪೂಜೆಗಳು ನಡೆಯುತ್ತವೆ. ಕಾಮೆಶ್ವರ ಕಾಮೇಶ್ವರಿ ವಿಗ್ರಹದ ಮುಂದೆ ಈಶ್ವರ ಲಿಂಗವಿದ್ದು ಅದರ ಎದುರು ಭಾಗದಲ್ಲಿ ಬೃಹದಾಕಾರದ ನಂದಿ ವಿಗ್ರಹವನ್ನು ಕುಳ್ಳಿರಿಸಲಾಗಿದೆ.
ನಂದಿ ವಿಗ್ರಹದ ಕತ್ತಿನಲ್ಲಿ ಗಂಟೆಯ ಸರವಿದ್ದು ಎಡ ಹಾಗೂ ಬಲ ಭಾಗದಲ್ಲಿ ನಾಲ್ಕು ಗಂಟೆಯ ಗುಂಡುಗಳಿವೆ. ಶೃಂಗೇರಿ ಜಗದ್ಗುರುಗಳು ಸೇರಿದಂತೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಒಮ್ಮೆಮ್ಮೆ ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಸಂತಾನ ಭಾಗ್ಯ ಇಲ್ಲದವರು ಈ ದೇವಾಲಕ್ಕರ ಭೇಟಿ ನೀಡಿ ಹರಿಕೆ ಕಟ್ಟಿಕೊಂಡರೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಮಾತು ಸುಳ್ಳೆಂದು ಅಲ್ಲಗಳೆಯದಂತಹ ಹಲವಾರು ನಿದರ್ಶನಗಳು ಸಿಗುತ್ತವೆ.