
ದಕ್ಷಿಣ ಕನ್ನಡ : ಲಾಕ್ ಡೌನ್ ಇದ್ದರೂ ಲೆಕ್ಕಿಸದೆ ಅದ್ದೂರಿಯಾಗಿ ಮದುವೆ ಮಾಡಿ, ಡಿಜೆ ಹಾಕಿ ಕುಣಿದು ಕುಪ್ಪಳಿಸಿದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಪೊಳಲಿ ಸಮೀಪದ ಅಮ್ಮುಂಜೆ ಎಂಬಲ್ಲಿ ಘಟನೆ ನಡೆದಿದ್ದು ಮದುವೆ ಮುನ್ನ ದಿನ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮ ಭಾರೀ ಅದ್ದೂರಿಯಾಗಿ ನಡೆದಿತ್ತು.
ಡಿಜೆ ಸೌಂಡ್ಸ್ ಮತ್ತು ಲೈಟಿಂಗ್ಸ್ ಹಾಕಿ ಯುವಕರು ಹುಚ್ಚೆದ್ದು ಕುಣಿದಿದ್ದು ಲಾಕ್ ಡೌನ್ ಕಾನೂನು ಉಲ್ಲಂಘಿಸಿದ್ದಾರೆ. ಕೊರೊನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ಮದುವೆಗಳನ್ನು ಅತ್ಯಂತ ಸರಳವಾಗಿ 50 ಮಂದಿಗೆ ಸೀಮಿತಗೊಳಿಸಿ ನಡೆಸಬೇಕು. ಅದಕ್ಕೂ ಜಿಲ್ಲಾಡಳಿತದ ಅನುಮತಿ ಪಡೆಯಬೇಕೆಂದು ಕಾನೂನಿದೆ. ಆದರೆ, ಈ ಕಾನೂನನ್ನು ಗಾಳಿಗೆ ತೂರಲಾಗಿದೆ. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಮಂದಿ ಸೇರಿದ್ದು ಸಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಸ್ಕ್ ಇಲ್ಲದೇ ಸೇರಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ತನಿಖೆಯನ್ನು ನಡೆಸುತ್ತಿದ್ದಾರೆ. ಯುವಕರ ನೃತ್ಯದ ವಿಡಿಯೋ ಲಾಕ್ ಡೌನ್ ಸಮಯದಲ್ಲಿ ನಡೆದಿರುವುದೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಒಂದು ವೇಳೆ ಲಾಕ್ ಡೌನ್ ಸಮಯದಲ್ಲಿ ನಡೆದಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.