ವಿಶೇಷ ಲೇಖನಗಳು

ಖಾಸಗಿ ಸಹಭಾಗಿತ್ವದ ಯೋಜನೆಗಳ ಯಶಸ್ಸಿಗೆ ಶಾಶ್ವತ ವ್ಯವಸ್ಥೆ ಬೇಕು : ಮೋಹನದಾಸ ಕಿಣಿ, ಕಾಪು.

ಉಡುಪಿಯು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬೇರೆಲ್ಲರಿಗಿಂತ ಮುಂದಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಖಾಸಗಿ ಸಹಭಾಗಿತ್ವ ಕೂಡ ಒಂದು. ಮೊದಲಿಗೆ ಆರೋಗ್ಯ ಕ್ಷೇತ್ರ ನೋಡುವುದಾದರೆ ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲೊಂದು ಉದಾಹರಣೆ ಇದೆ. ಅದುವೇ ಉಡುಪಿ ಸರಕಾರಿ ಆಸ್ಪತ್ರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದ್ದ ಕಾರ್ಪೋರೇಷನ್ ಬ್ಯಾಂಕಿನ ಸ್ಥಾಪಕರಾದ ಹಾಜಿ ಅಬ್ದುಲ್ಲಾ ಅವರು ದಾನವಿತ್ತ ಸ್ಥಳದಲ್ಲಿ ಅವರೇ ಸ್ಥಾಪಿಸಿದ ಮೂಲತಃ ಸರಕಾರಿ ಆಸ್ಪತ್ರೆಯಾಗಿದ್ದು, ಇತ್ತೀಚಿನವರೆಗೂ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆ. ಈಗ ಅಲ್ಲಿ ಅನಿವಾಸಿ ಭಾರತೀಯರಾದ ಶ್ರೀ ಬಿ.ಆರ್.ಶೆಟ್ಟಿಯವರ ಮಾಲೀಕತ್ವದ ಸಂಸ್ಥೆ ಅದೇ ಸ್ಥಳದಲ್ಲಿ ದೊಡ್ಡ ಆಸ್ಪತ್ರೆಯನ್ನು ಕಟ್ಟಿಸಿದೆ. ಈಗ ಅಜ್ಜರಕಾಡು ಆಸ್ಪತ್ರೆಯೆಂದೇ ಕರೆಯಲ್ಪಡುವ ಜಿಲ್ಲಾ ಆಸ್ಪತ್ರೆ ಕೂಡಾ 1961-66ರ ನಡುವೆ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಸ್ಥಿತ್ವಕ್ಕೆ ಬಂದ ಆಸ್ಪತ್ರೆಯೆಂಬುದು ಈಗಿನ ತಲೆಮಾರಿನವರಿಗೆ ಗೊತ್ತಿರಲಿಕ್ಕಿಲ್ಲ. ಇದೆಲ್ಲದರ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ. ಈಗ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯು (ಈಗ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಹೆಂಗಸರ ಮಕ್ಕಳ ಆಸ್ಪತ್ರೆ) ಮೂಲತಃ 1966ರ ವರೆಗೆ ಸರಕಾರಿ ಆಸ್ಪತ್ರೆಯಾಗಿತ್ತು. ಈ ಸ್ಥಳ ಮತ್ತು ಹಳೆಯ (ಈಗ ಕೆಡವಿರುವ) ಆಸ್ಪತ್ರೆಗಳು ದಿ.ರಾವ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಅವರ ಕೊಡುಗೆ. ಕ್ರಮೇಣ ನಗರ ವಿಸ್ತಾರಗೊಂಡಂತೆ, ಜನಸಂಖ್ಯೆ ಹೆಚ್ಚಳವಾದಂತೆ ಹೆಚ್ಚು ಸ್ಥಳಾವಕಾಶವಿರುವ ಆಸ್ಪತ್ರೆಯ ಅಗತ್ಯತೆಯನ್ನು ಮನಗಂಡ ಆಗಿನ ಉಡುಪಿಯ ಶಾಸಕರಾಗಿದ್ದ ಶ್ರೀ ಯು.ಎಸ್.ನಾಯಕ್ (ಹನುಮಾನ್ ಸಾರಿಗೆ ಸಂಸ್ಥೆಯ ಸಂಸ್ಥಾಪಕರು) ಅವರು 1961ರಲ್ಲಿ ಉಡುಪಿಗೆ ಆಗಮಿಸಿದ ಆಗಿನ ಕರ್ನಾಟಕ ಸರಕಾರದ ಆರೋಗ್ಯ ಸಚಿವರಾಗಿದ್ದ ಶ್ರೀ ಕೆ.ಕೆ.ಹೆಗ್ಡೆಯವರಿಗೆ ಒಂದು ಮನವಿ ಸಲ್ಲಿಸಿದರು. ಆಗ ಸಚಿವರು ಒಂದು ತಿಂಗಳೊಳಗೆ ಈ ಉದ್ದೇಶಕ್ಕೆ ಸಾರ್ವಜನಿಕ ದೇಣಿಗೆಯಾಗಿ ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಕೊಟ್ಟರೆ (ಗಮನಿಸಿ:1961ರ ಒಂದು ಲಕ್ಷ!) ನೂರು ಹಾಸಿಗೆಗಳ ಆಸ್ಪತ್ರೆಯನ್ನು ಮಂಜೂರು ಮಾಡುವುದಾಗಿ ಸವಾಲು ಒಡ್ಡಿದರಂತೆ. ತಕ್ಷಣ ಸ್ಪಂಧಿಸಿದ ಶ್ರೀ ನಾಯಕರು ಅದಮಾರು ಮಠಾಧೀಶರಾಗಿದ್ದ ಶ್ರೀ ಶ್ರೀ ವಿಭುಧೇಶ ಶ್ರೀಪಾದರ ಅಧ್ಯಕ್ಷತೆಯಲ್ಲಿ Health, education and social welfare society ಎಂಬ ಸಮಿತಿಯೊಂದನ್ನು ರಚಿಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀಗಳು ರೂ.10,000/- ಶಾಸಕರು ತಮ್ಮ ಒಡೆತನದ ಹನುಮಾನ್ ಸಂಸ್ಥೆಯ ವತಿಯಿಂದ ರೂ.12,500/- ಮತ್ತು ಶ್ರೀಮತಿ ಸರಸ್ವತಿ ಬಾಯಿ ರಾಜವಾಡೆಯವರು ರೂ.25001/- ಮತ್ತು ಹಲವಾರು ದಾನಿಗಳ ಕೊಡುಗೆಯನ್ನು ಒಂದೇ ತಿಂಗಳಲ್ಲಿ ಒಟ್ಟುಗೂಡಿಸಿ ರೂ.1,10,000/-ನ್ನು ಸರಕಾರಕ್ಕೆ ನೀಡಿದರು. ಸಚಿವರು ಆಶ್ವಾಸನೆ ನೀಡಿದಂತೆ ನೂರು ಹಾಸಿಗೆಗಳ ಆಸ್ಪತ್ರೆಯನ್ನು ಮಂಜೂರು ಮಾಡಿ, 5.5.1961ರಂದು ಆಗಿನ ಮುಖ್ಯಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಶಂಕುಸ್ಥಾಪನೆ ಮಾಡಿದರು. ಹಾಗೂ 14.12.1966ರಂದು ಆರೋಗ್ಯ ಸಚಿವರಾದ ಡಾ.ನಾಗಪ್ಪ ಆಳ್ವರ ಅಧ್ಯಕ್ಷತೆಯಲ್ಲಿ ಆಗಿನ ಮುಖ್ಯಮಂತ್ರಿ ಶ್ರೀ ಎಸ್.ನಿಜಲಿಂಗಪ್ಪನವರು ಉದ್ಘಾಟನೆ ಮಾಡಿದರು. ಹೀಗೆ ಎರಡು ಹಂತದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರೂಪುಗೊಂಡಿದೆ ಈ ಸರಕಾರಿ ಆಸ್ಪತ್ರೆ. ಆದರೆ 1997ರಲ್ಲಿ ಉಡುಪಿ ಜಿಲ್ಲೆಯ ರಚನೆಯಾದರೂ ಜಿಲ್ಲಾ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಇನ್ನೂ ಒದಗಿಸಿಲ್ಲ. ಇದನ್ನು ಮನಗಂಡ ಉಡುಪಿಯ ಸಾರ್ವಜನಿಕರು ಮತ್ತೊಮ್ಮೆ 2003ರಲ್ಲಿ ‘ಆಸ್ಪತ್ರೆ ಅಭಿವೃದ್ಧಿ ಸಮಿತಿ’ಯನ್ನು  ದಿ.ಅಣ್ಣಾಜಿ ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದರು. ಈ ಸಮಿತಿಯು ಆಸ್ಪತ್ರೆಗೆ ಹಲವಾರು ಸೌಲಭ್ಯಗಳನ್ನು ದೇಣಿಗೆ ರೂಪದಲ್ಲಿ ಒದಗಿಸಿದೆ. ಅಣ್ಣಾಜಿ ಬಲ್ಲಾಳರ ನಿಧನಾನಂತರ ಶ್ರೀ ರಬೀಂದ್ರ ನಾಯಕ್ ಸಮಿತಿಯ ಅಧ್ಯಕ್ಷರಾಗಿ ಮುನ್ನಡೆಸಿದ್ದೂ ಅಲ್ಲದೆ ಗಮನಾರ್ಹ ಮೊತ್ತವನ್ನು ವೈಯಕ್ತಿಕ ದೇಣಿಗೆಯಾಗಿ ನೀಡಿದರು. ಸ್ಥಳೀಯ ಶಾಸಕರು ಈ ಸಮಿತಿಯ ಪದನಿಮಿತ್ತ ಗೌರವ ಅಧ್ಯಕ್ಷರು. ಸಮಿತಿಯ ವತಿಯಿಂದ ಆರಂಭಿಸಲಾದ ಬಹುತೇಕ ವಿಭಾಗಗಳು ಈಗಲೂ ಸರಕಾರದ ಆರ್ಥಿಕ ಬೆಂಬಲದೊಂದಿಗೆ ಸಾರ್ವಜನಿಕರಿಗೆ ಉಪಯುಕ್ತ ಸೇವೆ ನೀಡುತ್ತಿವೆ.

ಇದೇ ರೀತಿ ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸಿ ನೋಡುವುದಾದರೆ ಇಂತಹುದೇ ಪ್ರಯತ್ನ ಉಡುಪಿಯ ಒಳಕಾಡು ಸರಕಾರಿ ಪ್ರೌಡಶಾಲೆಯಲ್ಲೂ ಆಗಿದೆ. ಈ ಪ್ರೌಢಶಾಲೆಯ ಹಳೆವಿದ್ಯಾರ್ಥಿ, ಈಗ ಇನ್ಫೋಸಿಸ್ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಉಪಾಧ್ಯಕ್ಷ ಶ್ರೀ ರಾಮದಾಸ್ ಕಾಮತ್ ಅವರ ಮುತುವರ್ಜಿಯಿಂದ, ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ZP Govt High School Educational Committee ರಚನೆಯಾಗಿ ಸಮಿತಿಯ ನೇತೃತ್ವದಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿ ಆಗಿದೆ. ಈ ಸಮಿತಿಗೆ ಶ್ರೀ ಕಾಮತರು ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಇತರರ ದೇಣಿಗೆಯೂ ಸೇರಿ ಈಗಲೂ ಶಾಲೆಯ ಅಭಿವೃದ್ಧಿಗೆ ಅಗತ್ಯವಿರುವ ಪೂರಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಹೀಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳು ನಿರಂತರ ಮುಂದುವರಿಯಲು ಶಾಶ್ವತ ವ್ಯವಸ್ಥೆ ಮಾಡಲಾಗಿದೆ.

ಅನಿವಾಸಿ ಭಾರತೀಯ ಉದ್ಯಮಿ, ಮೂಲತಃ ಉಡುಪಿ ಜಿಲ್ಲೆಯ ಕಾಪುವಿನ ಡಾ.ಬಿ.ಆರ್.ಶೆಟ್ಟಿಯವರು ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಹೆಂಗಸರ-ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿರುವುದು ಇತ್ತೀಚಿನ ಬೆಳವಣಿಗೆ. ಇದರಲ್ಲಿ ನೀಡಲಾಗುವ ಸೇವೆಗಳು ಸರಕಾರಿ ಆಸ್ಪತ್ರೆಯಲ್ಲಿರುವಂತೆ ಸಂಪೂರ್ಣ ಉಚಿತ. ಇದರ ಸಂಪೂರ್ಣ ನಿರ್ವಹಣೆ ಡಾ.ಶೆಟ್ಟಿಯವರ ಮಾಲೀಕತ್ವದಲ್ಲಿದೆ. ಆದರೆ ಇಂತಹ ಮಹತ್ವದ ಮತ್ತು ಆವಶ್ಯಕ ಸೇವಾ ಯೋಜನೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಮುಂದುವರಿಸಲು ಇದರ ನಿರ್ವಹಣೆಗೆ ಖಾಯಂ ವ್ಯವಸ್ಥೆಯನ್ನು ಪೂರಕ ನಿಧಿಯೊಂದಿಗೆ ಮಾಡುವ ಅಗತ್ಯವಿದೆ. ಆಡಳಿತಾತ್ಮಕ ಮತ್ತು ಆರ್ಥಿಕ ವ್ಯವಹರಣೆಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಈ ಮೇಲಿನ ಸಮಿತಿಗಳಲ್ಲಿ ಕಾರ್ಯದರ್ಶಿಯಾಗಿ ಸಂಬಂಧಿಸಿದ ಸಂಸ್ಥೆಗಳ ಪದನಿಮಿತ್ತ ಮುಖ್ಯಸ್ಥರಿದ್ದಾರೆ. ಆರಂಭಿಕ ಹಂತದಲ್ಲಿ ನಿರ್ಮಾಣ ಮತ್ತು ಪೂರಕ ವ್ಯವಸ್ಥೆ ಮಾಡಿದರೂ ಹಾಗೆ ಒದಗಿಸಿದ ಸೌಲಭ್ಯಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬೇಕಾದರೆ ಇದಕ್ಕೊಂದು ಶಾಶ್ವತ ವ್ಯವಸ್ಥೆಯ ಅಗತ್ಯವಿದೆ. ಸರಕಾರದ ಇಲಾಖೆಗಳಲ್ಲಿ ಸಂಪೂರ್ಣ ಖಾಸಗಿ ನಿರ್ವಹಣೆಗಿಂತ ಜಂಟಿ ನಿರ್ವಹಣೆ ಮತ್ತು ಇಲಾಖೆಯ ಚಟುವಟಿಕೆಗಳ ಮೇಲೆ ಸರಕಾರದ ಉಸ್ತುವಾರಿ ಮತ್ತು ಪಾರದರ್ಶಕತೆ ಹೊಂದಿರುವುದು ಹೆಚ್ಚು ಸೂಕ್ತ. ಕೇವಲ ಖಾಸಗಿ ನಿಯಂತ್ರಣವಿದ್ದರೆ ಹಾಗೆ ನಿರ್ವಹಿಸುವ ಖಾಸಗಿ ಸಂಸ್ಥೆಗಳ ಆಂತರಿಕ ಆಡಳಿತದಲ್ಲಿ ಆಗಬಹುದಾದ ಯಾವುದೇ ಸ್ಥಿತ್ಯಂತರದ ಕಾರಣಕ್ಕೆ ನಿರ್ವಾತವುಂಟಾಗಿ ಯೋಜನೆಯೇ ವಿಫಲವಾಗುವ ಅಪಾಯವಿರುತ್ತದೆ. ಇಂತಹ ಯೋಜನೆಗಳು ಯಶಸ್ವಿಯಾಗಿ ಮುಂದುವರಿಯಲು ಶಾಶ್ವತ ವ್ಯವಸ್ಥೆ, ಮುಖ್ಯವಾಗಿ ಸುಲಲಿತ ನಿರ್ವಹಣೆಗೆ ಅಗತ್ಯವಿರುವಷ್ಟು ಆವರ್ತ ನಿಧಿ ಇರಬೇಕು.

Related Articles

Leave a Reply

Your email address will not be published. Required fields are marked *

Back to top button
error: Content is protected !!