ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಜು.13 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ.
ಕುಂದಾಪುರ: ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ವರ್ತಕರು ಹಾಗೂ ಸಾರ್ವಜನಿಕರ ಹಿತ ರಕ್ಷಣೆಯ ಸಲುವಾಗಿ ಜು.13 ರಿಂದ ಜು.31 ವರೆಗೆ ಕುಂದಾಪುರ ಪುರಸಭಾ ವ್ಯಾಪ್ತಿಯ ಮೆಡಿಕಲ್, ಹಾಲು, ಹೋಟೆಲ್ ಹೊರತುಪಡಿಸಿ ಎಲ್ಲ ಅಂಗಡಿಗಳು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆಯಲಿದ್ದು, ಆ ಬಳಿಕ ಸ್ವಯಂ ಪ್ರೇರಿತ ಬಂದ್ ಗೆ ಕುಂದಾಪುರದ ಸಮಾನ ಮನಸ್ಕ ವರ್ತಕರು ತಿಳಿಸಿದ್ದಾರೆ.
ಶನಿವಾರ ಕುಂದಾಪುರದ ಶೆರೋನ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವ್ಯಾಪಾರಸ್ಥರಾದ ರಾಧಾಕೃಷ್ಣ ಅವರು ಕೊರೊನಾ ಸಮುದಾಯಿಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಸುಮಾರು 150 ಹೆಚ್ಚು ಮಂದಿ ಸಮಾನ ಮನಸ್ಕ ವ್ಯಾಪಾರಸ್ಥರು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೂ ಮೊದಲು ಎಲ್ಲ ಅಂಗಡಿಗಳಿಗೂ ಭೇಟಿ ಕೊಟ್ಟು ಮನವಿ ಮಾಡಿದ್ದು . ಸ್ವಯಂ ಪ್ರೇರಿತ ಬಂದ್‌ಗೆ ಎಲ್ಲರ ಬೆಂಬಲ ದೊರೆತಿದೆ, ಗ್ರಾಹಕರು ಕೂಡ ಇದಕ್ಕೆ ಸಹಕರಿಸಬೇಕು. ಮೆಡಿಕಲ್, ಅಧಿಕೃತ ಹಾಲು ಮಾರಾಟ ಅಂಗಡಿ, ಎಲ್ಲ ಹೋಟೆಲ್‌ಗಳು ಎಂದಿನಂತೆ ತೆರೆಯಲಿದೆ ಎಂದು ಹೇಳಿದರು
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತದೊಂದಿಗೆ ನಮ್ಮ ಹೊಣೆಗಾರಿಕೆಯೂ ಇದೆ. ಸ್ವಯಂ ಪ್ರೇರಿತ ಬಂದ ಕುರಿತಂತೆ ಸಹಾಯಕ ಆಯುಕ್ತರು ಹಾಗೂ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎನ್ನುವುದಾಗಿ ಶ್ರೀಧರ್ ಪಿ.ಎಸ್. ಹೇಳಿದರು. ಈ ಸಂದರ್ಭದಲ್ಲಿ ಜುವೆಲ್ಲರ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಶೇಟ್, ವರ್ತಕರಾದ ವಿಜಯ ಕುಮಾರ್ ಶೆಟ್ಟಿ, ಹುಸೇನ್ ಹೈಕಾಡಿ, ಅಬು ಮಹಮ್ಮದ್, ತಬ್ರೈಜ್, ಸಂತೋಷ್, ಸತೀಶ್ ಹೆಗ್ಡೆ, ಜಸ್ವಂತ್ ಸಿಂಗ್, ಸುರೇಂದ್ರ ಶೇಟ್, ಮತ್ತಿತರರು ಉಪಸ್ಥಿತರಿದ್ದರು.