ವಿಶೇಷ ಲೇಖನಗಳು

ಪತ್ರಕರ್ತರ ನಿವೃತ್ತಿ ವೇತನಕ್ಕೆ ಈಗ ವಾತರೋಗ?

ಸರಕಾರದ ಬಹುತೇಕ ಯೋಜನೆಗಳು ಆರಂಭ ಶೂರತ್ವ ಪ್ರದರ್ಶಿಸುವ ಯೋಜನೆಗಳೇ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ . ಪ್ರಾರಂಭ ಶುಭಾರಂಭವೇ ಕೊನೆಗೆ ? ಅದು ಹಳ್ಳಹಿಡಿಯುತ್ತದೆ ಇಲ್ಲವೇ ಅವ್ಯವಸ್ಥೆಯಿಂದಾಗಿ ಜನರಿಗೆ ಪ್ರಯೋಜನಕ್ಕಿಲ್ಲದಂತಾಗುತ್ತದೆ. ಇಂತಹ ಅನೇಕ ಸಂಗತಿಗಳ ಪಟ್ಟಿ ಮಾಡಬಹುದು . ಅವುಗಳಲ್ಲಿ ಒಂದು ಉದಾಹರಣೆಗೆ ತೆಗೆದು ಕೊಳ್ಳುವದಾದರೆ ಪತ್ರಕರ್ತರ ನಿವೃತ್ತಿ ವೇತನ. ಇದು ಈ ತನಕ ವ್ಯವಸ್ಥಿತವಾಗಿ ತಿಂಗಳ ಕೊನೆಯಲ್ಲಿ ತಪ್ಪದಂತೆ ಪತ್ರಕರ್ತರ ಖಾತೆಗೆ ನೇರವಾಗಿ ಜಮಾ ಆಗುತ್ತಿತ್ತು. ಅಂತಹ ಸುರಕ್ಷಿತ ವ್ಯವಸ್ಥೆ ಸರಕಾರದ ಯಾರಿಗೆ ಇಷ್ಟ ಆಗಿಲ್ಲವೋ ಏನೋ ಇಂದು ಆ ವ್ಯವಸ್ಥೆಯನ್ನು ಬದಲಿಸಿ ಇದೀಗ ಪತ್ರಕರ್ತರ ನಿವೃತ್ತಿ ವೇತನವೇ ಮೇ ತಿಂಗಳಿಂದ ನಿವೃತ್ತಿ ಹೊಂದಿದೆಯಂತೆ. ಅದಕ್ಕೆ ಕಾರಣ ವಾರ್ತಾ ಇಲಾಖೆಗೆ ಈ ವೇತನ ವ್ಯವಸ್ಥೆಗೆ ಜವಾಬ್ದಾರಿ ವಹಿಸಿಕೊಂಡಿತೋ ಆ ದಿನದಿಂದ ವೇತನಕ್ಕೆ ವಾತ ರೋಗ ಕಾಣಿಸಿಕೊಂಡಂತಾಗಿದೆ. ವಾರ್ತಾ ಇಲಾಖೆ ಅದೊಂದು ಮೊದಲಿನಿಂದಲೂ ಪತ್ರಕರ್ತರಿಗೆ ನಿಷ್ಪ್ರಯೋಜಕ ಇಲಾಖೆಯೇ ಸರಿ . ಇಲ್ಲಿ ಬೇಳೆ ಬೇಯಿಸಿ ಕೊಳ್ಳಬೇಕು ಎಂದರೆ ಸಾಮಾನ್ಯ ಬಡ ಪತ್ರಕರ್ತರಿಗೆ ಆಗದ ಮಾತು . ಯಾರು ಈ ಇಲಾಖೆಯ ಅಧಿಕಾರಿಗಳನ್ನು ಚನ್ನಾಗಿ ನೋಡಿ ಕೊಳ್ಳುತ್ತಾರೋ ಇಲ್ಲ ಅಧಿಕಾರಿಗಳಿಗೆ ಹರಕೆ ಹೊತ್ತು ಅದನ್ನು ಈಡೇರಿಸುತ್ತಾರೋ ಅಂತಹ ಪತ್ರಕರ್ತರು ಈ ಇಲಾಖೆಯ ಪ್ರಯೋಜನ ಪಡೆದು ನೆಮ್ಮದಿಯಿಂದ ಬದುಕಿದ್ದಾರೆ. ಈ ಇಲಾಖೆಯ ಬಗ್ಗೆ ಹೇಳಿದರೆ ಅಯ್ಯೋ ಒಂದೇ ಎರಡೇ ನೂರೆಂಟು ಆರೋಪ ಮಾಡಬಹುದು . ಎಲ್ಲಾ ಸರಕಾರದ ಇಲಾಖೆಯಂತೆ ಈ ಇಲಾಖೆ ಕೂಡ ಹತ್ತರಲ್ಲಿ ಹನ್ನೊಂದು !

ಸರಕಾರ ನಿಜವಾಗಿ ನಿವೃತ್ತ ಪತ್ರಕರ್ತರ ಮೇಲೆ ದಯೆ, ಅನುಕಂಪ ಹೊಂದಿದ್ದೇ ಆದರೆ ಅವರಿಗೆ ಸಿಗುವ ನಿವೃತ್ತಿ ವೇತನ ಮೊದಲಿನ ವ್ಯವಸ್ಥೆಗೆ ತರಬೇಕು . ಇಲ್ಲವೇ ವಾರ್ತಾ ಇಲಾಖೆಗೆ ಕಿವಿ ಹಿಂಡಿ ಪಾಠ ಮಾಡಿ ಮೊದಲಿನ ವ್ಯವಸ್ಥೆಗೆ ತನ್ನಿ . ಇಲ್ಲ ಅಂದರೆ ನಿವೃತ್ತಿ ಪತ್ರಕರ್ತರು ಇನ್ನೂ ಬರವಣಿಗೆಯ ವಿಷಯದಲ್ಲಿ ನಿವೃತ್ತರಾಗಿಲ್ಲ. ಅವರು ಪೆನ್ನು ಹಿಡಿದು ಸರಕಾರದ ಇತಿಹಾಸ, ಪುರಾಣ ಜಾಲಾಡಬೇಕಾದ ಸಂದರ್ಭ ಬಂದೀತು. ಮಾನ – ಮರ್ಯಾದೆ ಕಿಂಚಿತ್ತು ಸರಕಾರಕ್ಕೆ ಇದ್ದಿದ್ದೇ ನಿಜವಾದರೆ ಕೂಡಲೇ ಮೇ ತಿಂಗಳಿಂದ ಬರಬೇಕಾದ ಪತ್ರಕರ್ತರ ನಿವೃತ್ತಿ ವೇತನ ಕೂಡಲೇ ಅವರವರ ಖಾತೆಗೆ ಜಮಾ ಮಾಡಿ ಪುಣ್ಯ ಕಟ್ಟಿ ಕೊಳ್ಳಿ ಪುಣ್ಯದ ಫಲ ನಿಮಗೆ ಸಿಗುವಂತಾಲಿ. ಇಲ್ಲ ಅಂದರೆ ಮುಂದಿನ ದಿನಗಳಲ್ಲಿ ನನ್ನ ಕೆಟ್ಟ ಭಾಷೆಯ ಪ್ರಯೋಗ ಸರಕಾರದ ಮೇಲೆ ಇದ್ದೇ ಇದೆ . .
ನಾನು ನಿವೃತ್ತಿ ವೇತನ ಪಡೆಯುವ ಪತ್ರಕರ್ತ ಅಲ್ಲ. ನಿವೃತ್ತಿ ಪತ್ರಕರ್ತರ ಗೋಳು ಅವಸ್ಥೆ ನೋಡಿ ಅನುಕಂಪಕ್ಕಾಗಿ ಈ ನನ್ನ ಆಕ್ರೋಶದ ಪ್ರಾಮಾಣಿಕ ಬರಹ. ಸರಕಾರ ಇದನ್ನು ಬೇಗ ಅರ್ಥೈಸಿ ಕೊಂಡರೆ ನನ್ನ ಶ್ಲಾಘನೆ ಮತ್ತೆ ನಿಮಗಾಗಿ ಇದ್ದೇ ಇದೆ .

ಗೌರೀಶ್ ಶಾಸ್ತ್ರಿ ಹಿರಿಯ ಪತ್ರಕರ್ತರು.

Related Articles

Leave a Reply

Your email address will not be published. Required fields are marked *

Back to top button
error: Content is protected !!