ಕರಾವಳಿ

ನಗರಾಭಿವೃಧ್ದಿ ಕಾಮಗಾರಿಗಳನ್ನು ಅವಧಿಯೊಳಗೆ ಮುಕ್ತಾಯಗೊಳಿಸಿ-ಸಚಿವ ಬಸವರಾಜ್

ಉಡುಪಿ ಜುಲೈ 13 : ಜಿಲ್ಲೆಯಲ್ಲಿ ನಗರಾಭಿವೃದ್ದಿ ಇಲಾಖೆಯ ಮೂಲಕ ಕೈಗೊಂಡಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ, ಕಾಮಗಾರಿಗಳ ವಿಳಂಬಕ್ಕೆ ಆಸ್ಪದ ನೀಡಬೇಡಿ ರಾಜ್ಯದ ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ್ ಸೂಚಿಸಿದ್ದಾರೆ.

ಅವರು ಸೋಮವಾರ, ಉಡುಪಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂದಾಪುರ ಪಟ್ಟಣದ ಒಳಚರಂಡಿ ಯೋಜನೆ 2017 ಕ್ಕೆ ಮುಕ್ತಾಯಗೊಳ್ಳಬೇಕಾಗಿದ್ದು, ಇದುವರೆಗೆ ಮುಕ್ತಾಯಗೊಳ್ಳದ ಕುರಿತು ಅಸಮಧಾನ ವ್ಯಕ್ತಪಡಿಸಿದ ಸಚಿವರು, ಕಾರ್ಕಳ ಪಟ್ಟಣದ ಒಳಚರಂಡಿ ಯೋಜನೆ ಗಳನ್ನು ಶೀಘ್ರದಲ್ಲಿ ಮುಗಿಸುವಂತೆ ತಿಳಿಸಿದ ಸಚಿವರು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆಗೆ ವಿಸ್ತೃತ ಹೊಸ ಯೋಜನಾ ವರದಿ ಸಿದ್ದಪಡಿಸಿ ನೀಡುವಂತೆ ಸೂಚಿಸಿದರು.

ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದವತಿಯಿಂದ ವ್ಯವಸ್ಥಿತ ಲೇ ಔಟ್ ನಿರ್ಮಾಣ ಮಾಡುವಂತೆ ಸೂಚಿಸಿದ ಸಚಿವರು, ಹೊಸ ಯೋಜನೆಯಂತೆ ಖಾಸಗಿಯವರಿಂದ ಜಮೀನು ಪಡೆದು 50-50 ಅನುಪಾತದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಲೇ ಔಟ್ ಅಭಿವೃಧ್ದಿ ಪಡಿಸುವಂತೆ ಸೂಚಿಸಿದರು. ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದಿಂದ 11 ಕೋಟಿ ರೂ ಕೆರೆ ಅಭಿವೃದ್ದಿ ಶುಲ್ಕ ಸಂಘ್ರಹಿಸಿದ್ದು, ಈಗಾಗಲೇ 5 ಕೋಟಿ ವೆಚ್ಚದಲ್ಲಿ 19 ಕೆರೆಗಳ ಅಭಿವೃಧ್ದಿಗೆ ಕ್ರಮಕೈಗೊಂಡಿದ್ದು, 5 ಕೋಟಿ ರೂ ಗಳ ಕಾಮಗಾರಿಗೆ ಯೋಜನಾ ವರದಿ ಸಿದ್ದಪಡಿಸಿ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ಪ್ರಭಾರ ಆಯುಕ್ತ ರಾಜು ತಿಳಿಸಿದರು.
ಕ್ರಿಯಾ ಯೋಜನೆ ರೂಪಿಸುವಾದ ಸ್ಥಳೀಯ ಶಾಸಕರ ಸಲಹೆಗಳಿಗೆ ಆದ್ಯತೆ ನೀಡುವಂತೆ ತಿಳಿಸಿದ ಸಚಿವರು, ಕೆರೆ ಅಭಿವೃದ್ದಿಗೆ ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೇ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ನಗರಾಭಿವೃದ್ದಿ ಇಲಾಖೆಯ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಕೊಲ್ಲೂರಿನಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ಒಳಚರಂಡಿ ಮತ್ತು ಕುಡಿಯುವ ನೀರು ಕಾಮಗಾರಿಗಳ ಉದ್ಘಾಟನೆಗೆ ದಿನಾಂಕ ನಿಗಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗಹ್ಲೋತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!