
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಪರಿಸ್ಥಿತಿ ನಿಯಂತ್ರಣ ಸವಾಲಾಗಿದೆ. ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ.
ರಾಜ್ಯದ್ಯಂತ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ರೋಗಿಗಳಿಗೆ ಸಮರ್ಪಕವಾಗಿ ಬೆಡ್ ಗಳು ಸಿಗುತ್ತಿಲ್ಲ. ಅತ್ತ ಖಾಸಗಿ ಆಸ್ಪತ್ರೆಗಳು ಭರವಸೆ ನೀಡಿದ ಪ್ರಮಾಣ ದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಗಳನ್ನು ನೀಡಲು ಮುಂದಾಗುತ್ತಿಲ್ಲ. ಇನ್ನು ಕೆಲ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಹಣ ಸುಲಿಗೆ ಮಾಡುತ್ತಿವೆ. ಮತ್ತೊಂದೆಡೆ ಸರ್ಕಾರ ಕೋವಿಡ್ ಕಿಟ್ ಖರೀದಿ, ವೈದ್ಯಕೀಯ ಪರಿಕರಗಳ ಖರೀದಿ ವಿಚಾರದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಚಾರ ನಡೆಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಇದರೊಂದಿಗೆ ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೋರಾಟಕ್ಕೆ ಫ್ಲ್ಯಾನ್ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕ ಸಭೆ ಕರೆಯಲಾಗಿದೆ. ಸದ್ಯ ಕೊರೊನಾ ನಿರ್ವಹಣೆ, ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಮಧ್ಯಮ ವರ್ಗ ಸಂಕಷ್ಟಕ್ಕೀಡಾಗಿದ್ದು, ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಜ್ಜಾಗಿದೆ.