
ಸಿದ್ಧಿ ಸಮುದಾಯ ಇದೀಗ ಮತ್ತೆ ಸುದ್ದಿಯಲ್ಲಿರುವಂತಾಗಿದ್ದು ಶಾಂತಾರಾಮ ಸಿದ್ಧಿ ಅವರಿಂದಾಗಿ. ಅವರು ಎಂಎಲ್ ಸಿಯಾಗಿ ಆಯ್ಕೆಯಾಗುವದರ ಮೂಲಕ. ಆಯ್ಕೆ ಸಮಂಜಸ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದುದೇ ಆಗಿದೆ . ಯಾಕೆಂದರೆ ಒಂದು ಸಮುದಾಯವನ್ನು ಪ್ರತಿನಿಧಿಸುವ ಯೋಗ್ಯತೆ ಶಾಂತಾರಾಮ ಸಿದ್ಧಿಯವರಲ್ಲಿ ಇದೆ . ಅವರು ವನ ಪ್ರಪಂಚದಿಂದ ನವ ಪ್ರಪಂಚಕ್ಕೆ ಬಂದಿದ್ದೇ ಒಂದು ಸಾಧನೆಯಾಗಿದೆ. ಏಳನೇ ತರಗತಿಯ (ಮುಲ್ಕಿ )ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅಂದಿನಿಂದ ಅವರು ಹೊರ ಪ್ರಪಂಚಕ್ಕೆ ಪರಿಚಯ ಆದವರು. ಅಲ್ಲದೇ ಆ ಸಮುದಾಯದಿಂದ ಪ್ರಪ್ರಥಮವಾಗಿ ಪದವೀಧರರಾಗಿಯೂ ಸಾಕಷ್ಟು ಪ್ರಶಂಸೆ , ಪ್ರಚಾರ ಅವರದ್ದಾಯಿತು. ವಿದ್ಯಾರ್ಥಿ ಜೀವನದಲ್ಲಿ ಆರ್ ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡ ಅವರು ಗಾಢವಾಗಿ ರಾಷ್ಟ್ರ ಪ್ರೇಮ ಬೆಳೆಸಿಕೊಂಡವರು. ವನವಾಸಿ ಸಿದ್ದಿ ಜನರನ್ನು ಆಸೆ ಆಮಿಷ ತೋರಿಸಿ ಧರ್ಮಾಂತರಗೊಳಿಸುತ್ತಿದ್ದುದ ಗಮನಿಸಿ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಅವರ ಸಮಾಜಕ್ಕೆ ಶಿಕ್ಷಣದ ಅಗತ್ಯ ಕಂಡು ಸಮುದಾಯದ ಜನರನ್ನು ಪ್ರೇರೇಪಿಸಿದರು. ಇನ್ನಿತರ ಮುಖ್ಯವಾಹಿನಿಗೆ ತರುವ ಬಗ್ಗೆ ಪಾಠ ತರಬೇತಿ ನೀಡಿ ಕಾಡಿನಿಂದ ನಾಡಿಗೆ ಪರಿಚಯಿಸುವ ಪ್ರಯತ್ನ ಮಾಡಿದರು .
ಸಿದ್ಧಿ ಜನಾಂಗದವರು ಮೂಲತಃ ಆಘ್ನೇಯ ಆಫ್ರಿಕಾದವರಂತೆ. ಅಲ್ಲಿ ‘ಸಿದ್ಧಿ’ ಎಂಬ ಪದಕ್ಕೆ ಈ ದೇಶದ ‘ ಸಾಹೇಬ’ ಎಂಬ ಗೌರವ ನೀಡುವ ಅರ್ಥ ಇದೆಯಂತೆ. ಆದರೂ ಅವರನ್ನು ಹಿಡಿದು ಇಲ್ಲಿಗೆ ಗುಲಾಮಗಿರಿಗಾಗಿ ಪೋರ್ತುಗೀಜರು ಹೇಗೆ ತಂದರೋ ?
ಭಾರತಕ್ಕೆ ಪೋರ್ತುಗೀಜರ ಸಂಗಡವೇ ಬಂದಿದ್ದು ಎಂದು ಹೇಳಲಾಗಿದೆ . ನಂತರ ಸಿದ್ದಿಗಳು ವಾಸ್ತವ್ಯ ಸ್ಥಳಕ್ಕಾಗಿ ಅರಸುತ್ತಾ ಕಾಡಿಗೆ ತೆರಳಿದರು. ಅಲ್ಲಿಯೇ ನೆಲಸಿ ಆ ಕಠಿಣ ವಾತಾವರಣಕ್ಕೆ ಒಗ್ಗಿ ಹೋದರು. ಹೊರಪ್ರಪಂಚದ ಅರಿವು ಅವರಿಗೆ ಮತ್ತೆ ಎಂದೂ ಆಗಲೇ ಇಲ್ಲ. ಹೀಗಾಗಿ ಅವರು ಅರಣ್ಯದ ಸಂಪೂರ್ಣ ಮಾಹಿತಿ ನೀಡುವಷ್ಟು ತಜ್ಞತೆ ಹೊಂದಿರುವವರು. ಪ್ರಾಣಿ, ಪಕ್ಷಿಗಳ, ಔಷಧ ಸಸ್ಯಗಳ ಬಗ್ಗೆ ನಿಖರವಾದ ಮಾಹಿತಿ ಅವರಿಗೆ ಇದೆ . ಎಷ್ಟೋ ಆಯುರ್ವೇದ ವೈದ್ಯರು ಇಂದಿಗೂ ಔಷಧ ಸಸ್ಯಕ್ಕಾಗಿ ಅವರ ಅವಲಂಬಿಸಿದ್ದಿದೆ.

ಇನ್ನೂ ಭಾಷೆ ಇತ್ತೀಚೆಗಿನ ದಿನಗಳಲ್ಲಿ ಅಂದರೆ ಮುಖ್ಯವಾಹಿನಿಗೆ ಬಂದಾಗ ಕನ್ನಡ ಮಾತನಾಡುವದ ಕಲಿತರು. ಆಡು ಭಾಷೆಯಲ್ಲಿ ಕೊಂಕಣಿ , ಮರಾಠಿ ಇತ್ಯಾದಿ ಮಿಕ್ಸಿಂಗ್ ಅವರದ್ದೇ ಆದ ಪ್ರತ್ಯೇಕ ಭಾಷೆ .
ಆ ಭಾಷೆಯಲ್ಲಿಯೇ ಹಾಡು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತದೆ. ಮನೆಯ ಹಿರಿಯ ಜೀವಗಳೇ ಇವರಿಗೆ ದೇವರ ಸಮಾನರು. ಅವರು ಸತ್ತ ನಂತರವೂ ತಮ್ಮ ಜೊತೆಗೆ ಇರುತ್ತಾರೆ ಎಂಬ ನಂಬಿಕೆ ಅವರದು . ಹೀಗಾಗಿ ವರ್ಷದ ಎರಡು ಸಂದರ್ಭದಲ್ಲಿ ಅವರ ಅದ್ಧೂರಿ ಪೂಜೋತ್ಸವ ನಡೆಯುತ್ತದೆ . ಸಾಮಾನ್ಯವಾಗಿ ದೀಪಾವಳಿ ಮತ್ತು ಹೋಲಿ ಹಬ್ಬದ ದಿನ. ಇನ್ನು ಈ ಜನಾಂಗದವರು ಆಯಾ ಪ್ರದೇಶದಲ್ಲಿ ಬೇರೆ ಬೇರೆ ಧರ್ಮ ಸ್ವೀಕರಿಸಿದವರು. ದೇಶದ ಅನೇಕ ರಾಜ್ಯಗಳಲ್ಲಿ ಇವರ ನೆಲೆ ಇದೆ . ಕರ್ನಾಟಕದ ಹಳಿಯಾಳ, ಮುಂಡಗೋಡ ನಲ್ಲಿ ಕ್ರಿಶ್ಚಿಯನ್, ಇಸ್ಲಾಂ ಧರ್ಮದವರಾದರೆ ಯಲ್ಲಾಪುರ, ದಾಂಡೇಲಿ ಇತ್ಯಾದಿ ಕಡೆಗಳಲ್ಲಿ ಹಿಂದು ಧರ್ಮಕ್ಕೆ ಸೇರಿದವರು . ಸಿದ್ಧಿ ಜನಾಂಗಕ್ಕೆ ‘ ಅಬ್ಷಿ’ ಎಂಬ ಇನ್ನೊಂದು ಪದ ಬಳಕೆ ಕೂಡಾ ಇದೆ . ಇವರಲ್ಲಿ ಸಮುದಾಯದಲ್ಲಿ ಮತ್ತೆ ಪಂಗಡಗಳಿಲ್ಲ. ಮದುವೆ ವಿಷಯದಲ್ಲಿ ಯಾರು ಯಾರನ್ನೇ ಆಯ್ಕೆ ಮಾಡಿಕೊಂಡು ದಂಪತಿಗಳಾಗಬಹುದು. ಧರ್ಮದ ಕಟ್ಟು ಪಾಡುಗಳೂ ಇಲ್ಲ. ಅರಣ್ಯ ಪ್ರದೇಶದಲ್ಲಿ ಅತ್ಯುತ್ತಮ ಬೇಸಾಯ ಮಾಡುವ ಇವರು ತುಂಬಾ ಶ್ರಮ ಜೀವಿಗಳು . ಆಯಾಸವನ್ನೇ ಅರಿಯದವರು. ಗಡ್ಡೆ ಗೆಣಸು , ಪ್ರಾಣಿಗಳ ಮಾಂಸವೇ ಇವರ ಆಹಾರ ಸೇವನೆ . ಸಾಂಸ್ಕೃತಿಕ ಉತ್ಸವ ಆಗಾಗ ಏರ್ಪಡಿಸಿ ಬೆಳಗಾಗುವ ತನಕ ನೃತ್ಯ ಮಾಡುವದೂ ಇದೆಯಂತೆ. ಆಫ್ರಿಕಾದ ‘ ಪುಗ್ಡಿ’ ವಾದ್ಯ ಪರಿಕರಗಳಿಂದ ಹಾಡಿನ ಲಯಕ್ಕೆ ಹಾಕುವ ಅವರ ಹೆಜ್ಜೆ ಮನಮೋಹಕವಾಗಿದೆ. ಇತ್ತೀಚೆಗೆ ಹಲವಾರು ಸಂಘ ಸಂಸ್ಥೆಗಳು ಆ ಜನಾಂಗದ ಕುರಿತು ಅಧ್ಯಯನ ನಡೆಸಿದ್ದೂ ಅಲ್ಲದೇ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿರುವದರಿಂದ ಇಂದು ಆಧುನಿಕ ಸಮಾಜದಲ್ಲಿ ಬೆರೆತು ನಿಟ್ಟುಸಿರು ಬಿಡುವಂತಾಗಿದೆ. ( ಸಶೇಷ )
ಗೌರೀಶ್ ಶಾಸ್ತ್ರಿ ಹಿರಿಯ ಪತ್ರಕರ್ತರು. +919483005204