ಕರಾವಳಿ
ಕೊರೋನ ಸೋಂಕಿತರ ಶವಸಂಸ್ಕಾರಕ್ಕೆ ವಿರುದ್ಧ ಮಾಡಿದರೆ ಕಠಿಣ ಕ್ರಮ – ಜಿ. ಜಗದೀಶ್

ಉಡುಪಿ, ಜು.24: ಕೊರೋನ ಸೋಂಕಿತರ ಶವ ಸಂಸ್ಕಾರವನ್ನು ಸರಕಾರದ ನಿರ್ದೇಶನದ ಅನುಸಾರವಾಗಿ ನಡೆಸಲಾಗುತ್ತಿದ್ದು, ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಸೋಂಕಿತರ ಶವಸಂಸ್ಕಾರಕ್ಕೆ ಯಾವುದೇ ರೀತಿಯ ವಿರೋಧ ಮಾಡಬಾರದು. ಒಂದು ವೇಳೆ ವಿರೋಧ ಒಡ್ಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಸೋಂಕಿತರ ಸಾವಿನ ಸಂಖ್ಯೆಯಲ್ಲೂ ಸಹ ಗಣನೀಯ ಏರಿಕೆ ಕಾಣುತ್ತಿದೆ. ಸೋಂಕಿತರು ಮೃತಪಟ್ಟಲ್ಲಿ ಅವರ ಶವ ಸಂಸ್ಕಾರಕ್ಕೆ ಸರಕಾರ ದಿಂದ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ. ಅದರಂತೆ ಶವಸಂಸ್ಕಾರ ನಡೆಸಲಾಗುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಶವಸಂಸ್ಕಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾಧನೀಯ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.