
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವು ಘಟನೆಗಳು ಕರಾಳ ನೆನಪುಗಳಾಗಿ ಉಳಿದುಕೊಂಡಿವೆ. ಅ ರೀತಿ ಜುಲೈ 25, 1994 ರಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಕನ್ನಡದ ಪ್ರತಿಭಾವಂತ ನಟ ಸುನೀಲ್ ಮರೆಯಾದರು. ನಟ ಸುನೀಲ್ ವಿಧಿವಶರಾಗಿ ಇಂದಿಗೆ 25 ವರ್ಷಗಳು ಕಳೆದಿವೆ. 25 ವರ್ಷಗಳ ಹಿಂದೆ ಇದೇ ದಿನ ಚಿತ್ರದುರ್ಗದ ಬಳಿ ಕಾರಿನಲ್ಲಿ ನಟ ಸುನೀಲ್, ನಟಿ ಮಾಲಾಶ್ರೀ ಹಾಗೂ ಸುನೀಲ್ ಸಹೋದರ ಸಚ್ಚಿನ್ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರ ಕಾರಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು.
ಚಿತ್ರದುರ್ಗದಿಂದ 13 ಕಿಲೋ ಮೀಟರ್ ದೂರದಲ್ಲಿ ಇರುವ ಮಾದನಾಯಕನ ಹಳ್ಳಿಯಲ್ಲಿ ಈ ಅವಘಾತ ನಡೆದಿತ್ತು. ಘಟನೆಯಲ್ಲಿ ಕಾರಿನ ಚಾಲಕ ಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟರು. ಎರಡು ಕಾಲುಗಳನ್ನು ಬಲವಾದ ಹೊಡೆತ ಬಿದ್ದಿತ್ತು, ಸುನೀಲ್ ಚಿತ್ರದುರ್ಗದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಟಿ ಮಾಲಾಶ್ರೀ ತಲೆಗೆ ಪೆಟ್ಟು ಬಿದ್ದು, ಅವರು ಹಾಗೂ ಸುನೀಲ್ ಸಹೋದರ ಅಪಾಯದಿಂದ ಪಾರಾದರು. ಇಂತಹ ಕರಾಳ ಘಟನೆ ನಡೆದು ಈಗ 25 ವರ್ಷಗಳು ಕಳೆದಿವೆ. ನಟ ಸುನೀಲ್ ಕನ್ನಡದ ಸುಂದರ ನಟರಾಗಿದ್ದರು. ‘ದ್ರಾಕ್ಷಾಯಿಣಿ’ ‘ಬೆಳ್ಳಿ ಕಾಲುಂಗುರ, ‘ಮೆಚ್ಚಿದ ಮದುಮಗ’, ‘ಶೃತಿ’, ‘ಶಾಂಭವಿ’, ‘ನಗರದಲ್ಲಿ ನಾಯಕರು’ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.
ಮೂಲತಃ ಉಡುಪಿಯವರಾಗಿದ್ದ ಸುನೀಲ್ 1991 ರಲ್ಲಿ ಚಿತ್ರರಂಗಕ್ಕೆ ಬಂದಿದ್ದರು. ಬರೀ ಮೂರೇ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದರು. ಇಂತಹ ಒಳ್ಳೆಯ ನಟ ಕೇವಲ 30 ವರ್ಷಕ್ಕೆ ತಮ್ಮ ಬದುಕಿನ ವಿದಾಯ ಹೇಳಿದರು.