
ಮಂಗಳೂರು ಆ.13: ನಾಳೆ ಆಗಸ್ಟ್ 15 ಸ್ವಾತಂತ್ರ ದಿನಾಚರಣೆ. ಎಲ್ಲೆಲ್ಲೂ ರಾಷ್ಟ್ರ ಧ್ವಜ ಹಾರಾಡಿ ರಾರಾಜಿಸಲಿದೆ. ಹೀಗಿರುವಾಗ ರಾಷ್ಟ್ರ ಧ್ವಜ ಸಂಹಿತೆಯನ್ನು ಉಲ್ಲಂಘಿಸಿ ಯಾರಾದರು ನಿರ್ದಿಷ್ಟ ಸಾಮಗ್ರಿ ಹಾಗೂ ನಿರ್ದಿಷ್ಟ ಅಳತೆ ಇಲ್ಲದ ಧ್ವಜವನ್ನು ಖರೀದಿ, ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ತಿಳಿಸಿದ್ದಾರೆ.
ರಾಷ್ಟ್ರ ಧ್ವಜ ಸಂಹಿತೆಯನ್ನು ಉಲ್ಲೇಖಿಸಿದಂತೆ ನಿರ್ದಿಷ್ಟ ವಸ್ತುವಿನಿಂದ ಮತ್ತು ನಿರ್ದಿಷ್ಟ ಅಳತೆಯಲ್ಲಿ ದ್ವಜ ಇರಬೇಕು. ಈ ಕೊರೊನಾ ಬಂದ ನಂತರ ಮಾಸ್ಕ್ ಧರಿಸಿ ಓಡಾಡುವುದು ಅನಿವಾರ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಂಪನಿಗಳು ಮಾಸ್ಕ್ ರೀತಿಯ ರಾಷ್ಟ್ರ ಧ್ವಜವನ್ನು ಮಾರುಕಟ್ಟೆಗೆ ತಂದಿದೆ. ಈ ರೀತಿಯ ವಿಭಿನ್ನ ಅಳತೆಯ ರಾಷ್ಟ್ರ ಧ್ವಜಗಳನ್ನು ಮಾಸ್ಕ್ ಮಾದರಿಯಲ್ಲಿ ಹಾಗೂ ಧರಿಸುವ ಉಡುಪುಗಳ ರೀತಿಯಲ್ಲಿ ಮಾರಾಟ ಮಾಡಬಾರದು ಹಾಗೂ ಸಾರ್ವಜನಿಕರು ಅಂತಹ ಧರಿಸಬಹುದಾದ ರಾಷ್ಟ್ರಧ್ವಜಗಳನ್ನು ಯಾವುದೇ ಸಂದರ್ಭದಲ್ಲಿ ಖರೀದಿಸಿ ಉಪಯೋಗಿಸಬಾರದು ಎಂದು ಅವರು ಹೇಳಿದ್ದಾರೆ