ಆರೋಗ್ಯ

ನಾಚಿಕೆಮುಳ್ಳು ಉಪಯೋಗ ! :ಆರ್ . ಟಿ. ಭಟ್ಟ, ಬಗ್ಗೋಣ

ಕನ್ನಡ: ನಾಚಿಕೆಗಿಡ, ನಾಚಿಕೆಮುಳ್ಳು, ಮುಟ್ಟಿದರೆ ಮುನಿ,
ಸಂಸ್ಕ್ರತ: ಲಜ್ಜಾಲೂ, ಅಜಾಲಿಕಾಲಿಕಾ, ಇಂಗ್ಲೀಷ: ಸೆನ್ಸಿಟಿವ್‍ಪ್ಲಾಂಟ್,
ಹಿಂದಿ: ಲಜಾಲೂ, ತ ಮಿಳು: ತೋಟಲ್ಪಾಡಿ, ತೆಲಗು: ಮುನುಗುಡ ಮಾರಮ
ವೈಜ್ಞಾನಿಕ ಸಸ್ಯನಾಮ: Mimosa pudica

” ಹಸುವು ಮುಟ್ಟದ ತಿನಿಸು
ಅದಕೆ ಮುಟ್ಟಿದರೆ ಮುಸಿಸು
ಬಳಸಿದರೆ ಮೃದು ಮನಸು
ವಿವಿಧ ರೋಗಕೆ ಸಿಂಹಗನಸು.
ನಿನ್ನ ಮುಳ್ಳಿನಿಂದಾದ ಗಾಯ
ನಿನ್ನ ಎಲೆಯಿಂದಲೇ ಮಾಯ
ನಾಚಿಕೆಮುಳ್ಳುಗಿಡವೇ ನಾಚಿಕೆಯ
ಬಿಟ್ಟೇಳು ನಿನ್ನ ಧನ್ವಂತರಿಯ
ಗುಣವೇನೆಂದು ಸಾರಿ ಹೇಳು “.

ಚಿರಪರಿಚಿತವಾಗಿರುವ ನೈಸರ್ಗಿಕ ಸಸ್ಯಗಳಲ್ಲಿ ಒಂದಾಗಿರುವ ರಸ್ತೆಯ ಬದಿಗಳಲ್ಲಿ, ಹಾಳುಬಿದ್ದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ತಂಪಿರುವ ಎಲ್ಲಾ ಪ್ರದೇಶಗಳಲ್ಲಿ ಕುರುಚಲು ಗಿಡದಂತೆ ನೆಲದ ಮೇಲೆ ಹರಡಿಕೊಂಡು ಹುಲ್ಲಿನೊಂದಿಗೆ ಬೆಳೆದಿರುವ ಈ ನಾಚಿಕೆ ಮುಳ್ಳಿನ ಗಿಡವನ್ನು ಮುಳ್ಳು ಸಸ್ಯವೆಂದು ಪರಿಘಣಿಸಿ, ಇದೊಂದು ಅಪೂರ್ವವಾದ ಔಷಧಿ ಸಸ್ಯವೆಂದು ಅರಿಯದೇ ಅದರ ಪ್ರಯೋಜನವನ್ನು ನಮ್ಮ ಆರೋಗ್ಯ ರಕ್ಷಣೆಗಾಗಿ ಬಳಸಿಕೊಳ್ಳದೇ ಇದ್ದಲ್ಲಿ ಕಂಕುಳಲ್ಲಿ ಮಗುವನಿಟ್ಟುಕೊಂಡು ಮಗುವಿಗಾಗಿ ಮೈಲಾರ ಸುತ್ತಿದಂತಾದೀತು. ಮುಟ್ಟಿದರೆ ಇದರ ಎಲೆ ಮುದುಡಿಕೊಳ್ಳುವದರಿಂದ ಮುಟ್ಟಿದರೆ ಮುನಿ, ನಾಚಿಕೆ ಗಿಡ ಹಾಗೂ ಕಾಂಡದ ಮೇಲೆ ಮೊನಚಾದ ಮುಳ್ಳುಗಳಿರುವದರಿಂದ ನಾಚಿಕೆ ಮುಳ್ಳು ಎಂದು ಕರೆಯುವರು. ಸ್ಪರ್ಶಮಾತ್ರದಿಂದ ಇಲ್ಲವೇ ನೆರಳು ಬಿದ್ದ ಮಾತ್ರಕ್ಕೆ ಇದರ ಎಲೆಗಳು ಮುದುರಿಕೊಂಡು ಲಜ್ಜೆಯನ್ನು ತೋರ್ಪಡಿಸುವದರಿಂದ ಸಂಸ್ಕ್ರತದಲ್ಲಿ ಲಜ್ಜಾಲೂ ಎಂದು ಹೇಳಲಾಗಿದೆ.

ರಕ್ತಾತಿಸಾರ, ಗಾಯ, ಕಜ್ಜಿ, ಮೂತ್ರಕಲ್ಲು, ಅಂಡವೃದ್ದಿ, ಮುಟ್ಟಿನತೊಂದರೆ, ಶೀತಲ, ಕಫ, ಪಿತ್ತ, ರಕ್ತಪಿತ್ತ, ಅತಿಸಾರ, ಯೋನಿವಿಕಾರ, ದಾಹ, ಕಾಸ, ಕುಷ್ಠ, ರಕ್ತದೋಷ ಇತ್ಯಾದಿ ಅನೇಕ ರೋಗಗಳನ್ನು ಗುಣಪಡಿಸುವ ಔಷಧೀ ಗುಣವನ್ನು ಪಡೆದಿದೆ. ಆದರೆ ಇದು ಬಹಳ ತೀಕ್ಷ್ಣವಾಗಿರುವದರಿಂದ ಪ್ರಮಾಣ ಮೀರಿದ ಸೇವನೆ ಹಾನಿಕರ ಎಂಬುದನ್ನು ಮರೆಯ ಕೂಡದು. ಆಯುರ್ವೇದ ನಾಟೀ ವೈದ್ಯದಲ್ಲಿ ಪ್ರಚಲಿತವಿರುವ ಇದರ ಔಷಧಿ ಗುಣ ಹೀಗಿದೆ:

ನಾಚಿಕೆ ಮುಳ್ಳಿನ ಗಿಡದ ಸುಮಾರು 20ಗ್ರಾಂನಷ್ಟು ಬೇರನ್ನು ಜಜ್ಜಿ ಸೇರು ನೀರಿನಲ್ಲಿ ಕುದಿಸಿ ಬತ್ತಿಸಿ ಶೋಧಿಸಿದ ಕಷಾಯ 20ಗ್ರಾಂನಷ್ಟು ದಿನಕ್ಕೊಮ್ಮೆ ಒಂದುವಾರ ಸೇವಿಸುವದರಿಂದ ರಕ್ತ ಶುದ್ಧಿಯಾಗುವದು ಹಾಗೂ ಕಜ್ಜಿ, ತುರಿಕೆ ಚರ್ಮರೋಗ ನಿವಾರಣೆಯಾಗುವದು.

ಇದರ ಎಲೆಯನ್ನು ನೀರಿನಲ್ಲಿ ಅರೆದು ಗಂಧಮಾಡಿ ಲೇಪಿಸಿಕೊಳ್ಳುವದರಿಂದ ಗಾಯದಿಂದಾಗುವ ರಕ್ತಸ್ರಾವ ಕೂಡಲೇ ಹತೋಟಿಗೆ ಬರುವದು ಹಾಗೂ ಗಾಯ ಬೇಗನೆ ಮಾಯುವದು.

ನಾಚಿಕೆ ಮುಳ್ಳಿನ ಗಿಡವನ್ನು ಬೇರುಸಹಿತ ಕಿತ್ತು ನೀರಿನಲ್ಲಿ ಅರೆದು ನೆತ್ತಿಗೆ ಲೇಪನ ಮಾಡುವದರಿಂದ ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದರೂ ಬಂದಾಗುತ್ತದೆ.

ನಾಚಿಕೆ ಮುಳ್ಳಿನ ಗಿಡವನ್ನು ಬೇರುಸಹಿತ ಕಿತ್ತು ನೀರಿನಲ್ಲಿ ಅರೆದು ಒಂದು ಚಮಚ ರಸತೆಗೆದು ಜೇನುತುಪ್ಪದಲ್ಲಿ ಸೇವಿಸುವದರಿಂದ ಮೂತ್ರಕೃಚ್ಛ, ಮೂತ್ರರೋಗ ನಿವಾರಣೆಯಾಗುವದು.

ನಾಚಿಕೆ ಮುಳ್ಳಿನ ಗಿಡವನ್ನು ಬೇರುಸಹಿತ ಕಿತ್ತು ನೀರಿನಲ್ಲಿ ನುಣ್ಣಗೆ ಅರೆದು ಗಂಧಮಾಡಿ ಮಲದ್ವಾರಕ್ಕೆ ಲೇಪಿಸಿಕೊಳ್ಳುವದರಿಂದ ಮಲದ್ವಾರವು ಚಂಡಿನಂತೆ ಹೊರಗೆ ಬರುವದು ನಿಲ್ಲುವದು.

ನೀರಿನಲ್ಲಿ ನಾಚಿಕೆ ಮುಳ್ಳಿನ ಗಿಡದ ಬೇರು ಜಜ್ಜಿ ಹಾಕಿ ಅದಕ್ಕೆ ಜೀರಿಗೆ ಪುಡಿ ಸೇರಿಸಿ ಬತ್ತಿಸಿ ಕಷಾಯಮಾಡಿ ಒಂದುವಾರ ದೇಹಪ್ರಕೃತಿಗನುಸರಿಸಿ ಸೇವಿಸುವದರಿಂದ ಕಸುವು ರೋಗ ಹಿಡಿತಕ್ಕೆ ಬರುವದು.

ನಾಚಿಕೆ ಮುಳ್ಳಿನ ಗಿಡವನ್ನು ಬೇರುಸಹಿತ ಕಿತ್ತು ನೀರಿನಲ್ಲಿ ನುಣ್ಣಗೆ ಅರೆದು ಗಂಧಮಾಡಿ ಅಂಡಗಳಿಗೆ ಲೇಪಿಸಿಕೊಳ್ಳುವದರಿಂದ ಅಂಡವೃದ್ಧಿ, ಅಂಡಬಾವು ಹಾಗೂ ಇತರ ತರದ ಬಾವುಗಳು ಶಮನವಾಗುವವು.

ಇದರ ಸಮೂಲವನ್ನು ಜಜ್ಜಿ ರಸತೆಗೆದು ಸೋಸಿ ಚಮಚ ರಸಕ್ಕೆ ಅಷ್ಟೇ ಜೇನುತುಪ್ಪ ಸೇರಿಸಿ ಕುಡಿಯುವದರಿಂದ ಹಾಗೂ ಯೋನಿಗೆ ಎಲೆ ರಸ ಲೇಪಿಸಿಕೊಳ್ಳುವದರಿಂದ ಮಾಸಿಕರಕ್ತಸ್ರಾವ ಹಾಗೂ ಯೋನಿರೋಗ ನಿಯಂತ್ರಣಕ್ಕೆ ಬರುವದು.

ಇದರ ಎಲೆರಸದಲ್ಲಿ ಮಜ್ಜಿಗೆ ಸೇರಿಸಿ ಅದರಲ್ಲಿ ಕೊಡಸಿಗನ ಗಿಡದ ತೊಗಟೆಯನ್ನು ತೇಯ್ದು ಗಂಧಮಾಡಿ ಸೇವಿಸುವದರಿಂದ ಆಮಶಂಕೆ, ರಕ್ತಬೇಧಿ ನಿವಾರಣೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!