ವಿಶೇಷ ಲೇಖನಗಳು

ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ಮಾತ್ರ ಕೊಡಲಿಲ್ಲ !

ಮೊನ್ನೆ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಯಾವುದೋ ಹಳ್ಳಿಯ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಒಬ್ಬ ಹುಡುಗ ಮಾಡಿದ್ಧ ಭಾಷಣವನ್ನು ಕೇಳಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದ ಈ ಭಾಷಣದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು, ಬ್ರಿಟಿಷರು 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ಮಾತ್ರ ಕೊಡಲಿಲ್ಲ, ಅದಕ್ಕಿಂತ ಹೆಚ್ಚಿನದನ್ನು ಕೊಟ್ಟಿದ್ದಾರೆಂಬುದನ್ನು ಎಳೆಯೆಳೆಯಾಗಿ ಪ್ರಸ್ತುತ ಪಡಿಸಿದ ರೀತಿ. ಅಂದರೆ ಬ್ರಿಟಿಷರು ಹೆಚ್ಚಿನದನ್ನು ನೀಡುವ ಮೂಲಕ ಉಪಕಾರವನ್ನು ಮಾಡಿದರೆಂದು ಅರ್ಥ ಮಾಡಿಕೊಂಡರೆ ಅದು ನಮ್ಮ ಭ್ರಮೆ, ಅಷ್ಟೇ. ವಿಷಯ ಬೇರೆಯೇ ಇದೆ‌.

ಈ ವಿಷಯದ ಬಗ್ಗೆ ಚರ್ಚಿಸುವುದಕ್ಕೂ ಮೊದಲು ಸ್ವಾತಂತ್ರ್ಯ ಪೂರ್ವದ ಸ್ಥಿತಿಗತಿಗಳ ಬಗ್ಗೆ, ಸ್ವಾತಂತ್ರ್ಯ ಹೋರಾಟದ ಕೆಲವು ಮಜಲುಗಳನ್ನು ನೋಡಬೇಕು. ಬ್ರಿಟಿಷರು ಭಾರತಕ್ಕೆ ಬರುವಾಗ ವ್ಯಾಪಾರಿಗಳ ರೂಪದಲ್ಲಿ ಬಂದು ಕ್ರಮೇಣ ಇಲ್ಲಿ ನೆಲೆಯೂರಿದ್ದವರು. ಬಳಿಕ ನಮ್ಮ ದೇಶದಲ್ಲಿ ಪ್ರಾಕೃತಿಕವಾಗಿ ಸಿಗುತ್ತಿದ್ದ ಕಚ್ಚಾ ಸಾಮಗ್ರಿಗಳನ್ನು ತಮ್ಮ ದೇಶಕ್ಕೆ ಸಾಗಿಸಿ, ಸಿದ್ಧಪಡಿಸಿದ ಉತ್ಪನ್ನಗಳನ್ನು ದೇಶದೊಳಗೆ ತಂದು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು. ಮಾತ್ರವಲ್ಲದೆ ಸೂರ್ಯ ಮುಳುಗದ ಸಾಮ್ರಾಜ್ಯವೆಂಬ ಖ್ಯಾತಿಗೆ ಪಾತ್ರವಾಗಿದ್ದ ಅವರು ತನ್ನ ಆಡಳಿತದಲ್ಲಿದ್ದ ಬೇರೆ ಬೇರೆ ದೇಶಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಿ, ಎಲ್ಲಾ ದೇಶಗಳು ಪರಸ್ಪರ ಅವಲಂಬನೆಗೆ ಒಳಪಡುವಂತಹ ಸ್ಥಿತಿಯನ್ನು ತಂದಿಟ್ಟರು. ಇನ್ನೊಂದೆಡೆ ಸದ್ದಿಲ್ಲದೆ ಆಡಳಿತ ವ್ಯವಸ್ಥೆಯಲ್ಲಿ ಕೈಯಾಡಿಸತೊಡಗಿದರು. ದೇಶಾದ್ಯಂತ ಹರಡಿಕೊಂಡಿದ್ದ ರಾಜ ಮಹಾರಾಜರ, ಸಂಸ್ಥಾನಗಳ ನಡುವೆ ಜಗಳ ತಂದಿಟ್ಟು, ಒಬ್ಬರನ್ನು ಇನ್ನೊಬ್ಬರೆದುರು ಎತ್ತಿ ಕಟ್ಟಿ, ಒಡೆದು ಆಳುವ ನೀತಿಯನ್ನು ಅನುಸರಿಸಿ ದೇಶದಾದ್ಯಂತ ತಮ್ಮ ಪ್ರಾಬಲ್ಯವನ್ನು ಮೆರೆದರು. ಇದರ ಅರಿವಾಗುವಷ್ಟರಲ್ಲಿ ಇಡೀ ದೇಶವು ಅವರ ಅಕ್ಟೋಪಸ್ ಹಿಡಿತದಲ್ಲಿ ಸಿಲುಕಿಯಾಗಿತ್ತು. ಕ್ರಮೇಣ ಸ್ವಾತಂತ್ರ್ಯದ ಬೆಲೆ ಅರಿತುಕೊಂಡ ದೇಶಭಕ್ತರಿಂದ ಸ್ವಾತಂತ್ರ್ಯ ಚಳುವಳಿಯ ಕಾವು ಏರತೊಡಗಿತು. ಅಂತಿಮವಾಗಿ ಬ್ರಿಟಿಷರು ದೇಶಕ್ಕೆ ಸ್ವಾತಂತ್ರ್ಯ ನೀಡುವ ನಿರ್ಧಾರ ಮಾಡಿದರು.

ಶತಮಾನಗಳ ಕಾಲ ದಾಸ್ಯದಲ್ಲಿ ನಲುಗಿಹೋದವರಿಗೆ  ಅಲ್ಲಿಂದ ಕಳಚಿಕೊಳ್ಳುವ ಧಾವಂತದಲ್ಲಿ ಹೆಚ್ಚು ಯೋಚಿಸುವ ವ್ಯವಧಾನ ಇರಲಿಲ್ಲ. ಬ್ರಿಟಿಷರು ಸ್ವಾತಂತ್ರ್ಯ ನೀಡುತ್ತಾರೆಂಬ ವಿಷಯದ ಹಿಂದಿದ್ದ ಷಡ್ಯಂತ್ರಗಳು ಯಾರಿಗೂ ಗೋಚರಿಸಲಿಲ್ಲ. ಅದೇ ಧರ್ಮದ ಆಧಾರದಲ್ಲಿ ವಿಭಜನೆ ಇತ್ಯಾದಿ. ಧರ್ಮದ ಆಧಾರದಲ್ಲಿ ವಿಭಜನೆಯಾದರೂ ಆಯಾ ಧರ್ಮಕ್ಕೆ ಸೇರಿದವರನ್ನು ಸಂಪೂರ್ಣವಾಗಿ ಆಯಾ ದೇಶಕ್ಕೆ ಕಳುಹಿಸುವಲ್ಲಿ ಅವರು ಆಸಕ್ತಿ ತೋರಿಸದಿರುವುದು, ಹೀಗಾಗಿ ದೇಶದ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಎರಡು ಪ್ರದೇಶಗಳನ್ನು ಸೇರಿಸಿ ಪಾಕಿಸ್ತಾನವನ್ನು ರಚಿಸಿರುವುದರ ಹಿಂದಿನ ಉದ್ದೇಶ ಯಾರಿಗೂ ಅರ್ಥ ಆಗಲೇ ಇಲ್ಲ. ಮಾತ್ರವಲ್ಲದೆ, ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ಸಂಪರ್ಕಕ್ಕೆಂದು ರಸ್ತೆ ನೀಡುವ ಮೂಲಕ ದೇಶವನ್ನು ಸದಾ ಸಮಸ್ಯೆ-ಸಂಘರ್ಷಗಳ ಕೂಪಕ್ಕೆ ತಳ್ಳುವ ಹುನ್ನಾರವೂ ಇತ್ತೆಂಬುದನ್ನು ಆಗಿನ “ನಾಯಕರು” ಅರ್ಥ ಮಾಡಿಕೊಳ್ಳಲಿಲ್ಲವೋ ಅಥವಾ ಅವರಿಗೂ ಅದೇ ಬೇಕಾಗಿತ್ತೋ ಏನೋ. ಎಲ್ಲವೂ ಇತಿಹಾಸ.

ಬ್ರಿಟಿಷರು ನಮ್ಮನ್ನು ಎಷ್ಟರಮಟ್ಟಿಗೆ ಪರಾವಲಂಬಿಗಳನ್ನಾಗಿಸಿ ಹೋಗಿದ್ದಾರೆಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸ್ವಾತಂತ್ರ್ಯ ದೊರೆತು ದಶಕಗಳೇ ಕಳೆದರೂ ಇಂದಿಗೂ ಅವರು ರಚಿಸಿದ ವ್ಯೂಹದಲ್ಲಿ ಸಿಲುಕಿದ್ದೇವೆಂಬುದನ್ನು ನಾವಿನ್ನೂ ಅರ್ಥಮಾಡಿಕೊಂಡಿಲ್ಲ. ಅದು ನಮ್ಮ ದೌರ್ಭಾಗ್ಯವೋ ಅಥವಾ ಹುಂಬತನವೋ ತಿಳಿಯದು. ಆದ್ದರಿಂದಲೇ ಬಹಳಷ್ಟು ಕ್ಷೇತ್ರದಲ್ಲಿ ಇನ್ನೂ ನಾವು ನಮ್ಮಲ್ಲಿರುವ ಕಚ್ಛಾ ಸಾಮಗ್ರಿಗಳನ್ನು ರಫ್ತು ಮಾಡಿ, ಸಿದ್ಧಪಡಿಸಿದವುಗಳನ್ನು ಆಮದು ಮಾಡಿಕೊಳ್ಳುತ್ತಿರುವುದು. ದೇಶದೊಳಗೆ ನಿರುದ್ಯೋಗ ಸಮಸ್ಯೆ ಅಗಾಧ ಪ್ರಮಾಣದಲ್ಲಿ ಇದ್ದರೂ, ದೇಶೀಯವಾಗಿ ಉತ್ಪಾದನೆ ಮಾಡಲು ಸೂಕ್ತ ವಾತಾವರಣ, ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತಾರೂಢ ಸರಕಾರಗಳು ತೋರಿಸುವ ದಿವ್ಯ ನಿರ್ಲಕ್ಷ್ಯ ನಮಗೆ ಗೊಚರಿಸದಿರುವುದು, ಸ್ವದೇಶಿ ಉತ್ಪನ್ನಗಳಿಗೆ ಇತ್ತೀಚೆಗೆ ಸರಕಾರ ನೀಡಲು ಉದ್ದೇಶಿಸಿರುವ ಪ್ರೋತ್ಸಾಹಕ ಕ್ರಮಗಳ ಉಪಯೋಗ ಪಡೆಯಲು ಉತ್ಸಾಹ ತೋರದಿರುವುದು ಇತ್ಯಾದಿ. ಇದೇ ಬ್ರಿಟಿಷರು ಸ್ವಾತಂತ್ರ್ಯದ ಜತೆಗೆ ನೀಡಿದ ಹೆಚ್ಚುವರಿ ಕೊಡುಗೆಗಳು.

ಒಂದು ಕಾಲದಲ್ಲಿ ಅಮೇರಿಕಾವನ್ನೂ ತಮ್ಮ ವಸಾಹತುಗಳಡಿ ಇರಿಸಿ ಆಳ್ವಿಕೆ ನಡೆಸುತ್ತಿದ್ಧ ಯುರೋಪ್ ರಾಷ್ಟ್ರಗಳು, ನಮ್ಮ ದೇಶದ ಅಮೂಲ್ಯ ಸಂಪತ್ತಾಗಿರುವ ದೇಶೀಯ ಔಷಧಿ ಪದ್ದತಿಯ ಗಿಡಮೂಲಿಕೆ, ಗೋಮೂತ್ರ, ತಾಮ್ರದ ಪಾತ್ರೆಗಳು, ತೆಂಗಿನೆಣ್ಣೆ ಮುಂತಾದವುಗಳ ಹಕ್ಕು ಸ್ವಾಮ್ಯ ಪಡೆದು ವಿದೇಶದಲ್ಲಿ ಉಪಯೋಗಿಸುತ್ತಾರೆ. ಆದರೆ ಭಾರತದಲ್ಲಿ ಅವುಗಳಲ್ಲಿ ಉಪಯೋಗಿಸುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಪ್ರಚಾರ ಮಾಡುತ್ತಾರೆ! ಅದೇವೇಳೆ ಅವರ ಉತ್ಪನ್ನಗಳಾದ ಪೆಪ್ಸಿ, ಕೋಲಾ ಮುಂತಾದವು ಅಪಾಯಕಾರಿಯಾಗಿದ್ದರೂ ನಮ್ಮ ದೇಶದಲ್ಲಿ ಢಾಳಾಗಿ ಮಾರಾಟ ಮಾಡುತ್ತಾರೆ. ನಾವು ಕೂಡಾ ಸತ್ಯಾಸತ್ಯತೆಯ ಪರಿಶೀಲನೆ ಮಾಡುವ ಗೋಜಿಗೆ ಹೋಗದೆ, ಅವರು ಹಾಕುವ ತಾಳಕ್ಕೆ ತಕ್ಕಂತೆ ಕುಣಿಯುತ್ತೇವೆ. ಮನೆಯಲ್ಲಿ ಆರೋಗ್ಯಕರ ಮತ್ತು ಶುಚಿಯಾದ ರುಚಿಯಾದ ಅಡುಗೆ ಮಾಡುವ ಶ್ರಮವೇಕೆಂದುಕೊಂಡು, ಹೊರಗಿನ ಊಟ ತಿಂಡಿಗಳನ್ನು ತರಿಸುವ ಅಭ್ಯಾಸ ಮಾಡಿಕೊಂಡವರಿಗೆ ಸ್ವಾವಲಂಬನೆ ಪದದ  ಅರ್ಥವಾಗಲೀ, ರುಚಿಯಾಗಲೀ ಹೇಗೆ ಗೊತ್ತಾದೀತು.

ಬ್ರಿಟಿಷರ ಒಡೆದು ಆಳುವ ನೀತಿಯನ್ನು ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ಇಂದಿಗೂ ಉಳಿಸಿಕೊಂಡಿದ್ದಾರೆ. ಅವರು ಬಿತ್ತಿ ಬೆಳೆಸಿದ ಜಾತಿ ಧರ್ಮಗಳ ನಡುವಿನ ಕಂದಕವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನಮ್ಮ ನೇತಾರರೆನಿಸಿಕೊಂಡವರು ಶತ್ರು ದೇಶದ ಆಡಳಿತ ಪಕ್ಷದ ಜತೆಗೆ ರಾಜಕೀಯ ಪಕ್ಷದ ನೆಲೆಯಲ್ಲಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದ್ದಾಗಲೂ ಶತ್ರು ದೇಶದ ರಾಯಭಾರ ಕಚೇರಿಗೆ ಗುಟ್ಟಾಗಿ ಭೇಟಿ ಕೊಡುತ್ತಾರೆ. ಆದರೆ ವಿವರಗಳನ್ನು ಯಾರಿಗೂ ಬಹಿರಂಗ ಮಾಡುವುದಿಲ್ಲ. ಇಷ್ಟೆಲ್ಲಾ ಆದರೂ ಜನರ ಮನಸ್ಥಿತಿ ಇದೆಷ್ಟು ಅಪಾಯಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳುವುದರ ಬದಲಿಗೆ (1) ನಮಗೇಕೆ ಬೇಕು ಉಸಾಬರಿ? (2) ಲಾಭ ಬರುವುದಾದರೆ ಎಲ್ಲವೂ “ನಮಗೇ ಬೇಕೆಂಬ” ಮನಸ್ಥಿತಿಯನ್ನು ಮಾತ್ರ ಇನ್ನೂ ಉಳಿಸಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಅರ್ಥ ಮಾಡಿಕೊಳ್ಳಬೇಕಾಗಿರುವುದೇನೆಂದರೆ, ಪ್ರಜಾಪ್ರಭುತ್ವವೆಂಬ ಕಟ್ಟಡದ ಅಡಿಪಾಯವನ್ನು ಕೊರೆಯುವ ಹೆಗ್ಗಣಗಳನ್ನು ತುರ್ತಾಗಿ ಹುಡುಕಿ ನಾಶಮಾಡದಿದ್ದರೆ ಇಡೀ ಕಟ್ಟಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಲಾದರೂ ಬ್ರಿಟಿಷರ ಕೊಡುಗೆಗಳ ಮಂಪರಿನಿಂದ ಹೊರಗೆ ಬರದಿದ್ದರೆ ದೇಶ ಮತ್ತೊಮ್ಮೆ ಗುಲಾಮಗಿರಿಯತ್ತ ಹೊರಳಿದರೂ ಆಶ್ಚರ್ಯವಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!