ಅನಿಶಾ ಪೂಜಾರಿ ಸಾವಿನ ಪ್ರಕರಣ :ಹೆಣ್ಣು ಮಗಳ ಸಾವಿಗೆ ನ್ಯಾಯ ದೊರಕಿಸೋಣ ಬಿಲ್ಲವ ಯುವ ವೇದಿಕೆ ..!

ಉಡುಪಿ: ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆ,ಕಾಜ್ರಳ್ಳಿ ಎಂಬಲ್ಲಿನ ನಿವಾಸಿ ಅನಿಶಾ ಜಿ ಪೂಜಾರಿ ಎಂಬ ಹುಡುಗಿಯ ಆತ್ಮಹತ್ಯೆ ಪ್ರಕರಣ ಈಗ ಅನುಮಾನಕ್ಕೆ ಕಾರಣವಾಗಿದೆ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿ ಆತ್ಮಹತ್ಯೆಗೆ ಕಾರಣವಾದ ಹುಡಗನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆತನ ವಿರುದ್ಧ ಹುಡುಗಿಯ ಸಾವಿನ ಪ್ರಕರಣ ಸಮಗ್ರ ತನಿಖೆಗೆ ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ. ಬಿಲ್ಲವ ಯುವ ವೇದಿಕೆ ರಾಜಕೀಯ ರಹಿತ ಸಂಘಟನೆಯಾಗಿದ್ದು ಪ್ರವೀಣ್.ಎಮ್.ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾದ್ಯಂತ ನಡೆಯುವ ಅನ್ಯಾಯದ ವಿರುದ್ಧ ಸತತವಾಗಿ ದನಿ ಎತ್ತುತ್ತಿದೆ.
ಅನಿಶಾ ಜಿ. ಪೂಜಾರಿ ಹಾಗೂ ಸ್ಥಳೀಯ ಚೇತನ್ ಶೆಟ್ಟಿಯ ಪ್ರೇಮಪ್ರಕರಣದ ಕುಮ್ಮಕ್ಕಿನಿಂದ ಮನನೊಂದು ದಿನಾಂಕ-21-08-2020ರಂದು ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ.ಎಂ.ಬಿ.ಎ ಪದವೀಧರೆಯಾಗಿ,ಕಂಪೆನಿಯೊಂದರಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಅನಿಶಾ ಮತ್ತು ಚೇತನ್ ಶೆಟ್ಟಿಯೊಡನೆ ಪ್ರೀತಿ ಸಂಬಂಧಗಳಿದ್ದು ಇದು ಮದುವೆಯ ವಿಚಾರದವರೆಗೆ ಮುಂದುವರಿದಿತ್ತು.
ಈ ಹಂತದಲ್ಲಿ ಜಾಣತನದಿಂದ ವಿವಿಧ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಚೇತನ್ ಶೆಟ್ಟಿಯೊಡನೆ ಪರಿಪರಿಯಾಗಿ ನಿವೇದಿಸಿಕೊಂಡಿದ್ದರೂ ಆತನ ವಂಚನೆಯ ಬಲೆಗೆ ಸಿಲುಕಿ ಆತನಿಗೇ ಸಂಬಂಧಿಸಿದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಚೇತನ್ ಶೆಟ್ಟಿಯ ಎಲ್ಲ ವಂಚನೆಗಳ ಬಗೆಗೆ ಸವಿವರ ಡೆತ್ ನೋಟ್ ಮತ್ತು ಮೊಬೈಲ್ ಸಂಭಾಷಣೆ ಸಿಕ್ಕಿದ್ದು, ಈ ಪ್ರಕರಣಕ್ಕೆ ಚೇತನ್ ಶೆಟ್ಟಿಯ ಮೋಸವೆ ಪ್ರಧಾನ ಕಾರಣವಾಗಿದೆ.
ಕೌಟುಂಬಿಕವಾಗಿ ಬಡತನದ ಹಿನ್ನೆಲೆಯಿರುವ ಅನಿಶಾ ಮನೆಯವರು ಒಂದೆಡೆ ಮನೆ ಮಗಳ ಸಾವಿನ ನೋವು ಮತ್ತೊಂದೆಡೆ ಅನ್ಯಾಯವನ್ನು ಎದುರಿಸುವುದು ಹೇಗೆಂದು ಪರಿತಪಿಸುತ್ತಿರುವ ಸಂದರ್ಭ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಯ ಮಾನ್ಯ ಪ್ರವೀಣ್.ಎಮ್.ಪೂಜಾರಿಯವರನ್ನು ಸಂಪರ್ಕಿಸಿದ್ದಾರೆ.
ತಕ್ಷಣವೆ ಶ್ರೀಯುತರು ಮಾನವೀಯ ದೃಷ್ಟಿ ಮತ್ತು ಸಮಾಜಾಭಿಮಾನದಿಂದ ವೇದಿಕೆಯ ಸದಸ್ಯರೊಡಗೂಡಿ ಬ್ರಹ್ಮಾವರ ಪೋಲಿಸ್ ಉಪನಿರೀಕ್ಷಕರನ್ನು ಖುದ್ದು ಭೇಟಿಯಾದಾಗ, ಈಗಾಗಲೇ ಚೇತನ್ ಶೆಟ್ಟಿಯ ವಿರುದ್ಧ FIR ದಾಖಲಿಸಲಾಗಿದ್ದು, ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಅನಿಶಾ ಮನೆಯವರ ಅಸಹಾಯಕತೆಯನ್ನು ಅರಿತಿರುವ ಚೇತನ್ ಶೆಟ್ಟಿ ತನ್ನ ಮುಂದಿನ ವೈಯಕ್ತಿಕ ಮತ್ತು ವೈವಾಹಿಕ ಜೀವನಕ್ಕೆ ಕುಂದು ಬರಬಾರದೆಂದು ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಇನ್ನಿಲ್ಲದ ರಾಜಕೀಯ ಪ್ರಭಾವವನ್ನು ಬಳಸಿಕೊಂಡಿರುವುದು ಗಮನಕ್ಕೆ ಬಂದಿದೆ.
ಚೇತನ್ ಶೆಟ್ಟಿಯಂತಹ ದುಷ್ಟರಿಂದ ಇನ್ನಷ್ಟು ಅಮಾಯಕ ಹೆಣ್ಣು ಮಕ್ಕಳು ಶೋಷಣೆಗೊಳಗಾಗುವುದನ್ನು ತಪ್ಪಿಸಲು ಅತ್ಯವಶ್ಯ ಜಾಗೃತರಾಗಬೇಕಿದೆ.ಹಾಗೂ ಅಸಹಾಯಕರಾದ ಅನಿಶಾ ಪೂಜಾರಿಯ ಮನೆಯವರಿಗೆ ನ್ಯಾಯ ದೊರಕಿಸಲು ಸಮಸ್ತ ಸಮಾಜ ಸಂಘಟಿತ ಧ್ವನಿಯಾಗುವಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಬಯಸುತ್ತದೆ. ಹಾಗೂ ಈ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಶಿಕ್ಷೆಯಾಗಲೇಬೇಕೆಂಬ ನಿಟ್ಟಿನಲ್ಲಿ ಅಗತ್ಯ ಕಾನೂನಿನ ನೆರವಿನೊಡನೆ ಅಮಾಯಕರ ಪರವಾದ ಯಾವುದೇ ಹೋರಾಟಕ್ಕೂ ಪ್ರವೀಣ್ ಎಮ್.ಪೂಜಾರಿ ಮುಂದಾಳತ್ವದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಗಲಿರುಳು ಸಿದ್ಧವಿದೆ ಎಂದು ಹೇಳಿಕೆ ನೀಡಿದ್ದಾರೆ.