ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗೆ ಬಂತು ಡಿಮಾಂಡ್! ಖಾಸಗಿ ಶಾಲೆ ತೊರೆಯುತ್ತಿರುವ ಮಕ್ಕಳು?

ಕಾರವಾರ:- ಕರೋನಾ ಮಹಾ ಮಾರಿ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ.ಇಂತಹ ದಿನಗಳಲ್ಲಿ ಉದ್ಯೋಗ ನಷ್ಟ,ಹಣದ ಕೊರತೆಯಿಂದ ಪೊಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ
ಸರ್ಕಾರಿ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸಂಕಷ್ಟದಿಂದ ಹಲವು ಜನರು ಉದ್ಯೋಗ ಕಳೆದುಕೊಂಡು ತಮ್ಮ ಜಿಲ್ಲೆಗೆ ಮರಳಿದ್ದಾರೆ. ಇನ್ನು ಕರೋನಾ ಮಹಾಮಾರಿ ಆರ್ಥಿಕ ಸಂಕಷ್ಟ ತಂದೊಡ್ಡಿದ್ದು ಜನರಿಗೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಖಾಸಗಿ ಶಾಲೆಗೆ ಸೇರಿಸಿದ್ದ ಪೊಷಕರು ಸರ್ಕಾರಿ ಶಾಲೆಯತ್ತ ಮುಖಮಾಡಿದ್ದಾರೆ.
ಕರೋನಾ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.ಇದರ ಜೊತೆಗೆ ಅಧಿಕ ಶುಲ್ಕ ,ಮಕ್ಕಳ ಆನ್ ಲೈನ್ ಕ್ಲಾಸ್ ಗಾಗಿ ದುಬಾರಿ ಬೆಲೆಯ ಮೊಬೈಲ್,ಲ್ಯಾಬ್ ಟಾಪ್ ತೆಗೆದುಕೊಳ್ಳಲು ಒತ್ತಡ ಹೇರಿದ್ದು ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿತ್ತು.
ಆದರೇ ಸರ್ಕಾರಿ ಶಾಲೆಯಲ್ಲಿ ಮಾತ್ರ ಶಾಲೆಯನ್ನು ಪ್ರಾರಂಭಿಸದಿದ್ದರೂ ವಿದ್ಯಾಗಮ ಯೋಜನೆ ಮೂಲಕ ಹಳ್ಳಿ ಹಳ್ಳಿಯಲ್ಲೂ ಮಕ್ಕಳ ಬಳಿ ಶಿಕ್ಷಕರು ತೆರಳಿ ಪಾಠ ಮಾಡುತಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಮುತುವರ್ಜಿ ವಹಿಸಿದ್ದಾರೆ.
ಆದರೇ ಖಾಸಗಿ ಶಾಲೆಗಳು ಈ ವಿಷಯದಲ್ಲಿ ಸಂಪೂರ್ಣ ಎಡವಿದ್ದು ಮಕ್ಕಳಿಗೆ ಹತ್ತಿರವಾಗುವಲ್ಲಿ ಸಂಪೂರ್ಣ ಸೋತಿದ್ದರು.ಇನ್ನು ಜಿಲ್ಲೆಯ ದೂರದೂರಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ವಾಹನಗಳ ಮೂಲಕ ಕರೆತರುತಿತ್ತು.ಆದರೇ ಇದಕ್ಕೆ ಶುಲ್ಕ ಕಟ್ಟಲು ಸಹ ಪೊಷಕರಿಗೆ ತೊಂದರೆಯಾಗಿದ್ದು ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಉತ್ತಮ ಗುಣಮಟ್ಟ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸಿರುವುದು ಪೊಷಕರಲ್ಲಿ ಸರ್ಕಾರಿ ಶಾಲೆಗಳತ್ತ ಮುಖಮಾಡುವಂತೆ ಮಾಡಿದೆ.
ಇನ್ನು ಜಿಲ್ಲೆಯಲ್ಲಿ ಶಿರಸಿ ಹಾಗೂ ಕಾರವಾರ ಎಂಬ ಎರಡು ಶೈಕ್ಷಣಿಕ ಜಿಲ್ಲೆಗಳಿದ್ದು ಕಾರವಾರ ಶೈಕ್ಷಣಿಕ ಜಿಲ್ಲೆಯ ಭಟ್ಕಳ ದಲ್ಲಿ 158, ಕುಮಟಾ-144 ,ಕಾರವಾರ:- 160, ಹೊನ್ನಾವರ- 172 ಹಾಗೂ ಇತರೆ ತಾಲೂಕು ಸೇರಿದಂತೆ ಒಟ್ಟು 700 ಕ್ಕೂ ಹೆಚ್ಚು ಖಾಸಗಿ ಶಾಲೆ ವಿಧ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ.
ಇನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 88 ಸಾವಿರ ವಿದ್ಯಾರ್ಥಿಗಳು ಒಂದರಿಂದ ಹತ್ತನೇ ತರಗತಿಯ ವರೆಗೆ ಈಗಾಲಲೇ ಪ್ರವೇಶ ಪಡೆದಿದ್ದು ಇನ್ನೂ 16 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಿದ್ದು ಈಗ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ 312 ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಪ್ರವೇಶ ಪಡೆದಿದ್ದಾರೆ.
ಇದಲ್ಲದೆ ಜಿಲ್ಲೆಯಲ್ಲಿರುವ 9 – ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 30 ಜನ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿದ್ದರೂ ಈ ಬಾರಿ ಒಂದು ಸ್ಕೂಲ್ ನಲ್ಲಿ 70 ರಿಂದ 90 ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈಬಾರಿ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದ ಖಾಸಗಿ ಶಾಲೆಯ ಮಕ್ಕಳಲ್ಲಿ ಬಹುತೇಕ ಮಕ್ಕಳು ಹಳ್ಳಿ ಪ್ರದೇಶದಿಂದ ಬರುವವರಾಗಿದ್ದಾರೆ. ದುಬಾರಿ ಶಾಲಾ ಶುಲ್ಕ, ಶಾಲಾ ವಾಹನಕ್ಕೆ ಹೆಚ್ಚಿನ ಬಾಡಿಗೆ, ವಸತಿ ಸಮಸ್ಯೆ, ಆನ್ ಲೈನ್ ತರಗತಿಗಳಿಗೆ ನೆಟ್ವರ್ಕ ಸಮಸ್ಯೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಉತ್ತಮ ಗುಣಮಟ್ಟ,ಸವಲತ್ತುಗಳು ಪೊಷಕರಿಗೆ ಸರ್ಕಾರಿ ಶಾಲೆಗೆ ಸೇರಿಸಲು ಪ್ರೇರಣೆಯಾಗಿದ್ದು ಸರ್ಕಾರಿ ಶಾಲೆಯ ಶಿಕ್ಷಕರ ಮುತುವರ್ಜಿ ಸಹ ಇತ್ತ ಸೆಳೆದಿದ್ದಿ ಈ ಬಾರಿ ಸರ್ಕಾರಿ ಶಾಲೆಗೆ ಎರಡೂ ಶೈಕ್ಷಣಿಕ ಜಿಲ್ಲೆಯಿಂದ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಸಾಧ್ಯತೆಗಳಿವೆ ಎಂಬುದು ಶಿಕ್ಷಣ ಇಲಾಖೆಯ ಅಂದಾಜಾಗಿದೆ.
ಈವರೆಗೆ ಖಾಸಗಿ ಶಾಲೆಯಲ್ಲಿಯೇ ಉತ್ತಮ ಶಿಕ್ಷಣ ಗುಣಮಟ್ಟ ಎಂಬ ಪೊಷಕರ ಮನಸ್ಥಿತಿ ಕರೋನಾ ತಂದ ಸಂಕಷ್ಟ ಸಂಪೂರ್ಣ ಬದಲಿಸಿದೆ.ಸರ್ಕಾರಿ ಶಾಲೆಯಲ್ಲಿ ವಿದ್ಯಾಗಮ ಯೋಜನೆ ಅನುಷ್ಟಾನ ಖಾಸಗಿ ಶಾಲೆಗೆ ಸೇರಿಸಿದ ಪೊಷಕರಲ್ಲಿ ಸರ್ಕಾರಿ ಶಾಲೆಗಳ ಮೇಲಿನ ಅಭಿಮಾನ ಹೆಚ್ಚಿಸಿದ್ದು ಈಗ ಸರ್ಕಾರಿ ಶಾಲೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬರತೊಡಗಿದ್ದು ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವ ಪ್ರಕ್ರಿಯೆ ಏರಿಕೆ ಕಾಣುತ್ತಿದೆ.