ಕರಾವಳಿ

ಗೊಂದಲಕಾರಿ ಸುದ್ದಿ ಪ್ರಸಾರ ಮಾಡಿದರೆ ಕ್ರಮ: ಉಡುಪಿ ಡಿಸಿ

ಉಡುಪಿ:ಸ್ಥಳೀಯ ಕೇಬಲ್ ವಾಹಿನಿ ಮತ್ತು ಸಾಮಾಜಿಕ ತಾಣಗಳು ಸಮಾಜದಲ್ಲಿ ಗೊಂದಲ ಉಂಟು ಮಾಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ರವರು ಇಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳು ಪ್ರಸಾರ ಮಾಡಿದ ಅಪಪ್ರಚಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಸಾರ್ವಜನಿಕರು ಅಸಹಕಾರ ತೋರುತ್ತಿದ್ದು, ಇದರಿಂದ ರೋಗದ ಗಂಭೀರ ಪರಿಣಾಮ ಎದುರಿಸುವ ರೋಗಿಗಳ ಸಂಖ್ಯೆ ಅಧಿಕವಾಗಿದ್ದು, ಐಸಿಯು ಬೆಡ್ ಗಳ ಕೊರತೆಯಾಗಿದೆ. ಇಂತಹ ಸುದ್ದಿಗಳನ್ನು ಪ್ರಸಾರ ಮಾಡುವಾಗ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನೂ ಸಹ ಪ್ರಸಾರ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಡಿಸಿ ವಿಷಾದ ವ್ಯಕ್ತಪಡಿಸಿದರು.

 

ಜಿಲ್ಲೆಯಲ್ಲಿ ಅನಧಿಕೃತ ನ್ಯೂಸ್ ವೆಬ್‌ಸೈಟ್‌ಗಳು ಆರಂಭಗೊಂಡಿದ್ದು, ಸಾಮಾಜಿಕ ಸುದ್ದಿಗಳ ಸತ್ಯಾಸತ್ಯತೆ ಪರಾಮರ್ಶೆ ಮಾಡದೇ ಹರಿಬಿಡಲಾಗುತ್ತಿದ್ದು, ಇದರಿಂದ ಸರಕಾರದ, ಗಣ್ಯರ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ, ನಾಗರೀಕರ ತೇಜೋವಧೆಯ ಜೊತೆಗೆ ಧಾರ್ಮಿಕ, ಸಾಮಾಜಿಕ ಭಾವನೆಗಳಿಗೆ ಧಕ್ಕೆ ಮೂಡಿಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂತಹ ಅನಧಿಕೃತ ನ್ಯೂಸ್ ವೆಬ್‌ಸೈಟ್ ಗಳನ್ನು ನಿಷೇಧಿಸುವಂತೆ ಮನವಿ ಬಂದಿದೆ. ಈ ರೀತಿ ನ್ಯೂಸ್ ವೆಬ್‌ಸೈಟ್ ಮಾಡಿಕೊಂಡು ಸಾರ್ವಜನಿಕ ಸುದ್ದಿ ಪ್ರಕಟಿಸಲು ಅನುಮತಿ ಪಡೆದಿರುವ ಬಗ್ಗೆ ಸಂಬಂಧಪಟ್ಟ ವೆಬ್‌ಸೈಟ್ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿನ ಸ್ಥಳೀಯ ಕೇಬಲ್ ಟಿವಿ ಗಳು ಸಹ ಮನರಂಜನೆ ಹೊರತುಪಡಿಸಿ, ನ್ಯೂಸ್ ಪ್ರಸಾರ ಮಾಡಲು ಅನುಮತಿ ಪಡೆದಿರುವ ಬಗ್ಗೆ ಸಂಬಂದಪಟ್ಟ ಚಾನೆಲ್ ಗಳ ಮುಖ್ಯಸ್ಥರು ದಾಖಲೆಗಳನ್ನು ನೀಡುವಂತೆ ನೋಟೀಸ್ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ ಉಲ್ಲಂಘಿಸಿದ್ದಲ್ಲಿ ಕೇಬಲ್ ಆಪರೇಟರ್ ಗಳ ಉಪಕರಣಗಳನ್ನು ವಶಪಡಿಸಿಕೊಳ್ಳುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಕೇಬಲ್ ಟಿವಿ ಶುಲ್ಕ ಪಡೆಯುವ ಬಗ್ಗೆ ವ್ಯತ್ಯಾಸವಿದ್ದು, ಗ್ರಾಹಕರಿಂದ ಹೆಚ್ಚಿನ ದರ ಪಡೆಯುತ್ತಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಸಮಿತಿಯ ಸದಸ್ಯೆ ತಾರಾ ತಿಮ್ಮಯ್ಯ ತಿಳಿಸಿದರು, ಹೆಚ್ಚಿನ ದರ ಪಡೆಯುವ ಬಗ್ಗೆ ಮತ್ತು ಕೇಬಲ್ ವಾಹಿನಿಗಳಲ್ಲಿ ಅನಪೇಕ್ಷಿತ ಕಾರ್ಯಕ್ರಮ ಪ್ರಸಾರವಾಗುತ್ತಿರುವ ಬಗ್ಗೆ, ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆರಂಭಿಸಿರುವ ದೂರು ಕೋಶ (ದೂ.ಸಂ.2985242, ಈ ಮೇಲ್, varthabhavanaudupi@gmail.com) ದಲ್ಲಿ ಸಾರ್ವಜನಿಕರು ಲಿಖಿತ ದೂರು ದಾಖಲಿಸುವಂತೆ ವಾರ್ತಾಧಿಕಾರಿ ಮಂಜುನಾಥ್ ಬಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ಅಂಚೆ ವಿಭಾಗದ, ಸಹಾಯಕ ಅಂಚೆ ಅಧೀಕ್ಷಕ ಕೆ.ವಿ ಭಟ್, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ, ಮನಃಶಾಸ್ತçಜ್ಞ ವಿರೂಪಾಕ್ಷ ದೇವರಮನೆ, ವಿಶ್ವಾಸದ ಮನೆಯ ಫಾಸ್ಟರ್ ಸುನೀಲ್ ಜಾನ್ ಡಿಸೋಜಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker