ಕರಾವಳಿ

ಉಡುಪಿ: ಹರಾಜಾಗುವ ಮರಳು ಜಿಲ್ಲೆಗೆ ವಿನಿಯೋಗವಾಗಲಿ: ಕುಯಿಲಾಡಿ

ಉಡುಪಿ: ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಆಕ್ರಮ ಮರಳು ಸಂಗ್ರಹವನ್ನು ಮುಟ್ಟುಗೋಲು ಹಾಕಿ ಹರಾಜು ಪ್ರಕ್ರಿಯೆ ನಡೆಸಿದೆ. ಈ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಹರಾಜಾಗುವ ಮರಳು ಜಿಲ್ಲೆಯೊಳಗೆ ಮಾತ್ರ ವಿನಿಯೋಗವಾಗುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜರುಗಿಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಸರಕಾರದ ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಹಾಗೂ ಕಟ್ಟಡ, ರಸ್ತೆ, ಸೇತುವೆ ಮುಂತಾದ ಅಭಿವೃದ್ಧಿ ಕಾಮಗಾರಿ ಚಟುವಟಿಕೆಗಳು ಮರಳು ಪೂರೈಕೆಯನ್ನು ಅವಲಂಬಿಸಿರುವುದು ವಾಸ್ತವ. ಆದರೆ ಸಮರ್ಪಕ ಮರಳು ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಮಾತ್ರ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದು ಎಂದವರು ಹೇಳಿದ್ದಾರೆ.

ಡಾ| ವಿ.ಎಸ್. ಆಚಾರ್ಯ ಅವರ ಅವಧಿಯಲ್ಲಿ ರೂಪಿಸಿದ್ದ ಮರಳು ನೀತಿಯಿಂದ ಜಿಲ್ಲೆಯಾದ್ಯಂತ ಮರಳು ಲಭ್ಯತೆಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ಬಳಿಕ ಬದಲಾದ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರದ ಸಚಿವರ ಧೋರಣೆಯಿಂದ ಉಡುಪಿ ಜಿಲ್ಲೆ ಮರಳು ಸಮಸ್ಯೆಯಿಂದ ಎಷ್ಟು ಸೊರಗಿದೆ ಎಂಬುದು ಜಗಜ್ಜಾಹೀರಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರಸಕ್ತ ಶಾಸಕರು, ಸಂಸದರ ಸಹಿತ ಜನಪ್ರತಿನಿಧಿಗಳು, ಸಂಘಟನೆಗಳು ಯಾವ ರೀತಿಯ ಜನಪರ ಹೋರಾಟಗಳನ್ನು ನಡೆಸಿ ಮರಳು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸರಕಾರದ ಗಮನ ಸೆಳೆದಿದ್ದಾರೆ ಎಂಬುದು ಜನಜನಿತವಾಗಿದೆ ಎಂದು ಕುಯಿಲಾಡಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಮರಳು ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗಳಿಗೆ ಮಾರಾಟವಾಗದಂತೆ ತಡೆಯಲು ಉಡುಪಿ ಜಿಲ್ಲಾಡಳಿತ ಸೂಕ್ತ ನಿಬಂಧನೆಗಳನ್ನು ರಚಿಸುವ ಅನಿವಾರ್ಯತೆ ಇದೆ. ಜಿಲ್ಲೆಯ ಮರಳು ಸ್ಥಳೀಯವಾಗಿ ದೊರೆತಾಗ ಅನೇಕ ಸಮಯದಿಂದ ಸ್ಥಗಿತಗೊಂಡಿರುವ ವಸತಿ, ಕಟ್ಟಡ ಮುಂತಾದ ಅಭಿವೃದ್ಧಿ ಚಟುವಟಿಕೆಗಳಿಗೆ ವೇಗ ದೊರೆತು ಜಿಲ್ಲೆಯ ಆರ್ಥಿಕತೆಯೂ ಚೇತರಿಸಲಿದೆ. ಈ ನಿಟ್ಟಿನಲ್ಲಿ ಸಿಆರ್‌ಝಡ್, ನಾನ್-ಸಿಆರ್‌ಝಡ್ ಅಥವಾ ಇತರ ಯಾವುದೇ ಮೂಲಗಳಲ್ಲಿ ದೊರೆಯುವ ಮರಳು ಸುಲಭಸಾಧ್ಯವಾಗಿ ಜನತೆಗೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ದೊರೆಯುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಉಡುಪಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!