ಮೂಲವ್ಯಾಧಿ ನಿವಾರಕ ಗಡ್ಡೆ
ಇದಕ್ಕೆ ಸುವರ್ಣ ಗಡ್ಡೆ, ಪಂಜರಗಡ್ಡೆ, ಸೂರಣಗಂಧ, Amorphopallus ಇತ್ಯಾದಿಯಾಗಿ ಕರೆಯುತ್ತಾರೆ. ಇದು ಮೂಲವ್ಯಾಧಿಗೆ ದಿವ್ಯೌಷಧಿ ಆಗಿರುವದರಿಂದ ಇದಕ್ಕೆ “ ಅರ್ಶೋಘ್ನ “ ಎನ್ನುವರು. ಇದು ಗಡ್ಡೆರೂಪದ ತರಕಾರಿಗಳಲ್ಲಿಯೇ ಅತಿ ಶ್ರೇಷ್ಠವಾಗಿರುವದರಿಂದ ವೈದ್ಯಗ್ರಂಥಗಳಲ್ಲಿ “ ಸರ್ವೇಷಾಂ ಕಂದಶಾಕಾನಾಂ ಸೂರಣಃ ಶ್ರೇಷ್ಠ ಉಚ್ಯತೇ ” ಎಂದು ವರ್ಣಿತವಾಗಿದೆ
ಇದರ ಬಳಕೆಯಿಂದ ಮೊಳೆ (ಮೊಳಕೆಠ
ಟ ಮೂಲವ್ಯಾಧಿ ರೋಗವನ್ನು ಯಾವದೇ ಆಪರೇಷನ್ ಇಲ್ಲದೇ ಕೇವಲ ಇದರ ಸತ್ವ (ಚೂರ್ಣ) ಸೇವನೆಯಿಂದ ಸಂಪೂರ್ಣವಾಗಿ ಗುಣ ಪಡಿಸಿಕೊಳ್ಳ ಬಹುದಾಗಿದೆ. ಹೇಗೆಂದರೆ, ಸೂರಣಗಡ್ಡೆಯ ಸಿಪ್ಪೆ ತೆಗೆದು ಸಾಮಾನ್ಯ ಗಾತ್ರದ ಹೋಳುಗಳನ್ನಾಗಿ ಮಾಡಿಕೊಂಡು ತುರಿ ಮಣೆಯಲ್ಲಿ ತುರಿದು ಆ ತುರಿಯನ್ನು ಮಿಕ್ಸಿಯಲ್ಲಿ ಅಥವಾ ಗ್ರೈಂಡರ್ ನಲ್ಲಿ ಹದವಾಗಿ ಬೀಸಲು ಅನುಕೂಲವಾಗುವಷ್ಟು ನೀರು ಹಾಕಿಕೊಂಡು ಚನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ಬೀಸುವದು. ನಂತರ ತೆಳುವಾದ ವಸ್ತ್ರವನ್ನು ಪಾತ್ರೆಯ ಬಾಯಿಗೆ ಕಟ್ಟಿದ ದೊಡ್ಡ ಪಾತ್ರೆಯಲ್ಲಿ ಈ ಕಲ್ಕಕ್ಕೆ ಇನ್ನಷ್ಟು ನೀರು ಸೇರಿಸಿ ಸೋಸುವದು . ಹೀಗೆ 2-3 ಬಾರಿ ನೀರು ಸೇರಿಸಿ ಸೋಸಿದ ಮೇಲೆ ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿದ ಆ ತಿಳಿ ನೀರನ್ನು ಹಾಗೇ 4-5 ತಾಸುಗಳ ಕಾಲ ಹಣಿಯಲು ಬಿಡುವದು. ನಂತರ ನಿಧಾನವಾಗಿ ಮೇಲಿನ ನೀರನ್ನು ಚಲ್ಲುತ್ತಾ ಬರಲು ಪಾತ್ರೆಯ ತಳದಲ್ಲಿ ಬಿಳಿ ಹಿಟ್ಟು ಸಂಗ್ರಹವಾಗಿರುವದು ಕಂಡುಬರುವದು. ಈ ಹಿಟ್ಟನ್ನು ಬಿಸಿಲಿನಲ್ಲಿ ಒಣಗಿಸಿ ಸೀಸದ ಬಾಟಲಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವದು. ಇದುವೇ ಮೂಲವ್ಯಾಧಿ ನಿವಾರಕ ಮನೆ ಮದ್ದು. ಪ್ರತಿ ದಿನ ಎರಡು ಬಾರಿ ಒಂದರಿಂದ ಎರಡು ಚಮಚದಷ್ಟು ಒಂದು ಲೋಟ ನೀರಿನಲ್ಲಿ ಸೇವಿಸಿದರೆ ಮೂಲವ್ಯಾಧಿ ಮೊಳಕೆ ಒಣಗಿ ಉದುರಿ ಹೋಗುವದು. 2-3 ವಾರಗಳಲ್ಲಿ ಸಂಪೂರ್ಣ ಗುಣಮುಖರಾಗುವರು. ಇದು ನನ್ನ ಅನುಭವಸಿದ್ಧ ಮನೆಮದ್ದು. ರಕ್ತ ಮೂಲವ್ಯಾಧಿಗೂ ಸಹ ಪರಿಣಾಮಕಾರಿ. ಇದನ್ನು ಬಳಸಿ ‘ ಸೂರಣವಟಿ ’ ಮೂಲವ್ಯಾಧಿ ನಿವಾರಕ ಮಾತ್ರೆ ತಯಾರಿಸುವರು. ಆದರೆ , ಜಠರ, ಕರುಳು, ಚರ್ಮ ರೋಗವುಳ್ಳವರು ವೈದ್ಯರ ಸಲಹೆ ಪಡೆದು ಸೇವಿಸಬೇಕು. ಸೂರಣಗಡ್ಡೆಯನ್ನು ಪಲ್ಯ , ಸಾಂಬಾರ್ ಮಾಡಿ ಸೇವಿಸುವದರಿಂದ ಗುಲ್ಮ, ಹೊಟ್ಟೆಯ ಊತ, ಕೃಮಿರೋಗ, ವಾತರೋಗ,ಕೆಮ್ಮು, ದಮ್ಮು ಇತ್ಯಾದಿ ನಿವಾರಣೆ. 4-5 ಕಿಲೋ ಸುವರ್ಣ ಗಡ್ಡೆಯಿಂದ ಕೇವಲ 200-300 ಗ್ರಾಮ್ ನಷ್ಟು ಸತ್ವವನ್ನು ಸಂಗಹಿಸ ಬಹುದಾಗಿರುವದರಿಂದ ಸ್ವಲ್ಪ ದುಬಾರಿಯಾಗಿ ಕಂಡರೂ ಸಂಪೂರ್ಣ ಫಲಕಾರಿ. .ಸುವರ್ಣ ಗಡ್ಡೆಯನ್ನು ತೆಳುವಾಗಿ ಕತ್ತರಿಸಿ, ಬೇಯಿಸಿ ಬೆಲ್ಲದಲ್ಲಿ ಪಾಕ ತಯಾರಿಸಿದ ಸಿಹಿ ತಿನಸು ತಿನ್ನಲು ಬಹು ಸೊಗಸು.
a. ಟಿ. ಭಟ್ಟ, ಬಗ್ಗೋಣ.
(ದೇವಿಸುತ)