ಆರೋಗ್ಯ
ದಾಸವಾಳ ಔಷಧೀಯ ಗುಣಗಳು
ಕನ್ನಡ:ದಾಸವಾಳ, ದಾಸಾಳ, ದಾಸಣಿಗೆ,ದಾಸವಾಣ
ಸಂಸ್ಕ್ರತ:ಜಪಾಕುಸುಮ
ಹಿಂದಿ:ಗುಡ್ಹರ್, ಗುಡ್ಹಲ್
ತೆಲಗು: ಮಂದಾರವು NB
ಮರಾಠಿ:ಜಾಸವಂದ
“ ಜಪಾಕುಸುಮಂ ಕೇಶ ವಿವರ್ಧನಮ್ ”
(ನಿಘಂಟು ರತ್ನಾಕರ)
“ ದಾಸ ”ಎನ್ನುವದು ಕೇವಲ ದಾಸ್ಯಕ್ಕೆ ಮೀಸಲಲ್ಲ; ಸೌಮ್ಯ, ಸಮಾಧಾನ, ನಿಸ್ವಾರ್ಥ, ತ್ಯಾಗ, ಔಧಾರ್ಯ, ವಿಶ್ವಾಸ, ಆಕರ್ಷಣೆ, ನಂಬಿಕೆ, ಭಕ್ತಿ, ಪರೋಪಕಾರ ಮನೋಭಾವದಿಂದ ಮನವನ್ನು ಗೆಲ್ಲುವದು ಎಂದರ್ಥ. ದಾಸವಾಣಿ, ದಾಸಭಕ್ತಿ, ದಾಸ ವಚನ, ದಾಸಗೀತೆ ಮುಂತಾದ ದಾಸರ ಕೃತಿಗಳಲ್ಲಿ ನಾವು ಯಾವ ರೀತಿ ಸದ್ ಭಾವನೆ, ಸೌಮ್ಯತೆ, ಸುಖ, ಶಾಂತಿ, ಸಂತೋಷ, ಸಮಾದಾನ, ಸಚ್ಛಾರಿತ್ರ್ಯ, ನೆಮ್ಮದಿಯನ್ನು ಪಡೆಯುತ್ತೇವೆಯೋ ಹಾಗೇ ದಾಸವಾಳವು ಕೂಡಾ ತನ್ನ ಸೌಮ್ಯತೆಯಿಂದ ಮಾನವನಿಗೆ ಬಹು ಉಪಯೋಗಿ ಆಗಿದೆಯಲ್ಲದೇ ವಿವಿಧ ಔಷಧಿ ಗುಣಗಳಿಂದಾಗಿ ಅನೇಕ ರೋಗಗಳಿಂದ ಬಳಲುತ್ತಿರುವ ರೋಗಿಗಳ ನೋವನ್ನು ನಿವಾರಿಸುವಲ್ಲಿ ದಾಸ (ಸಜ್ಜನ) ಆಗಿ ನೆರವಾಗುತ್ತಿರುವದು ನಿಸರ್ಗದ ಕೊಡುಗೆಗಳಲ್ಲಿ ಒಂದು. ಇದರ ಹೂವು ಸೌಮ್ಯವಾಗಿ ಕಾಣುವದರಿಂದ ಹಾಗೂ ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ, ನೆಮ್ಮದಿ, ಹಿತ ಸಿಗುವದರಿಂದ ಇದಕ್ಕೆ ಸಂಸ್ಕ್ರತದಲ್ಲಿ ಜಪಾಕುಸುಮ ಎಂದು ಕರೆಯಲಾಗಿದೆ. ದಾಸವಾಳದ ಹೂವಿನ ರಸದಲ್ಲಿ ಹೊಳಪು ತರುವ ಗುಣ ಇರುವದರಿಂದ ಹಿಂದೆ ದಾಸವಾಳದ ಹೂವನ್ನು ಜಜ್ಜಿ ತಮ್ಮ ಬೂಟುಗಳಿಗೆ (ಕಪ್ಪಾಗಿಸಲು ಹಾಗೂ ಹೊಳೆಯಲು) ಪಾಲಿಷ್ ಆಗಿ ಬಳಸುತ್ತಿದ್ದರಿಂದ ಇದಕ್ಕೆ ‘ ಶೂಪ್ಲವರ್ ’ ಎಂದು ಕರೆಯುತ್ತಿದ್ದರೆನ್ನಲಾಗಿದೆ. ದಾಸರಾದವರು ತಮ್ಮನ್ನು ಹೇಗೆ ಉಪಯೋಗಿಸಿಕೊಂಡರೂ ಕುಪಿತರಾಗದೇ ದನಿಯನ ಹಿತವನ್ನೇ ಬಯಸುವರೋ ಅದೇ ರೀತಿ ಈ ಹೂವು ಕೂಡಾ ಹೇಗೆ ಬಳಸಿದರೂ ದೇಹಕ್ಕೆ ಹಿತವನ್ನೇ ಬಯಸುವದರಿಂದ ದಾಸವಾಳ ಎಂದಿರಬಹುದು. ಪ್ರಸಕ್ತ ಹಲವಾರು ಬಣ್ಣದ ಹೂ ಬಿಡುವ ಜಾತಿಗಳನ್ನು ಹೊಂದಿರುವ ದಾಸವಾಳದ ಗಿಡಗಳ ಪೈಕಿ ಹಳೆಯ ತಳಿಗಳಾದ ಕೆಂಪು ಮತ್ತು ಬಿಳಿ ದಾಸವಾಳ ಬಹಳಷ್ಟು ಔಷಧಿ ಗುಣ ಹೊಂದಿದೆ. ಅವುಗಳಲ್ಲಿಯೇ ಬಿಳಿ ದಾಸವಾಳವು ಅತಿ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಬಿಳಿ ದಾಸವಾಳ ಸಿಗದಿದ್ದಾಗ ಕೆಂಪು ದಾಸವಾಳವನ್ನು ಉಪಯೋಗಿಸಬಹುದು. 6-7 ಅಡಿ ಎತ್ತರವಾಗಿ ಶಾಖೋಪಶಾಖೆಗಳಾಗಿ ನೀಳವಾದ ರೆಂಬೆಗಳಿಂದ ಅರ್ಧಗೋಲಾಕಾರದ ಆಕೃತಿಯಲ್ಲಿ ಕಾಣುವ ಗಿಡದ ಎಲೆ ಹೃದಯಾಕಾರದಲ್ಲಿದ್ದು ಗರಗಸದ ಅಂಚಿನಿಂದ ತುದಿಯಲ್ಲಿ ಚೂಪಾಗಿದ್ದು, ಐದು ದಳಗಳುಳ್ಳ ಹೂವು ವಾಸನೆ ರಹಿತವಾಗಿದ್ದು, ತಿಳಿ ಹಳದಿ ಮಿಶ್ರಿತ ಬಿಳಿ ಅಥವಾ ಕುಂಕುಮದ ಕೆಂಪು ಬಣ್ಣ ಹೊಂದಿರುತ್ತದೆ. ಬೇರು, ತೊಗಟೆ, ಎಲೆ ಮತ್ತು ಹೂವು ಔಷಧಿಯುಕ್ತವಾಗಿದೆ.
ದಾಸವಾಳವು ಮಧುರ, ಕಹಿ, ಲಘು, ಸೌಮ್ಯ, ಸ್ತಂಭಕ, ಸ್ನಿಗ್ಧ, ಕಹಿ ಉಷ್ಣವೀರ್ಯವುಳ್ಳದ್ದಾಗಿದ್ದು ರಕ್ತಶೋಧಕ, ಪಿತ್ತಶಾಮಕ, ಧಾತುಕಾರಕ, ಹೃದ್ರೋಗ ನಿವಾರಕ, ವಿಕಾರ ಶಮನಕ, ಚೈತನ್ಯಕಾರಕ, ಸ್ತ್ರೀರೋಗ ಪರಿಹಾರಕ, ಕೇಶವರ್ಧಕ ಹಾಗೂ ಉದರರೋಗ ನಿವಾರಕವಾಗಿದೆ. ಇದರ ಹೂವು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿ ನಪುಂಸಕತ್ವವನ್ನು ಹೋಗಲಾಡಿಸುವದು ಹಾಗೂ ಸ್ತ್ರೀಯರ ಗರ್ಭ ದೋಷಗಳನ್ನು ನಿವಾರಿಸಿ ಸಂಭೋಗಾಸಕ್ತಿಯನ್ನು ವರ್ಧಿಸುವದು ಗಮನಾರ್ಹ ವಿಷಯ.
ಎತ್ತ ನೋಡಿದರತ್ತ ರಕ್ತದೊತ್ತಡ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಮಿತಿ ಮೀರುತ್ತಿರುವ ಈ ಸಮಯದಲ್ಲಿ ಚಮತ್ಕಾರಿಕವಾಗಿ ರಕ್ತದೊತ್ತಡವನ್ನು ನಿಯಂತ್ರಿಸಬಲ್ಲ ದಾಸವಾಳ (ಕೆಂಪು) ಹೂವಿನ ಔಷಧಿ ಮಂತ್ರ ಶಕ್ತಿಯ ಧನ್ವಂತರಿ ಉಲ್ಲೀಖವನ್ನು ಉಲ್ಲೇಖಿಸದಿದ್ದರೆ ದಾಸ(ವಾಳ)ಗೆ ಮೋಸ ಮಾಡಿದಂತಾದೀತು. ಕೆಂಪು ದಾಸವಾಳದ ಹೂವನ್ನು ನೀರಿನಲ್ಲಿ ಗಿವುಚಿ ಅಥವಾ ಅರೆದು ಆ ರಸವನ್ನು ಸೋಸಿ ಪ್ರತಿದಿನ ಹಸಿದ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ಸೇವಿಸುವದರಿಂದ ರಕ್ತದೊತ್ತಡವು ಆಶ್ಚರ್ಯಕರವಾಗಿ ನಿಯಂತ್ರಣಕ್ಕೆ ಬರುತ್ತದೆ.
ಬಿಳಿ ದಾಸವಾಳದ ಮೊಗ್ಗನ್ನು ಹಾಲಿನಲ್ಲಿ ಗಿವುಚಿ ಆಥವಾ ಅರೆದು ಸೇವಿಸಿದರೆ ಆಮಶಂಕೆ, ಅತಿಸಾರ, ರಕ್ತಾತಿಸಾರ, ಹೊಟ್ಟೆನೋವು ಇತ್ಯಾದಿ ಉಷ್ಣ ರೋಗದಿಂದಾದ ಎಲ್ಲಾ ರೋಗಗಳು ಶಮನವಾಗುವವು.
ಬಿಳಿ ಅಥವಾ ಕೆಂಪು 8-10 ದಾಸವಾಳದ ಮೊಗ್ಗನ್ನು ಅರೆದು ಹಾಲು ಸಕ್ಕರೆ ಸೇರಿಸಿ ಪ್ರತಿದಿನ ಮುಂಜಾನೆ ಹಸಿದ ಹೊಟ್ಟೆಯಲ್ಲಿ ಏಳು ದಿನ ಸೇವಿಸಿದರೆ ಬಿಳಪು ಹೋಗುವದು, ಮುಟ್ಟಿನ ನೋವು ಇತ್ಯಾದಿ ಸ್ತ್ರೀಯರ ಗರ್ಭಾಶಯದ ವಿವಿಧ ವಿಕಾರಗಳು ಶಮನವಾಗುವದು.
ಬಿಳಿ ಅಥವಾ ಕೆಂಪು ದಾಸವಾಳದ ಹೂವನ್ನು ಹಸಿಯಾಗಿಯೇ ಪ್ರತಿದಿನ ತಿನ್ನುವದರಿಂದ ಅಥವಾ ಜೇನುತುಪ್ಪದೊಂದಿಗೆ ಸೇವಿಸುವದರಿಂದ ಮಾನಸಿಕ ವಿಕಾರಗಳು, ಭ್ರಮೆ, ಉನ್ಮಾದ ಇತ್ಯಾದಿ ಮಿದುಳಿನ ದೌರ್ಬಲ್ಯ ಹತೋಟಿಗೆ ಬರುವದು.
ಬಿಳಿ ಅಥವಾ ಕೆಂಪು ದಾಸವಾಳದ ಎರಡು ಹೂವನ್ನು ಹಸಿಯಾಗಿಯೇ ಪ್ರತಿದಿನ ಜಿಗಿದು ತಿಂದರೆ ರಕ್ತ ಮೂಲವ್ಯಾಧಿ ನಿಯಂತ್ರಣಕ್ಕ ಬರುವದು.
ಬಿಳಿ ಅಥವಾ ಕೆಂಪು 8-10 ದಾಸವಾಳದ ಮೊಗ್ಗನ್ನು ಅರೆದು ಜೇನುತುಪ್ಪ ಸೇರಿಸಿ ಪ್ರತಿದಿನ ಮುಂಜಾನೆ ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಕೆಲವೇ ದಿನಗಳಲ್ಲಿ ಹೃದ್ರೋಗ, ಉರಿಮೂತ್ರ, ಮೂತ್ರ ತಡೆ ಶಮನಗೊಳ್ಳುವದು.
ಬಿಳಿ ದಾಸವಾಳದ ಹೂವು ಹಾಗೂ ಕಸಕಸೆಯನ್ನು ಹಾಲಿನಲ್ಲಿ ಅರೆದು ಕುದಿಸಿ ಅದಕ್ಕೆ ಸ್ವಲ್ಪ ಶುದ್ಧಬೆಣ್ಣೆ ಸೇರಿಸಿ ಸೇವಿಸಿದರೆ ಆಮಾಂಶದಿಂದಾದ ಹೊಟ್ಟೆ ಮುರಿತ ಸಂಪೂರ್ಣವಾಗಿ ನಿಲ್ಲುವದು.(3-4 ದಿನ)
ಕೆಂಪು ದಾಸವಾಳದ ಹೂವನ್ನು ಅರೆದು, ಸಮತೂಕ ಕಲ್ಲುಸುಣ್ಣ ಹಾಕಿ ಅರೆದು ಒಂದು ಸಮಯ ಹತ್ತು ದಿವಸ ಗುಳಿಗೆ ಪ್ರಮಾಣದಲ್ಲಿ ಸೇವಿಸುವದರಿಂದ ರಕ್ತ ಪ್ರದರ ನಿಯಂತ್ರಣಕ್ಕೆ ಬರುವದು. (ಅನುಭವಿಕ ವೈದ್ಯ ಗ್ರಂಥದಿಂದ)
ದಾಸವಾಳದ ಹೂವಿನ ರಸ ಲೇಪನವನ್ನು ರಕ್ತಸ್ರಾವವಾಗುತ್ತಿರುವ ಗಾಯಕ್ಕೆ ಲೇಪಿಸುತ್ತಿದ್ದರೆ ಕೂಡಲೇ ರಕ್ತಸ್ರಾವ ನಿಲ್ಲುವದು ಹಾಗೂ ಗಾಯ ಮಾಗುವದು.
ಇದರ ಹೂವಿನ ರಸವನ್ನು ಬಿಸಿ ಮಾಡಿ 5-6 ಹನಿಗಳಷ್ಟು ಕಿವಿಗೆ ಎರೆಯುವದರಿಂದ ಕಿವಿಗಳಲ್ಲಿ ಬರುವ ರಕ್ತ ನಿಲ್ಲುವದು.
ಬಿಳಿ ದಾಸವಾಳದ ಎಲೆಯನ್ನು ಅಕ್ಕಿಯ ಜೊತೆಯಲ್ಲಿ ರೊಟ್ಟಿ ಆಥವಾ ದೋಸೆ ಅಥವಾ ಇಡ್ಲಿ ಮಾಡಿ ಮುಂಜಾನೆ 4-5 ದಿನ ಸೇವಿಸಿದರೆ ಆಗಾಗ ಶರೀರದಲ್ಲಿ ಕುರು (ಬಾವು) ಆಗುವದು ನಿಲ್ಲುವದು.
ಬಿಳಿ ದಾಸವಾಳದ ಸೊಪ್ಪನ್ನು ನೀರಿನಲ್ಲಿ ಗಿವುಚಿ ತಲೆಗೆ ಲೇಪಿಸಿಕೊಂಡು ಸಮಯ ಬಿಟ್ಟು ಸ್ನಾನ ಮಾಡುವದರಿಂದ ತಲೆ ಕೂದಲು ಉದುರುವದು ನಿಲ್ಲುವದು.
ಬಿಳಿ ದಾಸವಾಳದ ಹೂವನ್ನು ಒಣಗಿಸಿ ಪುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಸೇರಿಸಿ ತಲೆಗೆ ಲೇಪಿಸಿಕೊಳ್ಳುವದರಿಂದ ಕೂದಲು ನುಣುಪಾಗಿಯೂ ಉದ್ದವಾಗಿಯೂ ಬೆಳೆಯುವದು.
ಬಿಳಿ ದಾಸವಾಳ ಹೂಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ವಸ್ತ್ರಗಾಳ ಮಾಡಿ ಅರ್ಧ ಚಮಚ ಈ ಚೂರ್ಣಕ್ಕೆ ಒಂದು ಚಮಚ ಕಲ್ಲುಸಕ್ಕರೆ ಸೇರಿಸಿ ಹಾಲಿನಲ್ಲಿ ಕುದಿಸಿ ಮೂರು ಹೊತ್ತು ಕುಡಿಯುವದರಿಂದ ಅಥವಾ ದಾಸವಾಳದ ಹೂವು + ಗುಲಾಬಿ ಹೂ ಚೂರ್ಣ ಮಾಡಿ ಮೇಲಿನಂತೆ ಹಾಲು ಸಕ್ಕರೆಯಲ್ಲಿ ಸೇವಿಸಿದರೆ ಲೈಂಗಿಕ ಸಾಮಥ್ರ್ಯ ವೃದ್ಧಿಗೊಂಡು ಸಂಭೋಗಾಸಕ್ತಿ ಹೆಚ್ಚುವದು.
ದಾಸವಾಳದ ಹೂ ಹಾಗೂ ಎಲೆಯನ್ನು ಸಮ ಪ್ರಮಾಣದಲ್ಲಿ ಕೂಡಿಸಿ ಅರೆದು ರಸವನ್ನು ಅಷ್ಟೇ ತೂಕದ ಎಳ್ಳೆಣ್ಣೆಯಲ್ಲಿ ಸೇರಿಸಿ ಮಂದಾಗ್ನಿಯಲ್ಲಿ ಕುದಿಸಿ ಎಣ್ಣೆಯೊಂದೇ ಉಳಿಯುವಂತಾದಾಗ ತಣಿಸಿ ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಪ್ರತಿದಿನ ಈ ತೈಲವನ್ನು ಕೂದಲಿನ ಬುಡಕ್ಕೆ ತಾಗುವಂತೆ ಲೇಪಿಸಿಕೊಳ್ಳುವದರಿಂದ ಕೂದಲು ಸೊಂಪಾಗಿ ಕಪ್ಪಗಾಗಿ ಉದ್ದವಾಗಿ ಬೆಳಯುತ್ತದೆಯಲ್ಲದೇ ತಲೆಹೊಟ್ಟು, ಕೂದಲು ಉದುರುವದು, ತಲೆನೋವು ಇಲ್ಲವಾಗುವದು. ಸೋಸಿ ಉಳಿದ ಚರಟ(ಗಸಿ)ಯನ್ನು ತಲೆಗೆ ಲೇಪಿಸಿಕೊಂಡು ಆ ನಂತರ ಸ್ನಾನ ಮಾಡುವದರಿಂದ ಕೂಡಾ ಈ ಮೇಲಿನ ಫಲ ಲಭಿಸುವದು.
ದಾಸವಾಳದ ಹೂವುಗಳನ್ನು ಗೋಮೂತ್ರದಲ್ಲಿ ಅಥವಾ ಲಿಂಬೆರಸದಲ್ಲಿ ಅರೆದು ಗಂಧಮಾಡಿ ಆ ಗಂಧವನ್ನು ಕೂದಲಿನ ಬುಡಕ್ಕೆ ಲೇಪಿಸಿಕೊಂಡು 3-4 ತಾಸು ಬಿಟ್ಟು ಸ್ನಾನ ಮಾಡಿದರೆ ತಿಂಗಳೊಪ್ಪತ್ತಿನಲ್ಲಿ ಕೂದಲು ವೃದ್ಧಿಗೊಂಡು ಕಾಂತಿಯುತವಾಗಿ ಬೆಳಯುವದು. “ ಜಪಾಕುಸುಮಂ ಕೇಶ ವಿವರ್ಧನಮ್ ” (ನಿಘಂಟು ರತ್ನಾಕರ).
ಬಿಳಿ ದಾಸವಾಳದ ಎಲೆ ಹಾಗೂ ಮುದ್ರೆಗಿಡದ ಎಲೆ ಐದೈದು ಜಜ್ಜಿ ಅರೆದು ರಸ ತೆಗದು ಸೋಸಿ ಆಕಳ ಹಾಲಿನಲ್ಲಿ ವಯೋಮಾನಕ್ಕನುಸರಿಸಿ 4-5 ಚಮಚ ವರೆಗೆ ವಾರದಲ್ಲಿ ಮೂರು ದಿನ ಸೇವಿಸುವದರಿಂದ ಶರೀರದ ಅಶಕ್ತತೆಯಿಂದ ವಿಪರೀತ ಬೆವರು ಬರುವದು ಗುಣವಾಗುವದು ಮತ್ತು ದೇಹಕ್ಕೆ ನವ ಚೈತನ್ಯವನ್ನುಂಟು ಮಾಡಿ ಶಕ್ತಿಯನ್ನು ವೃದ್ಧಿಸುವದು.
– ಆರ್ . ಟಿ . ಭಟ್ , ಬಗ್ಗೋಣ
( ನಿವೃತ್ತ ಅರಣ್ಯ ಅಧಿಕಾರಿಗಳು )