ಆರೋಗ್ಯ
ಅತ್ಯಮೂಲ್ಯ ಗರಿಕೆ
ಗರಿಕೆ/ದೂರ್ವೆ
ಸಂ: ದೂರ್ವಾ
ಹಿಂ: ದೂಬ
ಮ:ಹರಿಯಾಳೀ
ರೂಢಿನಾಮ: ಗರಿಕೆ ಹುಲ್ಲು, ಗರ್ಕೆ, ದೂರ್ವೆ
ನೂರೊಂದು ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಮಹಾ ಗಣಪತಿಗೆ ಅರ್ಪಿಸುವ ದೂರ್ವೆಯ ಹರಕೆ ನಮ್ಮದಾದರೆ, ಹಲವೊಂದು ರೋಗಿಗಳ ಸಂಕಟ ಪರಿಹಾರಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡು ರೋಗ ನಿವಾರಣೆ ಮಾಡುವ ಬಯಕೆ ಈ ದೂರ್ವೆ(ಗರಿಕೆ)ಯದು. ದೇವರ ಪ್ರೀತ್ಯರ್ಥವಾಗಿ ವಿಶೇಷವಾಗಿ ಪೂಜೆಗೆ ಬಳಸಲಾಗುವ ದೂರ್ವೆ (ಗರಿಕೆ ಹುಲ್ಲು) ಆಯುರ್ವೇದ ಔಷಧಿಗಳಲ್ಲಿ ಅತಿ ಮಹತ್ವ ಪಡೆದಿದೆ. ಇದು ದನಕರು, ಆಡು, ಕುರಿ, ಕುದುರೆ,ಮೊಲ, ಜಂಕೆಗಳಿಗೆ ಬಹು ಪ್ರಿಯವಾದ ಹಾಗೂ ರುಚಿಕರವಾದ ಆಹಾರವಲ್ಲದೇ ಅತ್ಯಂತ ಆರೋಗ್ಯಕರವಾದ ಶಕ್ತಿದಾಯಕ ಮೇವೂ ಆಗಿರುತ್ತದೆ. ನಮ್ಮ ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ವಿಶೇಷವಾಗಿ ಕಂಡು ಬರುವ ಇದರ ಕಾಂಡವು ಮೃದುವಾಗಿದ್ದು ನೆಲದ ಮೇಲೆ ಹರಡಿಕೊಂಡು ಬೆಳಯುತ್ತದೆ. ಗೆಣ್ಣುಗಳಲ್ಲಿ ಬೇರು ಮೂಡಿ ಶಾಖೋಪಶಾಖೆಗಳಾಗಿ ಬೆಳೆದು ವಿಸ್ತಾರವಾಗಿ ಹಸಿರು ಬಣ್ಣದ ಸೂಜಿಯಂತೆ ಉದ್ದ ರೇಖಿಯಾಕಾರದ ಎಲೆಗಳನ್ನು ಹೊಂದಿ ಬೆಳೆಯುತ್ತದೆ. ಮೈದಾನದ ಅಲಂಕಾರಕ್ಕಾಗಿ ಹಾಗೂ ನಿತ್ಯ ಪೂಜೆಗಾಗಿ ಕಾಂಡವನ್ನು ನೆಟ್ಟು ಬೆಳಸುತ್ತಾರೆ. ಗರಿಕೆಯಲ್ಲಿ ಬಿಳಿ, ನೀಲಿ (ಕರಿ), ಪುರುಷ, ಸ್ತ್ರೀ ಪ್ರಕಾರಗಳಿವೆ. ಇವುಗಳಲ್ಲಿ ಕರಿ ದೂರ್ವೆ ಶ್ರೇಷ್ಠವೆಂದು ಪರಿಘಣಿತವಾಗಿದ್ದರೂ ಉಳಿದೆಲ್ಲವುಗಳೂ ಒಂದೇ ಔಷಧಿ ಗುಣ ಹೊಂದಿದೆ.
ಗರಿಕೆಯು ರಕ್ತಪಿತ್ತ, ರಕ್ತದೋಷ, ರಕ್ತಹೀನತೆಗೆ ದಿವ್ಯವೌಷಧವಾಗಿದೆಯಲ್ಲದೇ ದೇಹದ ಯಾವುದೇ ಭಾಗದಲ್ಲಿಯ ರಕ್ತ ಸೋರುವಿಕೆಯನ್ನು ನಿಲ್ಲಿಸುವ ಅದ್ಭುತ ಔಷಧಿ ಗುಣ ಪಡೆದಿದೆ. ಚರ್ಮವ್ಯಾಧಿ, ಮೂಲವ್ಯಾಧಿ, ದುಷ್ಟವ್ರಣ, ಪಾಂಡು, ಕ್ಷಯ ರೋಗ ನಿವಾರಕ, ಶಕ್ತಿವರ್ಧಕ ಹಾಗೂ ವೀರ್ಯವರ್ಧಕವೂ ಆಗಿದೆ. ಗರಿಕೆಯಲ್ಲಿ ಹತ್ತಕ್ಕಿಂತ ಹೆಚ್ಚು ಆಹಾರ ಸತ್ವ (ವಿಟಮಿನ್) ಇದೆಯೆಂದು ಇತ್ತೀಚೆಗಿನ ಸಂಶೋಧನೆಯಿಂದ ತಿಳಿದು ಬಂದಿರುತ್ತದೆ. ವಿಶೇಷವಾಗಿ ಸ್ತ್ರೀಯರಿಗೆ ಅತ್ಯಂತ ಉಪಯುಕ್ತ ಗಿಡ ಮೂಲಿಕೆಯಾಗಿದ್ದು, ಪದರ ರೋಗ, ಮುಟ್ಟಿನ ಹೊಟ್ಟೆನೋವು, ಅಕಾಲಿಕ ಋತುಸ್ರಾವ ಇತ್ಯಾದಿ ಹಲವು ಸ್ತ್ರೀ ರೋಗಗಳನ್ನು ಚಮತ್ಕಾರಿಕ ರೀತಿಯಲ್ಲಿ ಗುಣ ಪಡಿಸುತ್ತದೆಯಲ್ಲದೇ ದೇಹದಲ್ಲಿಯ ಕ್ಷಾರದ ಕೊರತೆಯನ್ನು ನಿವಾರಿಸುವ ಸಾಮಥ್ರ್ಯ ಹೊಂದಿದೆ. ನಾಗರ ಹಾವಿನ ಕಡಿತದ ವಿಷ ನಿವಾರಣೆಗಾಗಿ ಇದನ್ನು ಬಳಸಲಾಗುತ್ತಿದ್ದು, ಡಾ||ವೈ.ಎಂ. ಪರಮೇಶ್ವರಯ್ಯನವರ ಗರಿಕೆ (ದೂರ್ವೆ)ಯ ಚಿಕಿತ್ಸಾ ವಿಧಾನದಲ್ಲಿ ಹೇಳುವದಾದರೆ ನಾಗರಹಾವು ಕಡಿತಕ್ಕೊಳಗಾದವರಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಗರಿಕೆ ಹುಲ್ಲಿನ ರಸ ಕುಡಿಸುತ್ತಿರಬೇಕು. ರೋಗಿಯು ಹಸಿರು, ಹಳದಿ ಬಣ್ಣದ ವಾಂತಿ ಮಾಡಿದರೆ ವಿಷ ಪರಿಹಾರವೆಂದು ತಿಳಿಯಬೇಕು. ಕಣ್ಣು, ಕಿವಿ, ಮೂಗುಗಳಲ್ಲಿ ಈ ರಸ ಸೋಸಿ ಕೆಲವು ಹನಿ ಬಿಡಬೇಕು ಹಾಗೂ ಗರಿಕೆ ಹುಲ್ಲಿನ ರಸ ಮತ್ತು ಜೇನುತುಪ್ಪ ಒಂದೊಂದು ಚಮಚ ಬೆರಿಸಿ ಪ್ರತಿದಿನ ಮುಂಜಾನೆ ಹಸಿದ ಹೊಟ್ಟೆಯಲ್ಲಿ ಕುಡಿಯುವದರಿಂದ ರಕ್ತ ಹೀನತೆ, ಪಾಂಡು, ಸ್ರೀಯರ ಮುಟ್ಟುನೋವು, ಸ್ರಾವ ನಿವಾರಣೆಯಾಗುವದು ಎಂದಿರುವದು ಗರಿಕೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಗರಿಕೆ ಹುಲ್ಲನು ತಂದು | ಹುರಿದು ತುಪ್ಪದಿ ನೀನು
ಕರಕು ಮಾಡುತಲದರ ಹಚ್ಚಿದರೆ
ಪರಿಹಾರ ಕೈಕಾಲು ವ್ರಣಕೆಂದ ವಿಶ್ವೇಶ ||
ಗರಿಕೆ ಹುಲ್ಲನು ತೊಳೆದು | ಅರೆದು ರಸವನು ತೆಗೆದು
ಸುರಿ ಜೇನನು ಕುಡಿದರೆ
ಪರಿಹಾರ ರಕ್ತಪಿತ್ತಕ್ಕೆ ಎಂದ ವಿಶ್ವೇಶ ||
ಗರಿಕೆಯ ಕುರಿತಾದ ಬಾಕ್ರಬೈಲು ಶ್ರೀ ವಿಶ್ವೇಶ್ವರ ಭಟ್ಟರ ಈ ಔಷಧಿ ಗುಣ ವರ್ಣನೆ ನೆನಪಿನಂಗಳದಲ್ಲಿ ಶಾಶ್ವತವಾಗಿ ಉಳಿಯುವಂತಹದು. ವಿವಿಧ ಆಯುರ್ವೇದ ಗಂಥಗಳಲ್ಲಿ ಉಲ್ಲೇಖಿಸಲಾದ ಗರಿಕೆಯ ಅತ್ಯಂತ ಉಪಯುಕ್ತ ಔಷಧಿಗುಣಗಳೆಂದರೆ,
ಬೇರು ಸಹಿತ ಕಿತ್ತ ದೂರ್ವೆಯನ್ನು ತೊಳೆದು ಅರೆದು ನೀರಿನಲ್ಲಿ ಬತ್ತಿಸಿ ಕಷಾಯ ಮಾಡಿ ತಣಿದ ಮೇಲೆ ಸೋಸಿ ಹಾಲು ಹಾಗೂ ಸಕ್ಕರೆ ಹಾಕಿ ಕುಡಿಯುವದರಿಂದ ಧಾತು ವೃದ್ಧಿಯಾಗುತ್ತದೆ ಹಾಗೂ ಅಶಕ್ತತೆ, ಆಮಶಂಕೆ ನಿವಾರಣೆಯಾಗುತ್ತದೆ.
ಬೇರು ಸಹಿತ ಕಿತ್ತ ದೂರ್ವೆಯನ್ನು ತೊಳೆದು ಅರೆದು ನೀರಿನಲ್ಲಿ ಬತ್ತಿಸಿ ಕಷಾಯ ಮಾಡಿ ತಣಿದ ಮೇಲೆ ಸೋಸಿ ಲಿಂಬೆರಸ ಬೆರೆಸಿ ಹಸಿದ ಹೊಟ್ಟೆಯಲ್ಲಿ ಅರ್ಧ ಮಾಸ ಸೇವಿಸಿದರೆ ಅಲ್ಸರ್ ನಿವಾರಣೆಯಾಗುತ್ತದೆ.
ಗರಿಕೆ ಹುಲ್ಲು ಅರೆದು ಅರಿಶಿಣ ಹುಡಿ ಸೇರಿಸಿ ಲೇಪಿಸಿಕೊಳ್ಳುವದರಿಂದ ರಕ್ತ, ಕೀವು ಸೋರುವದು ಹಾಗೂ ಅನೇಕ ಚುರ್ಮರೋಗ ನಿವಾರಣೆಯಾಗುವದು.
ಚಿಗುರಿದ ದೂರ್ವೆ ಕುಡಿಯನ್ನು ನಯವಾಗಿ ಅರೆದು ಹಣೆಗೆ 5-6 ದಿನ ಎರಡು ಹೊತ್ತು ಲೇಪಿಸಿಕೊಳ್ಳುವದರಿಂದ ತಲೆನೋವು ರೋಗ ಶಮನ.
ದೂರ್ವೆ ಹುಲ್ಲಿನ ರಸಕ್ಕೆ 4-5 ಕಾಳು ಮೆಣಸಿನ ಪುಡಿ ಬೆರಿಸಿ ಲೇಪಿಸಿಕೊಳ್ಳುವದರಿಂದ ಸಂದುನೋವು, ಒಡೆತ, ಕೈಕಾಲು ಜಿಗಿತ ಶಮನ.
ಗರಿಕೆ ಹುಲ್ಲಿನ ಬೇರನ್ನು ಜಜ್ಜಿ ಅದರ 5-6 ರಸವನ್ನು ಮೂಗಿಗೆ ಬಿಡುವದರಿಂದ ಮೂಗಿನಲ್ಲಿ ರಕ್ತ ಬರುವ ರೋಗ ನಿವಾರಣೆಯಾಗುವದು.
ದೂರ್ವೆಕುಡಿ, ಒಂದೆಲಗ, ಹುಳಿಕಂಚಿ ಕುಡಿಗಳನ್ನು ತಂಬಳಿ ಮಾಡಿ ಕುಡಿಯುವದರಿಂದ ನೆಗಡಿ, ಜ್ವರ ವಾಸಿ.
ದೂರ್ವೆ ಹಾಗೂ ತುಳಸಿ ಎಲೆಯನ್ನು ಅರೆದು ಲೇಪಿಸಿಕೊಳ್ಳುವದರಿಂದ ಇಸಬು, ಗಜಕರ್ಣ ದದ್ದು ಇತ್ಯಾದಿ ಚರ್ಮರೋಗ ನಿವಾರಣೆ.
ಗರಿಕೆ ಹುಲ್ಲಿನ ರಸ ಹಾಗೂ ಜೇನು ತುಪ್ಪ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ಅರೋಗ್ಯ ಸುಧಾರಣೆಯಾಗುವದು.
ದೂರ್ವೆ ಹುಲ್ಲಿನ ರಸವನ್ನು ಹಾಲಿನೊಂದಿಗೆ ಸೇವಿಸುವದರಿಂದ ಗರ್ಭಿಣಿಯರ ರಕ್ತಸ್ರಾವ ಶಮನ ಹಾಗೂ ದೇಹಕ್ಕೆ ಇದು ತಂಪು ನೀಡುತ್ತದೆ.
ಗರಿಕೆ ಹುಲ್ಲನ್ನು ಹುರಿದು ಗಂಧ ಮಾಡಿ ಎಣ್ಣೆ ಬೆರಿಸಿ ಲೇಪಿಸುವದರಿಂದ ಸುಟ್ಟಗಾಯ ಶಮನ.
ಗರಿಕೆ ಹುಲ್ಲಿನ ಕಾಢ ಸೇವನೆಯಿಂದ ಉರಿಮೂತ್ರ ರೋಗ ನಿವಾರಣೆ.
ದೂರ್ವೆಯ ಕಷಾಯ ಸೇವನೆಯಿಂದ ಪಿತ್ತ ನಿವಾರಣೆಯಾಗುವದು.
.ಆರ್ . ಟಿ. ಭಟ್ಟರು , ಬಗ್ಗೋಣ