
ಕೊಲ್ಕತ್ತಾ : ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ, ಪ್ರಾಮಾಣಿಕವಾಗಿ ಸುದ್ದಿಗಳನ್ನ ಪ್ರಕಟಿಸುವುದು ವರದಿಗಾರನ ಮೂಲಭೂತ ಹಕ್ಕು. ಸರಿಯಾದ ರೀತಿಯ ವರದಿಗಾರಿಕೆಯಿಂದ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ.
ಖಾಸಗಿ ಪತ್ರಕರ್ತರೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.
ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಸುದ್ದಿ ಮಾಡಿದ್ದರು. ಪೊಲೀಸರು ಮತ್ತು ಕೆಲ ರೆವೆನ್ಯೂ ಅಧಿಕಾರಿಗಳ ವಿರುದ್ಧ ವರದಿ ಪ್ರಸಾರವಾಗಿತ್ತು. ಆದರೆ ಅಕ್ರಮ ಮಾಡಿದವರನ್ನ ಬಿಟ್ಟು ಪೊಲೀಸರು, ವರದಿಗಾರನ ಮೇಲೆ 3 FIR ಹಾಕಿದ್ದರು. ಪೊಲೀಸರು ಹಣ ಪಡೆದು ಅಕ್ರಮಕ್ಕೆ ಸಾಥ್ ನೀಡಿದ್ದಾರೆಂದು ಪತ್ರಕರ್ತ ವರದಿ ಮಾಡಿದಕ್ಕೆ, ಜೂನ್ 2ನೇ ತಾರೀಖು ಆತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ವಿಚಾರವಾಗಿ ಪತ್ರಕರ್ತ ಜಾಮೀನಿಗಾಗಿ ಹೈಕೋರ್ಟ್ ಮೇಟ್ಟಿಲೇರಿದ್ದರು.
ಈ ಬಗ್ಗೆ ನ್ಯಾಯ ಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಬಿಬೆಕ್ ಚೌಧುರಿ ಅವರ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ವರದಿಗಾರನ ಪರ ವಕೀಲ ನಜೀರ್ ಅಹ್ಮದ್ ಹಾಜರಾಗಿ ವಾದಿಸಿದ್ದರು. ಮೇಲ್ನೋಟಕ್ಕೆ ಪ್ರಕರಣದಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆ, ಸುದ್ದಿಗಳನ್ನ ಪ್ರಕಟಿಸುವುದು ಪತ್ರಿಕಾ ವರದಿಗಾರನ ಮೂಲಭೂತ ಹಕ್ಕು. ಅದು ಆಡಳಿತ ಪಕ್ಷಕ್ಕೆ, ಸರ್ಕಾರಕ್ಕೆ ರುಚಿಕರವಾಗದಿರ ಬಹುದು. ಆದರೆ ಪೊಲೀಸರು ಲಂಚ ಪಡೆದುಕೊಂಡಿರುವ ಆರೋಪ ಅಲ್ಲಗಳೆಯುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಇಂತಹ ವರದಿ ಮಾಡುವ ವರದಿಗಾರರ ಧ್ವನಿಯನ್ನು ಹತ್ತಿಕ್ಕುವ ಕೆಲಸವಾಗಿದೆ. ಕೇಸ್ ದಾಖಲಿಸಿ ಅವರನ್ನ ಬೆದರಿಸುವಂತಾಗಿದೆ. ಪೊಲೀಸರು ತಮ್ಮವರನ್ನ ಉಳಿಸಿಕೊಳ್ಳಲು ಸ್ವಾರ್ಥಕ್ಕೆ ಅಧಿಕಾರ ಬಳಸಿದ್ದಾರೆ. ವರದಿಗಾರನ ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಯತ್ನಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು.
ವರದಿಗಾರನಿಗೆ ಸದ್ಯ ಜಾಮೀನು ಮಂಜೂರು ಮಾಡಲಾಗಿದೆ. ಜೊತೆಗೆ ಅವರ ವರದಿ ಮೇಲೆ ಕೇಸ್ ದಾಖಲಿಸಬೇಕು. ಅಕ್ರಮ ಎಸಗಿರುವವರ ವಿರುದ್ಧ ತನಿಖೆಯಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ