ರಾಜ್ಯ

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮ ಕುರಿತು ಸಮಾಲೋಚನಾ ಸಭೆ

ಧಾರವಾಡ : ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮ ಕುರಿತಂತೆ ಚರ್ಚಿಸಲು ರಾಜ್ಯಮಟ್ಟದ ಸಮಾಲೋಚನಾ ಸಭೆಯನ್ನು ಧಾರವಾಡದಲ್ಲಿ ಸೆಪ್ಟೆಂಬರ್ 26, 2020 ರಂದು ನಡೆಸಲಾಯಿತು. ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಯೋಜಿಸಿದ್ದ ಈ ಸಮಾಲೋಚನಾ ಸಭೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ವೀರಣ್ಣ ಮತ್ತಿಕಟ್ಟಿ ಯವರು ಉದ್ಘಾಟನೆ ಯನ್ನು ನೆರೆವೇರಿಸಿದರು.

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ ನ (ಎಐಪಿಟಿಎಫ್) ಹಿರಿಯ ಉಪಾಧ್ಯಕ್ಷರಾದ ಶ್ರೀ ಬಸವರಾಜ ಗುರಿಕಾರರವರು ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿಸಿಎಫ್‌ನ ಮಹಾ ಪೋಷಕರಾದ ಡಾ.ನಿರಂಜನಾರಾಧ್ಯಾ. ವಿ. ಪಿ. ರವರು ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುರಿತಂತೆ ವಿಷಯ ಮಂಡಿಸಿದರು. ಶ್ರೀಮತಿ ರತ್ನಾ ಕವಲಗೇರಿ, ಎಸ್‌. ಎಫ್‌. ಸಿದ್ಧನಗೌಡ ಹಾಗು ಮೊಯ್ಯುದ್ದಿನ್‌ ಕುಟ್ಟಿ ಪ್ರತಿಕ್ರಿಯೆ ನೀಡಿದರು. ವಿಸ್ತೃತ ಮುಕ್ತ ಚರ್ಚೆಯ ನಂತರ ಸಮಾಲೋಚನಾ ಸಭೆಯಲ್ಲಿ ಈ ಕೆಳಗಿನ ನಿರ್ಣಯಗಳನ್ನು ಅಂಗೀಕರಿಸಲಾಯಿತು.

💠 ರಾಷ್ಟ್ರೀಯ ಶಿಕ್ಷಣ ನೀತಿಯು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಯಾವುದೇ ನಿರ್ಧಿಷ್ಟ ಪ್ರಸ್ತಾವನೆ ಅಥವಾ ಬದ್ಧತೆಯನ್ನು ಹೊಂದಿಲ್ಲದ ಕಾರಣ ನೀತಿಯನ್ನು ತಿರಸ್ಕರಿಸಲು ಸಭೆ ತೀರ್ಮಾನಿಸಿತು.

💠 ಎನ್‌ಇಪಿ ಸಂವಿಧಾನವು ಕೊಡಮಾಡಿದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸಿ ಆರ್‌ಟಿಇ ಕಾಯ್ದೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.

💠 ಆರ್‌ ಟಿ ಇ ಕಾಯಿದೆಯಯ ಸೆಕ್ಷನ್ 3 ರ ಪ್ರಕಾರ ನೆರೆಹೊರೆಯ ಸಮಾನ ಶಾಲಾ ವ್ಯವಸ್ಥೆಯನ್ನು ಬಲಪಡಿಸುವ ಭಾಗವಾಗಿ ಆರ್‌ಟಿಇ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತರಲು ಯಾವುದೇ ರೀತಿಯ ನೀಲಿ ನಕಾಶೆ ನೀಡುವಲ್ಲಿ ನೀತಿ ಪೂರ್ಣವಾಗಿ ವಿಫಲವಾಗಿದೆ.

💠 ರಾಜ್ಯದ ಪೂರ್ಣ ಅನುದಾನದಲ್ಲಿ ಸಾರ್ವಜನಿಕ ವ್ಯವಸ್ಥೆಯ ಮೂಲಕ ಆರೈಕೆ, ರಕ್ಷಣೆ, ಪೋಷಣೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಯಾವುದೇ ಖಾತರಿ ನೀಡಲು ನೀತಿ ಸೋತಿದೆ.ಬದಲಿಗೆ ಸಾರ್ವಜನಿಕ ಶಿಕ್ಷಣವನ್ನು ಮತ್ತಷ್ಟು ದುರ್ಬಲಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ / ವಿಲೀನಗೊಳಿಸುವ ಪ್ರಕ್ರಿಯೆಗೆ ಅನುಕೂಲವಾಗುವ ಮೂಲಕ ಶಿಕ್ಷಣದ ಕೇಂದ್ರೀಕರಣ, ಖಾಸಗೀಕರಣ ಮತ್ತು ಕಾರ್ಪೋರೇಟರೀಕರಣದ ಮೂರು ‘ಕರಣ’ಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ.

💠 ಹುಟ್ಟಿನಿಂದ ೧೮ ವರ್ಷದ ಎಲ್ಲಾ ಮಕ್ಕಳಿಗೆ ಮೂಲಭೂತ ಹಕ್ಕನ್ನು ವಿಸ್ತರಿಸಲು ಸಂವಿಧಾನದ 21 ಎ ವಿಧಿಗೆ ಅಗತ್ಯ ತಿದ್ದುಪಡಿ ಮಾಡಲು ನೀತಿ ಯಾವುದೇ ಪ್ರಸ್ತಾವನೆ ಹೊಂದಿಲ್ಲ.

💠 ಸಮನ್ವಯ ವೇದಿಕೆಯು ಈ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ. ಜೊತೆಗೆ ಅಭಿವೃದ್ಧಿ ಶಿಕ್ಷಣ ತಜ್ಞರ ನೇತೃತ್ವದಲ್ಲಿ ಮೂಲ ವಾರಸುದಾರರು ಹಾಗೂ ಶಿಕ್ಷಣ ತಜ್ಞರು ಸೂಕ್ತ ಪ್ರಾತಿನಿಧ್ಯವನ್ನೊಳಗೊಂಡ ರಾಷ್ಟ್ರೀಯ ಶಿಕ್ಷಣ ಆಯೋಗವನ್ನು ರಚಿಸಲು ಎಸ್‌ಡಿಎಂಸಿಸಿಎಫ್ ಸರ್ವಾನುಮತದಿಂದ ಕೇಂದ್ರ ಹಾಗು ರಾಜ್ಯಸರ್ಕಾರವನ್ನು ಒತ್ತಾಯಿಸುತ್ತದೆ.

💠 ಇದೇ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರವು ಪಂಚಾಯತಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಮೂಲವಾರಸುದಾರರ ಜೊತೆ ವ್ಯಾಪಕವಾಗಿ ಸಮಾಲೋಚನೆ ನಡೆಸದೆ ನೀತಿ ಅನುಷ್ಠಾನಕ್ಕೆ ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!