
ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯಲ್ಲಿ ಶಿವಕುಮಾರ್ ಎಂಬ ಯುವಕ 4 ತಿಂಗಳಾದರೂ ಸಂಶಯಾಸ್ಪದವಾಗಿ ಮರಣ ಹೊಂದಿದ ವಿಚಾರ ದಲ್ಲಿ ಇವರ ಮರಣೋತ್ತರ ಪರೀಕ್ಷೆಯ ವರದಿ ನೀಡದಿರುವುದರ ಬಗ್ಗೆ ಮತ್ತು ಪೊಲೀಸ್ ಇಲಾಖೆ ಮರು ತನಿಖೆಯನ್ನು ಮಾಡುವಂತೆ ಕರ್ನಾಟಕ ರಕ್ಷಣೆ ವೇದಿಕೆಯವರು ಠಾಣಾಧಿಕಾರಿ ಸುಮ ಅವರಿಗೆ ಮನವಿ ನೀಡಿದರು.
ಮನವಿಯ ವಿಷಯ : ದಿನಾಂಕ 13/05/2020 ರಂದು ಮುದ್ರಾಡಿ ಗ್ರಾಮದ ಜಕ್ಕನಾಡಿಯಲ್ಲಿ ವಾಸಿಸುತ್ತಿರುವ ಸಂಜೀವ ಶೇರಿಗಾರ್ ಮತ್ತು ಯಶೋದ ಅವರ ಮಗನಾದ ಶಿವಕುಮಾರ್ ಅವರು ಕಾಣೆಯಾಗಿದ್ದು, ತದಾನಂತರ ಅವರ ಮೃತ ದೇಹವು ದಿನಾಂಕ 16/05/2020 ರಂದು ಸಂಶಯಾಸ್ಪದ ಸ್ಥಿತಿಯಲ್ಲಿ ಊರಿನ ಪಕ್ಕದ ಕಾಡಿನಲ್ಲಿ ದೊರೆತಿದ್ದು ಪೊಲೀಸರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.
ಆನಂತರ ಸಾವಿನ ಬಗ್ಗೆ ಪೋಲಿಸರು ಯಾವುದೇ ತನಿಖೆಯನ್ನು ಮಾಡದೇ ಜೊತೆಗೆ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡದೆ ಇರುವುದು ನೊಂದ ಕುಟುಂಬಕ್ಕೆ ಮತ್ತಷ್ಟು ನೋವನ್ನು ಉಂಟು ಮಾಡಿದೆ. ಪದೇ ಪದೇ ನ್ಯಾಯಕ್ಕಾಗಿ ಠಾಣೆಯ ಕದ ತಟ್ಟಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇಂದಿಗೆ ನಾಲ್ಕು ತಿಂಗಳು ಕಳೆದರೂ ತನಿಖೆ ನಿಂತ ನೀರಾಗಿದೆ. ಸನ್ಮಾನ್ಯರಾದ ತಮ್ಮಲ್ಲಿ ವಿನಂತಿಸು ದೇನೆಂದರೆ ಸದ್ರಿ ಠಾಣಾಧಿಕಾರಿಗಳಿಗೆ, ಶಿವಕುಮಾರ್ ಅವರ ಸಾವಿನ ತನಿಖೆಯನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿ ತನಿಖೆಯನ್ನು ಚುರುಕುಗೊಳಿಸುವಂತೆ ಆದೇಶಿಸ ಬೇಕಾಗಿ ವಿನಮ್ರ ವಿನಂತಿ.
ನಮ್ಮ ದೇವಾಡಿಗ ಸಮಾಜದ ಒಳಿತಿಗಾಗಿ ತಮ್ಮ ಉತ್ತಮ ಕಾರ್ಯಗಳು ಪ್ರಶಂಸನೀಯ ಮತ್ತು ಇದರ ಜೊತೆಗೆ ಶಿವಕುಮಾರ್ ಅವರ ಕುಟುಂಬಕ್ಕೆ ಸರಿಯಾದ ನ್ಯಾಯ ದೊರಕಿದಲ್ಲಿ ನಾವು ನಿಮಗೆ ಚಿರಋಣಿ. ತಾವು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುತ್ತೀರಿ ಎಂಬ ಆಶಯದಲ್ಲಿ ಎಂದು ಮನವಿ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಕುಲಂಕಷವಾಗಿ ಮರು ತನಿಖೆ ಮಾಡಬೇಕೆಂದು ಇಂದು ಹೆಬ್ರಿ ಠಾಣಾಧಿಕಾರಿ ಕು.ಸುಮಾ ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಸಿಎಂ ಪ್ರಸನ್ನ ಕುಮಾರ್ ಶೆಟ್ಟಿ, ಹರ್ಷ ಶೇರಿಗಾರ್ ಶಿವಪುರ ಹಾಗೂ ಮೃತ ಯುವಕನ ಸಂಬಂಧಿಗಳು ಮತ್ತು ದೇವಾಡಿಗ ಸಂಘದ ಮುಖಂಡರು ಮನವಿ ನೀಡಿದ್ದಾರೆ.