ಹಳೆ ಬಸ್ಸುಗಳಿಂದ ಶಾಲಾ ಕೊಠಡಿ: ಕೆಎಸ್‌ಆರ್‌ಟಿಸಿಯಿಂದ ಮತ್ತೊಂದು ಮಾದರಿ ಹೆಜ್ಜೆ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ನಿರುಪಯುಕ್ತ ಕೆಎಸ್‌ಆರ್‌ಟಿಸಿ ಬಸ್ಸನ್ನು ಶೌಚಾಲಯವಾಗಿ ಪರಿವರ್ತಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿ ಇದೀಗ ಮತ್ತೊಂದು ಮಾದರಿ ಕಾರ್ಯಕ್ಕೆ ಮುಂದಾಗಿದೆ.
ಗುಜರಿಗೆ ಸೇರುವ ಬಸ್ಸುಗಳನ್ನು ಶಾಲಾ ಕೊಠಡಿ ಗಳಾಗಿ ಪರಿವರ್ತನೆ ಮಾಡಲು ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಕುಂದಾಪುರದ ಬಗ್ವಾಡಿಯ ಕಲಾವಿದ ಪ್ರಶಾಂತ್ ಆಚಾರ್ ಅವರಿಗೆ ಹಳೆಯ ಬಸ್ಸುಗಳನ್ನು ಶಾಲಾ ಕೊಠಡಿಯನ್ನಾಗಿ ಪರಿವರ್ತನೆ ಮಾಡುವ ಜವಾಬ್ದಾರಿ ನೀಡುವುದಾಗಿಯೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕುಂದಾಪುರದ ಬಗ್ವಾಡಿಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಪಾಳು ಬಿದ್ದಿದ್ದು, ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರಲ್ಲಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಭೇಟಿಗೆ ಅವಕಾಶ ಮಾಡಿಕೊಡು ವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಶಿವಯೋಗಿ ಅವರು ಸವದಿ ಅವರನ್ನು ಭೇಟಿ ಮಾಡಿಸುವ ಭರವಸೆಯನ್ನೂ ಪ್ರಶಾಂತ್ ಅವರಿಗೆ ನೀಡಿದ್ದಾರೆ. ಹಾಗೆಯೇ ಸಂಸ್ಥೆಯ ನಿರುಪಯುಕ್ತ ಬಸ್ಸುಗಳನ್ನು ಶಾಲಾ ಕೊಠಡಿಗಳಾಗಿ ಪರಿವರ್ತಿಸಲು ಮುಂದಾಗು ವಂತೆಯೂ ಪ್ರಶಾಂತ್ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದು, ಇದೀಗ ಅಧಿಕಾರಿಗಳು ಪ್ರಶಾಂತ್ ಮನವಿಗೆ ಸ್ಪಂದಿಸಿದ್ದಾರೆ.
ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ಕಲಾವಿದ ಪ್ರಶಾಂತ್ ಆಚಾರ್ ಅವರು ಕೆಎಸ್‌ಆರ್‌ಟಿಸಿಯ ಸಾಮಾನ್ಯ ಸಾರಿಗೆ ಮತ್ತು ಐರಾವತ ಬಸ್ಸುಗಳ ಮಾದರಿ ತಯಾರಿಸುವ ವಿಡಿಯೋ ವೈರಲ್ ಆಗಿದ್ದು, ಶಿವಯೋಗಿ ಅವರ ಗಮನಕ್ಕೂ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತಮ್ಮ ಕಛೇರಿಗೆ ಕರೆಸಿಕೊಂಡಿದ್ದ ಅವರು ಆ ಮಾದರಿಗಳನ್ನು ಪರಿಶೀಲನೆ ಮಾಡಿದ್ದರು. ಹಾಗೆಯೇ ಸಂಸ್ಥೆಗೆ ಬರುವ ಅತಿಥಿಗಳಿಗೆ ನೀಡಲು ಐರಾವತ ಮಾದರಿಯ 10 ಚೋಟಾ ಬಸ್ ಮಾದರಿ ಸಿದ್ಧಪಡಿಸಿ ನೀಡುವಂತೆಯೂ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.