ಎಚ್ಚರ : ಸ್ವಲ್ಪ ಯಾಮಾರಿದರೂ ಖಾಲಿ ಆಗುತ್ತೆ ನಿಮ್ಮ ಬ್ಯಾಂಕ್ ಖಾತೆ..!
ಬೆಂಗಳೂರು, ನ.5 : ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿನ ಜಾಹಿರಾತುಗಳನ್ನು ಕೂಲಂಕಶವಾಗಿ ಪರಿಶೀಲಿಸದೆ ಹಣ ಪಾವತಿಸ ಬೇಡಿ ಎಂದು ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣವಾದ ಒಎಲ್‍ಎಕ್ಸ್, ಕ್ವಿಕ್ಕರ್ ಹಾಗೂ ಇನ್ನಿತರ ವೆಬ್‍ಸೈಟ್‍ಗಳಲ್ಲಿ ಎಲೆಕ್ಟ್ರಾನಿಕ್ ಪರಿಕರಗಳು, ಪೀಠೋಪಕರಣಗಳು, ಬೈಕ್, ಕಾರು, ಮೊಬೈಲ್ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವುದಾಗಿ ಅಥವಾ ಕೊಂಡುಕೊಳ್ಳುವುದಾಗಿ ನಂಬಿಸಿ ಹಣ ಲಪಟಾಯಿಸುವ ಜಾಲದಿಂದ ಮೋಸ ಹೋಗದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸುವಂತೆ ಸೂಚಿಸಿದ್ದಾರೆ.
ನಿಮಗೆ ಹಣ ಪಾವತಿಸುತ್ತೇವೆ, ಸ್ಕ್ಯಾನ್ ಮಾಡು ವಂತೆ ತಿಳಿಸಿದರೆ ಸಾರ್ವಜನಿಕರು ಎಚ್ಚರಿಕೆ ವಹಿಸಿ ಖುದ್ದಾಗಿ ಭೇಟಿ ಮಾಡಿ ಕೂಲಂಕಶವಾಗಿ ಪರಿಶೀಲಿಸಿ ನಂತರ ಹಣ ಪಾವತಿಸುವ ಮೂಲಕ ವಂಚನೆ ಜಾಲದಿಂದ ತಪ್ಪಿಸಿಕೊಳ್ಳಲು ಸೈಬರ್ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರುಗಳ ಪೈಕಿ ಒಎಲ್‍ಎಕ್ಸ್ ಆಯಪ್‍ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಜಾಹೀರಾತು ನೋಡಿ ಖರೀದಿಸುವ ಸಲುವಾಗಿ ಅದರಲ್ಲಿದ್ದ ಮೊಬೈಲ್ ನಂಬರ್ ಸಂಪರ್ಕಿಸುತ್ತಾರೆ.
ನಂತರ ವಂಚಕರು ವಾಹನ ಕಳುಹಿಸುವುದಾಗಿ ಹಾಗೂ ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳ ಭಾವಚಿತ್ರಗಳನ್ನು ಒಎಲ್‍ಎಕ್ಸ್‍ನಲ್ಲಿ ಅಪ್‍ಲೋಡ್ ಮಾಡಿ ಇವರೇ ಅಧಿಕಾರಿಗಳು ಎಂದು ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ವಿವಿಧ ದಿನಾಂಕಗಳಂದು ಆನ್‍ಲೈನ್ ಮೂಲಕ ಹಣ ಹಾಕಿಸಿಕೊಂಡು ಯಾವುದೇ ಗಾಡಿಯನ್ನು ಕಳುಹಿಸದೆ ವಂಚಿಸಿ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಇಂತಹ ವಂಚನೆ ಪ್ರಕರಣದ ಸಂಬಂಧ ಈಗಾಗಲೇ ರಾಜಸ್ಥಾನ ಮೂಲದ ನಾಲ್ವರನ್ನು ಬಲೆಗೆ ಬೀಳಿಸಿಕೊಂಡು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸುಮಾರು 40ಕ್ಕೂ ಹೆಚ್ಚು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದರ ಜತೆ ಭಾಗಿಯಾಗಿರುವ ಇನ್ನಿತರ ಆರೋಪಿಗಳಿಗಾಗಿ ಸೈಬರ್ ಕ್ರೈಂ ಪೊಲೀಸರು ಶೋಧ ಮುಂದುವರಿಸಿದ್ದಾರೆ