ವಿಶೇಷ ಲೇಖನಗಳು

ಕೆರೆಮನೆ ಶಂಭು ಹೆಗಡೆ ಅವರದು ಇಚ್ಛಾಮರಣವೇ ?

ಇಂದು ಶಂಭು ಹೆಗಡೆ ಅವರ ಜನ್ಮದಿನ. ಕೆರೆಮನೆ ಶಂಭು ಹೆಗಡೆ ಅವರು ಕಟ್ಟಿ ನಿಲ್ಲಿಸಿದ ಯಕ್ಷಗಾನ ಪ್ರಾಂಗಣ ಅವರ ಹಲವಾರು ಸಾಧನೆಗಳ ಪಟ್ಟಿಯಲ್ಲಿ ಅದೊಂದು ಸೇರಿಕೊಂಡಿದೆ. ಅವರು ಕಾಲವಾದ ನಂತರದಲ್ಲಿ ಅಲ್ಲಿ ನಿರ್ಮಿಸಲಾದ ಪುತ್ಥಳಿಯ ಕೆಳಗಡೆ ಜನ್ಮದಿನ 6-10-1938 ಎಂದು ಲಿಖಿತವಾಗಿ ದಾಖಲಿಸಲಾಗಿತ್ತು. ನಾನು ಆ ದಿನಾಂಕ ನೋಡಿ ಆ ದಿನದಂದು ಶುಭಾಶಯಗಳ ಕೋರಿ ಕಿರು ಲೇಖನ ಬರೆದು ಬಿಟ್ಟಿದ್ದೆ . ನಂತರ ಅವರ ನಿಜವಾದ ಜನ್ಮ ದಿನಾಂಕ ನವಂಬರ 6 ಎಂದು ತಿಳಿದು ಬಂದಿದ್ದು ಶಂಭು ಹೆಗಡೆ ಅವರ ಮಗಳು ಶಾರದಾಳಿಂದ. ಅವಳಿಗೆ ನಿಖರವಾಗಿ ಜನ್ಮ ದಿನಾಂಕ ತಿಳಿದಿತ್ತು . ಕಾರಣ ಅವಳ ಬಳಿ ಶಂಭು ಹೆಗಡೆ ಅವರ ಅಸಲಿ ಜಾತಕದ ಪ್ರತಿಯೂ ಇತ್ತು . ಹಾಗಂತ ಗುಣವಂತೆ ರಂಗಮಂದಿರದಲ್ಲಿ ನಮೂದಾದ ದಿನಾಂಕ ಯಾವುದೇ ಉದ್ದೇಶ ಪೂರ್ವಕ ತಪ್ಪಿನಿಂದಾದುದಲ್ಲ. ಶಂಭು ಹೆಗಡೆ ಅವರ ಮೊದಲಿನ ಜಾತಕದಲ್ಲಿಯೇ ತಪ್ಪಿ ಹಾಗಾಗಿ ಹೋಗಿತ್ತು . ನಂತರ ಆ ತಪ್ಪನ್ನು ಶಂಭು ಹೆಗಡೆ ಅವರು ತಮ್ಮ ಮಗಳು ಶಾರದಾಳ ಜೊತೆಗೆ ಚರ್ಚಿಸಿ ಸಾಗರ ತಾಲ್ಲೂಕಿನ ಒಬ್ಬ ಪುರೋಹಿತರಲ್ಲಿ ನಿಜವಾದ ಈ ದಿನಾಂಕಕ್ಕೆ ಹೊಂದಿಸಿ ಹೊಸ ಜಾತಕ ಮಾಡಿಸಿದ್ದರು. ಅದು ಶಾರದಾಳಿಗೆ ಮತ್ತು ಅವರ ಆಪ್ತರಿಬ್ಬರಿಗೆ ಮಾತ್ರ ಗೊತ್ತಿತ್ತು . ನಂತರ ಅವಳು ತನ್ನ ಸಹೋದರ, ತಾಯಿಯವರ ಗಮನಕ್ಕೂ ತಂದಳಂತೆ. ಹಾಗೆಯೇ ನನ್ನ ಗಮನಕ್ಕೆ ಕೂಡಾ ತಂದಳು. ಆನಂತರ ಯಕ್ಷಾಂಗಣದ ಪುತ್ಥಳಿಯ ಲಿಖಿತ ದಿನಾಂಕ ಕೂಡಾ ಬದಲಾಯಿಸಲಾಯಿತು.

ಇಂದು ಅವರ ಜನ್ಮದಿನದ ಸಂದರ್ಭದಲ್ಲಿಯೇ ಮರಣದ ಆ ಒಂದು ದಿನದ ಅವರ ವಿಚಿತ್ರವಾದ ನಡವಳಿಕೆ ಬಗ್ಗೆ ಹೇಳಬೇಕು ಅನಿಸಿದೆ. ಅವರ ಕುರಿತಾಗಿ ಬೇರೆ ಎಲ್ಲಾ ಸಂಗತಿಗಳು ಈಗಾಗಲೇ ಸಾರ್ವತ್ರಿಕವಾಗಿ ಪ್ರಕಟವಾಗಿದೆ. ಅದು ಅವರ ಬದುಕು ಆಗಿರಬಹುದು, ಸಾಧನೆಯ ಮೆಟ್ಟಿಲು ಏರಿದ್ದಿರಬಹುದು, ವೇಷದ ಬಗ್ಗೆ ಇರಬಹುದು , ಮೇಳ ದ ಬಗ್ಗೆ , ಸಂಘಟನೆಯ ಬಗ್ಗೆ , ಹೀಗೆ ಹತ್ತು ಹಲವು ಮುಖಗಳನ್ನು ಪತ್ರಿಕೆ , ಟೀವಿ , ಪುಸ್ತಕ ಇನ್ನಿತರ ಮಾದ್ಯಮಗಳಲ್ಲಿ ಅದು ನಮೂದಾಗಿರುವಂತಹುದು. ಆದರೆ ಬೇರೆ ಬೇರೆ ಯಾವುದೋ ಕಾರಣಕ್ಕೆ ಹಾಗೆ ನಮೂದಿಸಲಾಗದ ವಿಷಯವೂ ಉಳಿದು ಕೊಂಡಿದೆ. ಅವರ ಹಿಂದೆ ಬಂದ ಯಾವುದೇ ಚರಿತ್ರೆಯ ಪುಟಗಳಲ್ಲಿ ಇಲ್ಲ. ಇಂದು ನಾನು ಪ್ರಸ್ತಾಪಿಸಲ್ಪಡುವ ಸಂಗತಿ ಮುಂದಿನ ದಿನಗಳಲ್ಲಿ ಎಲ್ಲೋ ದಾಖಲೆಗಳಾಗಿ ಬಿಡುತ್ತದೆ ಎಂದು ಹೇಳಲಾಗದು . ಅದು ದಾಖಲಾಗಲಿ ಬಿಡಲಿ ನನ್ನ ಬರಹದಲ್ಲಿ ದಾಖಲಿಸುವ ಇರಾದೆ ನನ್ನದು . ಹಾಗಿದ್ದರೆ ಆ ಎಲ್ಲಾ ಸಂಗತಿಗಳು ಯಾವವು ? ನನ್ನ ಈ ಬರವಣಿಗೆಯ ಮುಂದಿನ ಸಾಲಿನಲ್ಲಿ ಇರುವದು ಅದೇ ಆಗಿದೆ . ವಸೀ ಗಮನಿಸಿ.

ಅವರು ಮುಂಚಿತವಾಗಿಯೇ ತಮ್ಮ ಸಾವುನ್ನು ನಿರೀಕ್ಷೆ ಮಾಡಿದ್ದರೆ ? ಅಥವಾ ಬಯಸಿದ್ದರೇ ? ಈ ಪ್ರಶ್ನೆ ಹುಟ್ಟುವದೇ ಅವರ ಸಾವಿನ ಒಂದಿಷ್ಟು ಹಿಂದೆ – ಮತ್ತಂದಿನ ಆ ದಿನಗಳ ನಡವಳಿಕೆಯ ಮೇಲಿಂದ ಹಾಗೊಂದು ಅನುಮಾನ ಮೂಡುತ್ತದೆ .
ಶಂಭು ಹೆಗಡೆ ಅವರು ದೇವರ ಮೇಲೆ ಅಪಾರ ನಂಬಿಕೆ ಇಟ್ಟಂತವರು . ಅವರು ಶೃದ್ಧೆ , ಭಕ್ತಿ ಭಾವದಿಂದ ಪೂಜಿಸುವ ದೈವೀ ಭಕ್ತರು . ಅವರು ಧಾರ್ಮಿಕ ರೀತಿ ರಿವಾಜುಗಳಲ್ಲಿ ನಿರಂತರವಾಗಿ ತೊಡಗಿಕೊಂಡವರು.

ಅವರು ಕಾಲವಾಗುವ ಸ್ವಲ್ಪ ಮೊದಲು ಬಹಳ ಮಾನಸಿಕ ಒತ್ತಡ ಹಲವಾರು ತಾಪತ್ರಯಗಳು ಅವರನ್ನು ಕಾಡುತ್ತದೆ . ಅವರು ಅನೇಕ ದೇವಸ್ಥಾನಗಳಿಗೆ ಭೇಟಿ ಇತ್ತು ಪೂಜೆ ಪುನಸ್ಕಾರ ಹರಕೆ ಹೊತ್ತು ಬರುತ್ತಾರೆ . ಹಾಗೆಯೇ ಜ್ಯೋತಿಷ್ಯದಲ್ಲಿಯೂ ಅಷ್ಟೇ ನಂಬಿಕೆ ವಿಶ್ವಾಸ ಇದ್ದ ಕಾರಣಕ್ಕೆ ಖ್ಯಾತ ಜ್ಯೋತಿಷ್ಯ ಹೇಳುವವರಲ್ಲಿ ಹೋಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ ತಮಗಾಗುತ್ತಿರುವ ಕಷ್ಟದ ಬಗ್ಗೆ ಹೇಳುತ್ತಾರೆ . ಆಗ ಜ್ಯೋತಿಷಿಗಳು ಹೇಳಿದ ಪ್ರಕಾರ ನಿಮಗಾಗದವರು ಕೃತ್ರಿಮ ಯಂತ್ರ ತಂತ್ರ ಪ್ರಯೋಗ ಮಾಡಿದ್ದಾರೆ ಎಂದಾಗ ಇನ್ನಷ್ಟು ಚಿಂತೆ ಅವರಿಗೆ ಕಾಡುತ್ತದೆ . ಅದಕ್ಕೆ ಸಾಕ್ಷಿಯಾಗಿ ಒಮ್ಮೆ ಆ ಯಂತ್ರ ಅವರಿಗೆ ಒಂದು ಕಡೆ ಸಿಕ್ಕಿಯೂ ಬಿಡುತ್ತದೆ . ಅದನ್ನು ಹಿಡಿದು ಮತ್ತೆ ಖ್ಯಾತ ಜ್ಯೋತಿಷ್ಯದವರಲ್ಲಿ ಹೋಗಿ ಕೇಳುತ್ತಾರಂತೆ . ಅದು ವಿಪರೀತ ಪ್ರಯೋಗ ಇದನ್ನು ಮಾಡಿದವರು ಸಾಮಾನ್ಯರೇನಲ್ಲ ಇದು ನಿಮ್ಮನ್ನು ಮಾನಸಿಕ ಅಸ್ವಸ್ಥರನ್ನಗಿಸಿಯೋ ಇಲ್ಲ ಕೊನೆಯದಾಗಿ ಅದರಿಂದಾಗಿಯೇ ಸಾವು ಸಂಭವಿಸಲೂಬಹುದು ಎಂಬುದನ್ನು ಕೇಳಿ ಬೆವರಿಳಿದು ಬಿಡುತ್ತಾರೆ . ಅದನ್ನು ಕೇವಲ ಒಬ್ಬ ಜ್ಯೋತಿಷಿಗಳಲ್ಲಿಯಲ್ಲ ಅನೇಕರಲ್ಲಿ ವಿಚಾರಿಸಿದಾಗಲೂ ಏಕಾಭಿಪ್ರಾಯ ಬಂತಂತೆ. ಆದಷ್ಟು ಬೇಗ ವಿಸರ್ಜನೆ ಮಾಡಿ ಬೇರೆ ಪರಿಹಾರ ಇದಕ್ಕೆ ಇಲ್ಲ ಎಂದು ಕೇಳಿದ ಎಲ್ಲಾ ಜ್ಯೋತಿಷಿಗಳು ಸಲಹೆ ಕೊಡುತ್ತಾರಂತೆ. ಅವರು ತಮ್ಮ ಅನೇಕ ಆಪ್ತ ಸ್ನೇಹಿತರಲ್ಲಿ, ಕಲಾವಿದರಲ್ಲಿ , ಸಾಹಿತಿಗಳಲ್ಲಿ, ಮಠಾಧೀಶರ ಬಳಿ ಹೋಗಿ ಆ ಯಂತ್ರ ತೋರಿಸಿ ಎಲ್ಲವನ್ನು ಹೇಳಿಕೊಂಡಿದ್ದರಂತೆ. ಅಂತಹ ವಿಷಯದಲ್ಲಿ ಬಹಳಷ್ಟು ನಂಬಿಕೆ ಇರುವ ಕಾರಣಕ್ಕಾಗಿ ಆ ಸಾವು ಇಂದಲ್ಲ ನಾಳೆ ನಿಶ್ಚಿತ ಎಂಬ ನಿರೀಕ್ಷೆ ಅವರದ್ದಾಗಿತ್ತೋ ಏನೋ ! ? ಆ ಒಂದು ದಿನ ತಮ್ಮ ಸಾವನ್ನು ಅವರಾಗಿಯೇ ಆಹ್ವಾನಿಸಿ ಕೊಂಡಿರಬಹುದೇನೋ ಅನಿಸಿದರೆ ಆಶ್ಚರ್ಯ ಪಡಬೇಕಾದುದಿಲ್ಲ. ಅವರ ಆ ಸಾವಿನ ದಿನ ಹಾಗೂ ಆಚಿನ ಒಂದೆರಡು ದಿನಗಳ ಮೊದಲಿನ ಅವರ ನಡವಳಿಕೆ ಆಪ್ತರ ಜೊತೆಗಿನ ಮಾತುಕತೆ , ನೆಬ್ಬೂರರಲ್ಲಿ ಅಂದು ಬೆಳಿಗ್ಗೆ ಬಹಳ ಮುಖ್ಯವಾದ ವಿಚಾರ ನಿನ್ನ ಜೊತೆ ಮಾತನಾಡಬೇಕಿದೆ ಮುಂಚಿನ ದಿನವೇ ಬರಬೇಕು ಎಂದು ಒತ್ತಾಯಿಸಿ ಕರೆಸಿಕೊಂಡಿದ್ದು, ಹಾಗೆಯೇ ಸಾಗರದ ಜಿ. ಎಸ್ ಭಟ್ಟರಿಗೆ ಆ ದಿನ ಇಡೀ ತನ್ನ ಜೊತೆಗೆ ಇರಬೇಕು ಎಂದು ಹೇಳಿದ್ದು, ಆ ದಿನದ ಆಟದ ಚೌಕಿ ಮನೆಯಿಂದ ಹಿಡಿದು ಆಟದ ಸಂಪೂರ್ಣ ವಿಡಿಯೋ ಚಿತ್ರೀಕರಣ ಆಗಲೇ ಬೇಕು ಎಂದು ಕ್ಯಾಮರಾ ಮೆನ್ ಅವರಿಗೆ ಮುಂಚಿತವಾಗಿ ತಿಳಿಸಿದ್ದು ಇವೆಲ್ಲವೂ ಒಂದು ತರಹದ ರೋಚಕ ರೋಮಾಂಚನ ಹುಟ್ಟಿಸುವ ಸಂಗತಿಗಳು .

ಅವರೊಂದಿಗೆ ಗಜ್ಜೆ ಇನ್ನು ಮುಂದೆ ಕಟ್ಟುವದಿಲ್ಲ ಎಂಬ ಅಮೋಘ ಪ್ರತಿಜ್ಞೆ ಕೂಡಾ ದೇಹದಲ್ಲಿ ಬೆಳೆದು ನಿಂತ ಯಕ್ಷಗಾನದ ಕಲಾವಿದರೊಬ್ಬರು ಆ ಸೇವೆ ಆಟದ ದಿನವೇ ಮಾಡಿದ್ದರಂತೆ. ಅವರೊಂದಿಗೆ ಗಜ್ಜೆ ಕಟ್ಟಿ ವೇಷ ಮಾಡುವದೇ ಒಂದು ಮಹಾ ಪುಣ್ಯ ತಮ್ಮ ಭಾಗ್ಯ ಎನ್ನುವ ಅದೆಷ್ಟೋ ಕಲಾವಿದರು ಇರುವಾಗ ಈ ಕಲಾ(ಖಳ)ವಿದರು ಆ ಪ್ರತಿಜ್ಞೆಗೆ ಮುಂದಾಗುತ್ತಾರೆ ಎಂದರೆ ಅದೆಂತಹ ವಿಪರ್ಯಾಸ ನೋಡಿ . ಅದೇ ದಿನ ಮಗಳಿಗೆ ಫೋನ್ ನಲ್ಲಿ ಬಹಳ ನೊಂದು ಹೇಳಿದ್ದರಂತೆ. ನೆಬ್ಬೂರರಿಗೂ ಆ ವಿಷಯ ಹೇಳಿದ್ದರಂತೆ. ಒಟ್ಟಿನಲ್ಲಿ ಆ ಸೇವೆ ಆಟಕ್ಕೂ ಮೊದಲು ಪ್ರಸಂಗದ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದತ್ತಂತೆ. ಪಾತ್ರ ಹಂಚಿಕೆಯ ಸಮಸ್ಯೆ ಉಂಟಾಗಿ ಅಂತೂ ಕೊನೆಗೆ ಅದೂ ಕೂಡಾ ಬಗೆ ಹರಿಯಿತಂತೆ. ಆ ಮಹಾಗಣಪತಿಯ ಅನುಗ್ರಹವೋ ಏನೋ ಶಂಭು ಹೆಗಡೆ ಅವರಿಗೆ ” ಸೀತಾ ವಿಯೋಗದ ” ಶ್ರೀರಾಮನ ಪಾತ್ರ ವಹಿಸುವಂತಾಗುತ್ತದೆ. ಅದೇ ಪಾತ್ರದಲ್ಲಿಯೇ ಐಕ್ಯರಾಗಿ ನಮ್ಮಿಂದ ಸದಾ ದೂರವಾಗಿ ಬಿಡುತ್ತಾರೆ .

ಸಾಮಾನ್ಯವಾಗಿ ಶ್ರೇಷ್ಠ ಕಲಾವಿದರುಗಳಲ್ಲಿ ಅವರದ್ದೇ ಆದ ಹಲವು ವಿಶೇಷತೆಯನ್ನೊಳಗೊಂಡಿರುತ್ತದೆ. ಆದರೆ ಶಂಭು ಹೆಗಡೆ ಅವರಲ್ಲಿ ವಿಶೇಷತೆಯಲ್ಲಿಯೂ ವೈಶಿಷ್ಟ್ಯತೆ , ವೈವಿಧ್ಯತೆ , ಸಂಗತಿಗಳು ಇವೆ. ಅವರು ಪ್ರತಿ ನಿತ್ಯ ಡೈರಿ ಬರೆಯುವ ರೂಢಿ ಇತ್ತು . ಅದನ್ನು ಬಹಳ ವರ್ಷಗಳಿಂದ ನಿತ್ಯ ಕರ್ಮದಲ್ಲಿ ಒಂದಾಗಿಸಿ ಕೊಂಡು ಬಂದವರು. ಆ ಡೈರಿಯಲ್ಲಿ ಏನಿತ್ತೋ ಏನೋ ? ಡೈರಿ ಬರೆಯುವ ವಿಚಾರ ತಿಳಿದವರ ಸಹಜ ಪ್ರಶ್ನೆ ಇದಾಗಿದೆ . ಕಲೆ , ಕಲಾವಿದರ ಬಗ್ಗೆ ಸದಾ ಹೊಸದನ್ನು ಚಿಂತಿಸುವ ಅವರು ಆ ಡೈರಿಯಲ್ಲೇನಾದರೂ ನಮೂದಿಸಿದ್ದೇ ಆದರೆ ಅದು ಇಂದಿನ ಯಕ್ಷಗಾನ ವಲಯಕ್ಕೆ ಮತ್ತು ಹೊಸ ಕಲಾವಿದರುಗಳಿಗೆ ಅದರ ಮೌಲ್ಯ ಅಳೆಯಲಾಗದು. ಆ ಡೈರಿ ಸಿಕ್ಕ ಪುಣ್ಯಾತ್ಮರು ಅದನ್ನು ಕಾಯ್ದಿರಿಸಿ ಅದರಲ್ಲಿನ ಮುಖ್ಯಾಂಶವನ್ನು ಸಾರ್ವತ್ರಿಕಗೊಳಿಸಿ ನಮ್ಮಂತಹ ಅನೇಕರ ಕುತೂಹಲ ತಣಿಸಲಿ ಎಂದು ಆಶಿಸುವೆ . ಅದರಲ್ಲಿ ಅವರ ನೋವು ನಲಿವುಗಳ ಕಂಡಿದ್ದು ಕಂಡಂತೆ ಎಷ್ಟು ಸ್ವಾರಸ್ಯಕರವಾಗಿ ಬರೆದಿರಬಹುದೋ ಏನೋ ಅಲ್ಲವೇ ? ಅವರ ಸಾಹಿತ್ಯಿಕ ಶೈಲಿಯ ಸುಂದರ, ಸುಲಲಿತ ಮಾತಿನಂತೆಯೇ ಬರಹವೂ ಇತ್ತೇನೋ ಅನಿಸುತ್ತದೆ .

ಮುಂಚಿನ ದಿನದಿಂದ ಮರುದಿನ ಬೆಳಿಗ್ಗೆ ತನಕ ತಮಗೆ ಬಹಳ ಮುಖ್ಯವಾದ ವಿಷಯ ಏನು ಹೇಳಬಹುದು ಎಂದು ಕಾದಿದ್ದ ನೆಬ್ಬೂರರಿಗೆ ಆ ಸಂದರ್ಭ ಒಂದಿಲ್ಲೊಂದು ಕಾರಣಕ್ಕಾಗಿ ತಪ್ಪಿ ಕೊನೆಗೂ ಆ ಮಾತು ಶಂಭು ಹೆಗಡೆ ಅವರ ಮೌನಗರ್ಭದಲ್ಲಿಯೇ ಇಟ್ಟು ಕೊಂಡು ಸಾಗಿಯೇ ಬಿಟ್ಟರು. ಆ ಬಳಿಕ ಶಂಭು ಹೆಗಡೆ ಅವರ ಆ ಮಾತು ನೆಬ್ಬೂರಿಗೆ ನಿತ್ಯ ಕಾಡುವ ಸಂಗತಿಯಾಗಿ ಉಳಿದು ಬಿಟ್ಟಿತ್ತು. ಸಾಗರದ ಜಿ. ಎಸ್ ಭಟ್ಟರಲ್ಲಿ, ಶಾರದಾ ಮತ್ತು ನನ್ನಲ್ಲಿ , ಹೀಗೆ ಅನೇಕರಲ್ಲಿ ಅದನ್ನು ಹೇಳಿದ್ದಾರೆ . ನೆಬ್ಬೂರರ ಮನೆಯಲ್ಲಿಯಂತೂ ಆಗಾಗ ಅದನ್ನೇ ಪದೇ ಪದೇ ನೆನಪಾದಾಗಲೆಲ್ಲ ಹೇಳಿ ಕೊರಗುತ್ತಿದ್ದರಂತೆ.
ಅಂದಿನ ಪ್ರದರ್ಶನದ ಆಟದಲ್ಲಿ ಶಂಭು ಹೆಗಡೆ ಅವರು ಪೂರ್ವಾರ್ಧದಿಂದಲೇ ರಾಮನ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ಚಿತ್ರಿಸುತ್ತಾ ಬಂದರು. ನಂತರ ಲವ -ಕುಶರ ಕಾಣುವ ಹೊತ್ತಿಗೆ ಆಗಲೇ ಬಸವಳಿದು ಬಿಟ್ಟಿದ್ದರು ಎಂದರೆ ತಪ್ಪಲ್ಲ. ರಂಗದಲ್ಲಿನ ಅವರ ಬಳಲಿದ ದೇಹದ ಚಲನವಲನದಿಂದಲೇ ಹಾಗೆ ಸ್ಪಷ್ಟವಾಗಿ ಊಹಿಸಬಹುದಿತ್ತು.

ಲವ- ಕುಶರು ರಾಮಾಯಣದ ಕತಾ ಸಾರವನ್ನು ರಾಮನಿಗೆ ಅರುಹಿ ಕೊನೆಯಿಲ್ಲದ ಕತೆಯ ಅಂತ್ಯ ಗೊಳಿಸಲು ವಾಲ್ಮೀಕಿ ಬಳಿ ಹೋಗಲು ರಾಮ

” ಏಳಿ ಪೋಗುವ ಮುನಿಪರಿದ್ದೆಡೆಗೆ ” ಆ ಪದ್ಯಕ್ಕೆ ರಂಗದಲ್ಲಿ ಅಭಿನಯಿಸುತ್ತಿರುವಾಗಲೇ ಲಘುವಾಗಿ ಎದೆ ನೋವು ಕಾಣಿಸಿಕೊಂಡು ಒಂದು ಕೈಯಲ್ಲಿ ಎದೆಯನ್ನು ಒತ್ತಿ ಹಿಡಿದು ಇನ್ನೊಂದು ಕೈಯಲ್ಲಿ ಪ್ರೇಕ್ಷಕರಿಗೆ ಕೈಬೀಸಿ ಒಳಗೆ ಚೌಕಿ ಮನೆಯತ್ತ ಅವಸರದಲ್ಲಿ ನಡೆದರು. ಅವರಿಗೆ ಏನೋ ತೊಂದರೆ ಆಗಿದೆ ಎಂದರಿತು ಹಲವರು ಗಾಬರಿಗೊಂಡು ಅವರ ಬೆನ್ನಿಡಿದು ಚೌಕಿಗೆ ಧಾವಿಸಿದರು. ಸಾಗರದ ಯೋಗಿಶ ಭಟ್ಟರು , ಜಿ. ಎಸ್ ಭಟ್ಟರು , ನೆಬ್ಬೂರರು ಹಾಗೂ ಕೆಲವು ಪ್ರೇಕ್ಷಕರೂ ಮೊದಲಿಗರಾಗಿ ಚೌಕಿ ಮನೆಗೆ ಹೋದವರು.

ಶಂಭು ಹೆಗಡೆ ಅವರು ಚೌಕಿ ಮನೆಗೆ ಬಂದವರೇ ಮೊದಲು ಮಾಡಿದ್ದೇನು ಗೊತ್ತೇ ? ಅವರಿಗೆ ಅದೆಷ್ಟರ ಮಟ್ಟಿಗೆ ಜ್ಞಾನ, ಪ್ರಜ್ಞೆ ಆ ಸಂದಿಗ್ಧ ಕ್ಷಣದಲ್ಲಿಯೂ ಇತ್ತು ಅನ್ನುವದಕ್ಕೆ ಸಾಕ್ಷಿ ಸಿಗುತ್ತದೆ . ಕುಟುಂಬದ ಪರಂಪರಾಗತವಾಗಿ ಬಂದ ಇಡಗುಂಜಿ ಮಹಾಗಣಪತಿ ಅನುಗ್ರಹಿತವಾದುದು ಎಂಬ ಅಚಲ ನಂಬಿಕೆಯ ಪೂಜನೀಯ ಕಿರೀಟವನ್ನು ನೆಲಕ್ಕೆ ಇಡಲು ಬಿಡದೆ ಅವರು ನೆಲಕ್ಕೊರಗುವ ಮೊದಲು ಕಿರೀಟವನ್ನು ಅವರನ್ನು ಸಂತೈಸಲು ಬಂದ ಸಹ ಕಲಾವಿದರ ಕೈಗೆ ನೀಡುತ್ತಾರೆ . .ಇವೆಲ್ಲ ಮುಗಿದ ಸ್ವಲ್ಪ ಸಮಯಕ್ಕೆ ಪ್ರೇಕ್ಷಕರ ಸಾಲಲ್ಲಿ ಕುಳಿತಿದ್ದ ಸುಪುತ್ರ ಶಿವಾನಂದ ಬಂದು ಆ ಪವಿತ್ರ ಕಿರೀಟವನ್ನು ಸಹ ಕಲಾವಿದರಿಂದ ಸ್ವೀಕರಿಸಿ ಅದರದ್ದೇ ಆದ ಪೀಠ ಸ್ಥಾನದಲ್ಲಿ ಇಡುತ್ತಾರೆ .
ಶಂಭು ಹೆಗಡೆ ಅವರು ಸ್ವಲ್ಪ ಹೊತ್ತಿಗೆ ರಾಮೈಕ್ಯರಾದರು ಎಂಬ ದುರಂತ ಸುದ್ದಿ ಇತಿಹಾಸದ ಪುಟಗಳನ್ನು ಸೇರಿತು. ಸಾವಿನಲ್ಲಿಯೂ ಶ್ರೇಷ್ಠತೆಯನ್ನು , ವಿಶೇಷತೆಯನ್ನು ಅವರು ತೋರಿಸಿದ ಏಕೈಕ ಯಕ್ಷಗಾನದ ಕಲಾವಿದರುಗಳಾದರು. ಇಡಗುಂಜಿಯ ಮಹಾಗಣಪತಿಯ ಪವಿತ್ರ ಸನ್ನಿಧಾನದಲ್ಲಿ, ಸೇವೆಯಾಟದಲ್ಲಿ , ರಾಮನಂತಹ ಶ್ರೇಷ್ಠ ಪಾತ್ರದಲ್ಲಿ ಅದೊಂದು ಪರಿಶುದ್ಧ ಸಾವು ಎಂದೆನಿಸಿಕೊಂಡವು.

ಕಿರೀಟ
**
ನನ್ನ ಈ ಅಂಕಣದಲ್ಲಿ ಆ ದಿನದ ರಾಮನ ಪಾತ್ರದಲ್ಲಿರುವ ಭಾವಚಿತ್ರ ನೋಡಿ ಕಣ್ತುಂಬಿಸಿ ಕೊಳ್ಳಿ . ಶಂಭು ಹೆಗಡೆ ಅವರು ಅದೆಷ್ಟು ಚಂದವಾಗಿ , ರಾಜಗಾಂಭೀರ್ಯದಲ್ಲಿ ಕುಳಿತು ಶೋಭಿಸುತ್ತಿದ್ದರು ಎಂಬುದನ್ನು ನಾನು ಹೇಳಿಯೇ ತಿಳಿಯಬೇಕಿಲ್ಲ. ಅಲ್ಲವೇ ? ರಾಮನಿಗೊಪ್ಪುವ ಎಂತಹ ಸುಂದರ ಶ್ರೀಮುಖಮುದ್ರೆ ಅದು .

ಅದರ ಪಕ್ಕದಲ್ಲೇ ಮೇಳದ ಪ್ರದರ್ಶನ ಇರಲಿ ಇಲ್ಲದೇ ಇರಲಿ ನಿತ್ಯ ಪೂಜೆಯ ಗಣಪತಿ ಕಿರೀಟ. ಮನೆಯಲ್ಲಿ ದೇವರ ಪೀಠದಲ್ಲಿ ಇಟ್ಟು ಪೂಜಿಸುವ ಪರಿಪಾಠ ಇತ್ತು . ನಾನೂ ಕೂಡ ಅದನ್ನು ದೇವರ ಪೀಠದಲ್ಲಿದ್ದಾಗ ಅನೇಕ ಬಾರಿ ಪೂಜೆ ಸಲ್ಲಿಸುವ ಅವಕಾಶ ನನ್ನ ಪಾಲಿಗೆ ಬಂದಿತ್ತು ಅನ್ನುವದೇ ನನಗೆ ಒಂದು ಹೆಮ್ಮೆಯ ಸಂಗತಿ . ಆ ಕಿರೀಟದ ಇತಿಹಾಸ ಪರಂಪರೆಯೇ ಅಂತಹುದು. ಮಾವಿನಕೆರೆಯಿಂದ ಹಾಗೆಯೇ ಕೆರೆಮನೆಯ ತನಕದ ಕಿರೀಟದ ಪಾತ್ರ ಬಹಳ ಮಹತ್ವದ್ದು . ಅದನ್ನು ಮಾವಿನಕೆರೆಯ ಯಕ್ಷಗಾನದ ಖ್ಯಾತ ಯಾಜಿ ಭಾಗವತರು ತಮ್ಮ ಪರಮಾಪ್ತ ಸ್ನೇಹಿತರಾಗಿದ್ದ ಶಿವರಾಮ ಹೆಗಡೆ ಅವರಿಗೆ ಅಂದು ಹಸ್ತಾಂತರಿಸಿದ್ದರು. ಅದನ್ನು ಹಾಗೆಯೇ ಚೀಲದಲ್ಲಿ ತುಂಬಿ ಶಿವರಾಮ ಹೆಗಡೆ ಅವರು ವಸ್ತು ತಂದಂತೆಯೇ ತರಲಿಲ್ಲ. ಅವರು ನಂಬಿದ ಇಡಗುಂಜಿ ಮಹಾಗಣಪತಿಯನ್ನು ಕ್ಷಣಕಾಲ ಕಿರೀಟಧಾರಿಯಾಗಿಸಿ ಪದತಲದಲ್ಲಿಟ್ಟು ಪೂಜಿಸಿ ಗೌರವದೊಂದಿಗೆ ಸಂಭ್ರಮದೊಂದಿಗೆ ತಂದರು. ಅದನ್ನು ತಂದಂದಿನಿಂದ ಇಡಗುಂಜಿ ಮಹಾಗಣಪತಿಯ ಪ್ರತಿರೂಪವಾಗಿಯೇ ಕಂಡು ಪೂಜಿಸಿದರು. ಆ ಪೂಜೆ ನಿರರ್ಥಕವಾಗಲಿಲ್ಲ ಶಿವರಾಮ ಹೆಗಡೆ ಅವರನ್ನು ನಟಸಾರ್ವಭೌಮರನ್ನಾಗಿ ಮಾಡಿತು . ಅವರ ಮಕ್ಕಳು ಕೂಡ ಆ ರಂಗದ ಸಾರ್ವಭೌಮರಾಗಿಯೇ ಮೆರೆದರು . ಜನಪ್ರಿಯತೆ, ಕೀರ್ತಿ , ಪ್ರತಿಷ್ಠೆ , ಆ ಕಿರೀಟ ಪೂಜಿಸಿ ಗೌರವಿಸಿದವರಿಗೆಲ್ಲ ಪ್ರಸಾದ ರೂಪದಲ್ಲಿ ದಕ್ಕಿದೆ .
ಅದನ್ನು ಇತ್ತೀಚೆಗಿನ ಕೆಲವು ತಿಂಗಳುಗಳ ಹಿಂದೆ ವಿಸರ್ಜನೆ ಮಾಡಿದ ಸುದ್ದಿ ತಿಳಿದು ಬಹಳ ನೋವಾಯಿತು. ನಮಗೆಲ್ಲ ಅದರೊಂದಿಗಿನ ಸ್ಪಂದನೆ ( attachment ) ಹಾಗಿತ್ತು. ಆದರೇನು ಮಾಡೋಣ

” ಕಾಲಾಯಾ ತಸ್ಮೈ:ನಮ:”. . .

Related Articles

Leave a Reply

Your email address will not be published. Required fields are marked *

Back to top button
error: Content is protected !!