ಅಮೇರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ಮೋದಿ ಫೋನ್ ಸಂಭಾಷಣೆ
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಲಿರುವ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ದೂರವಾಣಿ ಮಾತುಕತೆ ನಡೆದಿದೆ.
ಬೈಡನ್ ರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಲಪಡಿಸಲು ಉಭಯ ರಾಷ್ಟ್ರಗಳ ನಡುವೆ ಕ್ರಿಯಾಶೀಲ ಪ್ರಯತ್ನಗಳ ಅವಶ್ಯಕತೆ ಇದೆ ಎಂದರು. 2014 ಮತ್ತು 2016 ರಲ್ಲಿ ಬೈಡನ್ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ನೆನಪುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮೆಲುಕು ಹಾಕಿದರು. ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಕೂಡ ಪ್ರಧಾನಿ ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ಭಾರತದೊಂದಿಗೆ ಅಮೆರಿಕ ವಿಶೇಷವಾದ ಸಂಬಂಧವನ್ನು ಹೊಂದಿದೆ ಎಂದು ಉಲ್ಲೇಖಿಸಿದ ಬೈಡನ್, ಭಯೋತ್ಪಾದನೆ ನಿಗ್ರಹ, ಕೋವಿಡ್ ನಿಯಂತ್ರಣ, ಜಾಗತಿಕ ತಾಪಮಾನ ಇಳಿಕೆಯ ಬಗ್ಗೆ ಉಭಯ ರಾಷ್ಟ್ರಗಳ ನಡುವೆ ಪರಿಣಾಮಕಾರಿಯಾದ ಸಹಭಾಗಿತ್ವ ನಡೆಯುವ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸಕಾರಾತ್ಮಕ ವಾತಾವರಣ ನಿರ್ಮಿಸಲು ಮುಂದಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಶುಭ ಹಾರೈಕೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು.