ವಿಶೇಷ ಲೇಖನಗಳು

ಮೀನು ಪ್ರಿಯರಿಗೆ ವಿಷಪ್ರಾಶನ! ?

ಕೆಲವು ವರ್ಷಗಳ ಹಿಂದೆ ತರಕಾರಿ ತಿನ್ನುವವರು ಜಾಗೃತರಾಗಿ ಬೊಬ್ಬೆ ಹೊಡೆದಿದ್ದರು. ತರಕಾರಿಗೆ ವಿಷಭರಿತ ಕೆಮಿಕಲ್ ಮಿಶ್ರಿತ ಗೊಬ್ಬರ ಹಾಗೂ ಗಿಡಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದರು ಎನ್ನುವ ಕಾರಣಕ್ಕಾಗಿ . ಬೆಳೆದ ತರಕಾರಿಗಳು ವಿಷಪೂರಿತವಾಗಿ ಹಲವಾರು ಮಾರಕ ರೋಗಗಳಿಗೆ ತುತ್ತಾಗಿ ಬಿಡುವ ವಿಷಯ ತಿಳಿದು ಜನರು ಪ್ರತಿರೋಧ ತೋರಿದ್ದರು . ತುಸು ತಡವಾಗಿಯಾದರೂ ಜನ ಜಾಗೃತರಾಗಿ ಪ್ರತಿಭಟನೆ ಮುಂದಾಗಿದ್ದರಿಂದ ಸ್ವಲ್ಪ ಮಟ್ಟಿಗೆ ಅದು ನಿಯಂತ್ರಣಕ್ಕೆ ಬರುವಂತಾದವು. ಈಗ ಅದೇ ರೀತಿಯ ಇನ್ನೊಂದು ಅದಕ್ಕಿಂತಲೂ ಭಯಂಕರವಾದ ಕೆಮಿಕಲ್ ಮಿಶ್ರಣ ಮೀನುಗಳು ಕೆಡದಂತೆ ಇಡಲು ಪ್ರಯತ್ನಿಸುತ್ತಿದ್ದಾರಂತೆ. ಮನುಷ್ಯನ ಹೆಣ ಕೆಡದಂತೆ ಉಪಯೋಗಿಸುವ ಫಾರ್ಮಲಿನ್ ಎಂಬ ಕೆಮಿಕಲ್ ಮೀನಿಗೆ ಬಳಸಿ ಅದು ಕೆಡದಂತೆ ಉಪಯೋಗಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ . ಇದು ನಿಜವೇ ಆದರೆ ಅಂತಹ ಹೇಯ ಕಾರ್ಯದ ವಿರುದ್ಧ ತೀವ್ರ ಪ್ರತಿಭಟನೆ ಆಗಲೇ ಬೇಕು . ಅಂತವರ ಹೆಡೆಮುರಿ ಕಟ್ಟಬೇಕು . ಇಂತಹ ಕೆಮಿಕಲ್ ಉಪಯೋಗದಿಂದಾಗಿ ಮನುಷ್ಯನ ಬದುಕು ಎಷ್ಟು ಅಸುರಕ್ಷಿತ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಆರೋಗ್ಯ ಇಲಾಖೆ ಅಧಿಕಾರಿಗಳು ಕತ್ತೆ ಕಾಯಲು ಯೋಗ್ಯ ಎಂಬುದನ್ನು ಜನರು ಆಡಿಕೊಳ್ಳುವಂತಾಗಿದೆ. ಇಂತಹ ಘಟನೆಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸ್ಕಾಡ್ ಇದೆ . ಅದು ಯಾವ ಸೀಮೆಯಲ್ಲಿ ತಮ್ಮ ಇಲಾಖೆಯ ಬೋರ್ಡ್ ತಗಲು ಹಾಕಿಕೊಂಡು ಅದರ ಅಧಿಕಾರಿಗಳು ನೇತಾಡುತ್ತಿದ್ದಾರೋ ಉಡುಪಿಯ ಶ್ರೀಕೃಷ್ಣನೇ ಬಲ್ಲ!
ಕರಾವಳಿಯ ಮುಕ್ಕಾಲು ಪಾಲು ಜನರಿಗೆ ಮೀನು ನಿತ್ಯ ಆಹಾರ. ಬಹುತೇಕ ಈ ಭಾಗದ ಜನರಿಗೆ ಮೀನು ಕೆಮಿಕಲ್ ಮಿಶ್ರಿತ ಯಾವುದು ಅಲ್ಲ ಯಾವುದು ಹೌದು ಎಂಬುದನ್ನು ಸಾಮಾನ್ಯವಾಗಿ ಅರಿತವರೇ ಇರುತ್ತಾರೆ . ಹಾಗಂತ ಅರಿವಿಲ್ಲದೇ ಹಸಿವು ನೀಗಿಸಲು ತರಾತುರಿಯಲ್ಲಿ ತಿಂದು ಮುಗಿಸುವವರೂ ಇದ್ದಾರೆ . ಅವರ ಸ್ವಾಸ್ಥ್ಯದ ಅವಸ್ಥೆ ಏನಾಗಬೇಡ ಊಹಿಸಿ ನೋಡಿ . ಮೀನಿನ ಬಗ್ಗೆ ತಿಳವಳಿಕೆಯುಳ್ಳವರು ಅದರ ರುಚಿ ,ಬಣ್ಣ, ವಾಸನೆಯ ಮೇಲೆಯೇ ಮೀನಿನ ಪರಿಶುದ್ಧತೆಯನ್ನು ತಿಳಿದು ಕೊಳ್ಳುತ್ತಾರೆ.

ಆದರೆ ಈ ಸೀಮೆಯ ಬಿಟ್ಟು ಬೆಂಗಳೂರು , ಉತ್ತರ ಕರ್ನಾಟಕ ಇತ್ಯಾದಿ ಕರಾವಳಿಯ ಹೊರತಾದ ಭಾಗದ ಜನರಿಗೆ ಇವೆಲ್ಲ ಹೇಗೆ ತಿಳಿಯಲು ಸಾಧ್ಯ? ಅಲ್ಲವೇ ?

ಈ ಕೆಮಿಕಲ್ ಬಳಕೆ ಇತ್ತೀಚೆಗಿನ ದಿನಗಳಲ್ಲಿ ಬಳಸಿಕೊಂಡಿದ್ದಲ್ಲ. ಬಹಳ ವರ್ಷಗಳಿಂದ ಈ ಮಿಶ್ರಣ ಮಾಡುವ ಕ್ರಿಯೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ . ಹೀಗಾಗಿ ಮೀನುಗಳನ್ನು ಗೋವಾ ಮತ್ತು ಕೇರಳ ರಾಜ್ಯಗಳು ಕೆಲವು ಕಾಲ ಈ ಕಾರಣಕ್ಕಾಗಿ ನಿಷೇಧಿಸಿದ್ದವು ಎಂದು ಹೇಳಲಾಗಿದೆ . ಆ ನಂತರ ಈ ದರಿದ್ರ ದಂಧೆ ನಿಲ್ಲಿಸಿ ಮತ್ತೆ ಆ ರಾಜ್ಯದ ವಿಶ್ವಾಸಗಳಿಸಿ ಆ ಎರಡು ರಾಜ್ಯಗಳಿಗೆ ಪುನಹ ಮೀನು ವಹಿವಾಟು ನಡೆಸಲಾಗಿತ್ತಂತೆ .

ಆದರೆ ಮತ್ತೆ ಇದೀಗ ಅದೇ ಪುನರಾವರ್ತನೆಗೊಂಡಿದೆಯಂತೆ. ಜನರು ಆರೋಪಿಸುವಂತೆ ಈ ಕೆಮಿಕಲ್ ಬಳಕೆ ನಿರಾಂತಕವಾಗಿ ನಡೆದಿದೆ ಎನ್ನಲಾಗಿದೆ . ಮೊದಲು ಪಾಂಪ್ಲಟ್, ಅಂಜಲ್, ಚಟ್ಲಿ ( ಸಿಗಡಿ)ಇತ್ಯಾದಿ ಬೆಲೆ ಬಾಳುವ ಮೀನುಗಳ ದೀರ್ಘ ಕಾಲದ ಬಾಳಿಕೆಗಾಗಿ ಹೆಚ್ಚಾಗಿ ಬಳಸುತ್ತಿದ್ದರಂತೆ. ಆದರೆ ಇತ್ತೀಚೆಗೆ ಕೆಲವು ದಿನಗಳಿಂದ ಆ ಮೀನುಗಳ ಹೊರತಾಗಿ ನಂಗು, ಅಡಾಮೀನು, ಕೊಕ್ಕರು, ಕೊಡವಾಯಿ, ಮಾಂಜಿ, ಬಂಗಡೆ ಮೀನುಗಳಿಗೂ ಈ ಮಾರಕ ಕೆಮಿಕಲ್ ಅಭಿಷೇಕ ಮಾಡಿ ಮಾರ್ಕೆಟ್ ಗೆ ಬಿಡುತ್ತಿದ್ದಾರೆಂದು ಹೇಳಲಾಗಿದೆ .

ಈ ಹಿಂದೆ ಸರಕಾರದ ಗಮನಕ್ಕೆ ತರಲಾಗಿತ್ತಂತೆ. ಅವರು ಅಂತವರ ವಿರುದ್ಧ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗುವೆ ಎಂದು ಹೇಳಿದ್ದು ಇತ್ತು . ಆದರೆ ಅದು ಅನುಷ್ಠಾನಕ್ಕೆ ಇನ್ನೂ ಬರಲಿಲ್ಲ ಎಂಬ ಅಸಮಾಧಾನ ಜನಕ್ಕೆ ಇದೆ . ಮನುಷ್ಯನ ಸ್ವಾಸ್ಥ್ಯ ಬದುಕಿನ ದೃಷ್ಟಿಯಿಂದಲಾದರೂ ಜಿಲ್ಲಾಡಳಿತ ಇದರ ಸತ್ಯಾಸತ್ಯತೆ ತಿಳಿದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗ ಬೇಕಿತ್ತು . ಆದರೆ ಕ್ರಮ ಹೇಗೂ ಇರಲಿ ಪ್ರಾಥಮಿಕ ಪರಿಶೀಲನೆಗೂ ಮುಂದಾಗಿಲ್ಲ ಎಂಬ ಆರೋಪ ಇದೆ . ಇನ್ನಾದರೂ ಆಢಳಿತ ಎಚ್ಚೆತ್ತು ಕೊಂಡು ತನಿಖೆ ನಡೆಸಿ ತಪ್ಪಿತಸ್ಥರು ಎಂದು ಕಂಡು ಬಂದರೆ ಅವರ ಮೇಲೆ ಕಠಿಣ ಕ್ರಮಕ್ಕೆ ಮಂದಾಗಲು ಕರಾವಳಿಯ ಸೀಮೆಯ ಮೀನು ಭಕ್ಷಕರನೇಕರು ವಿನಂತಿಸಿಕೊಂಡಿದ್ದಾರೆ.

ಒಂದು ಎಚ್ಚರಿಕೆಯ ಮಾತು ಮೀನು ತಿನ್ನುವವರಿಗಾಗಿ. ಮೀನು ತಿನ್ನುವ ಮೊದಲು ಅವರವರ ಮೂಗನ್ನು ಕ್ರಿಯಾಶೀಲ ( activate ) ಗೊಳಿಸಿ ತುಸು ಮೂಗನ್ನು ಅರಳಿಸಿ ವಾಸನೆಯನ್ನು ಗಮನಿಸಿ . ಅದೇನಾದರೂ ಡಿಡಿಟಿ ಅಥವಾ ಫಿನೈಲ್ ವಾಸನೆ ಬಂತು ಎಂದಾದರೆ ಅದು ನೂರಕ್ಕೆ ನೂರರಷ್ಟು ಕೆಮಿಕಲ್ ಮಿಶ್ರಣ ಗೊಂಡಿದೆ ಎಂದು ತಿಳಿಯತಕ್ಕದ್ದು. ಇದನ್ನು ಸ್ವತಃ ಮೀನು ವ್ಯಾಪಾರ ಮಾಡುವವರೊಬ್ಬರು ಮೀನು ತಿನ್ನುವವರನ್ನು ಎಚ್ಚರಿಸಿದ್ದಾರೆ. ಅವರು ಇಂತಹ ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಇಂದು ಹೋರಾಟ ನಡೆಸಿದ್ದಾರಂತೆ. ಅವರೇ ಮೊದಲು ಈ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದವರಾಗಿದ್ದರು. ಇದೀಗ ಮತ್ತೆ ಅದೇ ರೀತಿಯ ಮನವಿ ನೀಡಲು ಮುಂದಾಗಿದ್ದಾರಂತೆ. ಇನ್ನಾದರೂ ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು , ಹಾಲೀ ಇರಲಿ ಬೇಕಾದರೆ ಅವರು ಮಾಜಿಗಳೇ ಇರಲಿ ಈ ಬಗ್ಗೆ ಧ್ವನಿ ಎತ್ತಬೇಕು ಎಂಬುದು ಕರಾವಳಿಯ ಮೀನು ಪ್ರಿಯರ ಆಗ್ರಹ.

ಕಾದುನೋಡೋಣ ಮುಂದೇನಾದೀತೆಂದು ಅಲ್ಲವೇ ?

Related Articles

Leave a Reply

Your email address will not be published. Required fields are marked *

Back to top button
error: Content is protected !!