
ನವದೆಹಲಿ ಡಿ.18 : 60 ವರ್ಷದ ವೃದ್ಧರೊಬ್ಬ ರೊಬ್ಬರು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಿಹಾರದಿಂದ ಆರಂಭಿಸಿ 1000 ಕಿ.ಮೀ ಸೈಕಲ್ ತುಳಿದು ದೆಹಲಿ-ಹರಿಯಾಣ ಗಡಿಯ ಟಿಕ್ರಿಯನ್ನು ತಲುಪಿದ್ದಾರೆ.
ಬಿಹಾರದ ಸಿವಾನ್‌ನ ಸತ್ಯದೇವ್ ಮಾಂಜಿ ಎಂಬುವವರು ದೆಹಲಿಯ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು 11 ದಿನಗಳ ಅವಧಿಯಲ್ಲಿ 1000 ಕಿ.ಮೀ ಪ್ರಯಾಣ ಪೂರ್ಣಗೊಳಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಸತ್ಯದೇವ್ ಮಾಂಜಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
“ನನ್ನ ತವರು ಜಿಲ್ಲೆಯಾದ ಸಿವಾನ್‌ನಿಂದ ಇಲ್ಲಿಗೆ ಬರಲು ನನಗೆ 11 ದಿನಗಳು ಬೇಕಾಯಿತು. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಚಳುವಳಿ ಮುಗಿಯುವವರೆಗೂ ನಾನು ಇಲ್ಲಿಯೇ ಇರುತ್ತೇನೆ” ಎಂದು ಸತ್ಯದೇವ್ ಮಾಂಜಿ ಹೇಳಿದರು.
ಕೃಷಿ ಕಾನೂನಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ.
ನಿನ್ನೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು. ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ನಿನ್ನೆ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.