
ಉಡುಪಿ,ಫೆ.8; ಮಗನ ಅಂತ್ಯಸಂಸ್ಕಾರ ನಡೆಸಲು ಹೆತ್ತವರಿಗೆ ಅಸಹಾಯಕತೆ ಎದುರಾದಗ, ಉಡುಪಿಯ ಸಮಾಜಸೇವಕರು ಅಂತ್ಯಸಂಸ್ಕಾರ ನೆಡಸಲು ನೆರವಿಗೆ ಬಂದು, ಮಾನವಿಯತೆ ಮೆರೆದ ಘಟನೆ ಉಡುಪಿಯಲ್ಲಿ ರವಿವಾರ ನಡೆಯಿತು.
ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ವಿಭಾಜಕದ ದಂಡೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಅಪರಿಚಿತ ಯುವಕನನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಅದಗಾಲೇ ಯುವಕನು ಮೃತಪಟ್ಟಿರುವುದು ಧೃಡಪಟ್ಟಿತು. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಯಿತು. ಸಮಾಜಸೇವಕರು ಅಪರಿಚಿತ ಯುವಕನ ಸಂಬಂಧಿಕರ ಪತ್ತೆಗೊಳಿಸಲು, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಬಿತ್ತರಿಸಿದ್ದರು. ಜಾಲತಾಣ ವರದಿಯಿಂದ ವಿಷಯ ತಿಳಿದು ಯುವಕನ ಹೆತ್ತವರಾದ ಕಾರ್ಕಳ ರಂಗನಪಲ್ಕೆ ಭೋಜ ಪೂಜಾರಿ, ಲೀಲಾ ಪೂಜಾರಿ ಅವರು, ಸಂಬಂಧಿಕರೊಂದಿಗೆ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿ ಶವ ಕಂಡು ಮಗನದೆಂದು ಧೃಡಿಕರಿಸಿದರು.
ಕಾನೂನು ಪ್ರಕ್ರಿಯೆಗಳು ನಡೆದು, ಮಗನ ಶವ ಪಡೆದುಕೊಂಡಿರುವ ಹೆತ್ತವರಿಗೆ, ಅಂತ್ಯಸಂಸ್ಕಾರ ನಡೆಸಲು ಅಸಹಾಯಕ ಪರಿಸ್ಥಿತಿ ಎದುರಾಯಿತು. ತಕ್ಷಣ ಸ್ಪಂದಿಸಿದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನೆರವಾದರು. ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಆರ್ಥಿಕ ನೆರವು ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ರುದ್ರಭೂಮಿಗೆ ಶವ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿತು.
ಮೃತ ಯುವಕ ಅಕ್ಷತ್ (28ವ) ನಗರಸಭೆ ವಾರ್ಡುಗಳಲ್ಲಿ ಮನೆಯಿಂದ ಕಸ ಸಂಗ್ರಹಿಸುವ ಗುತ್ತಿಗೆದಾರರ ಸಂಗಡ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಎಂದು ತಿಳಿದುಬಂದಿದೆ. ಮೃತ ಯುವಕನ ಪರಿಸರ ಸ್ವಚ್ಛತಾ ಪ್ರಾಮಾಣಿಕ ಕಾರ್ಯವು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.