ನಾಳೆ ಬಸ್ ಇರುತ್ತಾ? ಈ ಬಗ್ಗೆ ಸಾರಿಗೆ ಸಚಿವ ಹೇಳಿದ್ದೇನು?

ಬೆಂಗಳೂರು : ಕೆಲವು ಕಾರ್ಮಿಕ ಸಂಘಟನೆಗಳು ನಾಳೆ ತಮ್ಮ ಬೇಡಿಕೆಗಳನ್ನು ಮತ್ತೊಮ್ಮೆ ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿಕೆ ನೀಡಿದ್ದಾರೆಯಷ್ಟೇ. ಅವರ ಬೇಡಿಕೆಗಳ ಬಗ್ಗೆ ನಮಗೂ ಸಹಾನುಭೂತಿಯಿದೆ. ನಾಳೆ ಯಾವುದೇ ಬಸ್ ಸಂಚಾರಕ್ಕೆ ವ್ಯತ್ಯಯ ಇಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಬೇಡ. ನಾಳೆ ಸಾರಿಗೆ ನೌಕರರ ಯಾವುದೇ ಬಂದ್ ಇಲ್ಲ ಎಂಬುದಾಗಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವಂತ ಅವರು, ಈಗಾಗಲೇ ಸಾರಿಗೆ ಸಿಬ್ಬಂದಿಗಳ ಕೆಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳ ಅರ್ಧ ವೇತನವನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ ಬಾಕಿ ವೇತನಗಳನ್ನು ಶೀಘ್ರದಲ್ಲಿಯೇ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಆರ್ಥಿಕ ಇಲಾಖಎಗೂ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಇತರೆ 3 ಸಾರಿಗೆ ನಿಗಮಗಳ ಸಿಬ್ಬಂದಿಗಳ ಬೇಡಿಕೆಗಳನ್ನು ಪರಿಹರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಇಂದು ಕೂಡ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.