ಪ್ರಾಮಾಣಿಕ ಆರ್‌ಟಿಐ ಕಾರ್ಯಕರ್ತನಿಗೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಉಡುಪಿ: ಭ್ರಷ್ಟಾಚಾರಿಗಳ ಹುಳುಕು ಹೊರ ಬೀಳುತ್ತದೆ ಎಂಬ ಕಾರಣಕ್ಕಾಗಿ ಪ್ರಾಮಾಣಿಕ ಆರ್‌ಟಿಐ ಕಾರ್ಯಕರ್ತ ಬಾರಕೂರಿನ ಶಂಕರ ಶಾಂತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆದು ಒಂದು ವಾರವಾದರೂ ಆರೋಪಿಗಳನ್ನು ಪತ್ತೆ ಹಚ್ಚಲು, ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಬಿಲ್ಲವ ಸಮಾಜದ ಸದಸ್ಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಬನ್ನಂಜೆ ಬಿಲ್ಲವ ಸಂಘದಲ್ಲಿ ಶುಕ್ರವಾರ ಸಭೆ ನಡೆಸಿ ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಹೋರಾಟ ಮಾಡಲು ನಿರ್ಧರಿಸಲಾಯಿತು.
ಬಲಿಷ್ಠರ ವಿರುದ್ಧ, ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವವರನ್ನು ಕೆಟ್ಟವರನ್ನಾಗಿ ಬಿಂಬಿಸುವ ಕೆಲಸಗಳು ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ಈ ಪ್ರಕರಣದಲ್ಲಿ ಕೂಡ ಆರೋಪಿಗಳು ಬಲಿಷ್ಠರಾಗಿರುವ ಕಾರಣ ಹಲ್ಲೆಗೊಳಗಾದವರನ್ನೇ ಕೆಟ್ಟವ ಎಂಬಂತೆ ಬಿಂಬಿಸುವ ಕಾರ್ಯ ನಡೆಯುತ್ತಿದೆ. ಶಾಂತಿಯಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸುವ ಶಂಕರ ಶಾಂತಿ ಅವರು, ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕಾಗಿ ನಿತ್ಯ ಹೋರಾಟ ಮಾಡುತ್ತಿರುವವರು. ಈ ಕಾರ್ಯವೇ ಭ್ರಷ್ಟಾಚಾರಿಗಳ ನಿದ್ದೆಗೆಡಿಸಿತ್ತು. ಅವರು ಸಾಚಾಗಳಾಗಿದ್ದರೆ ಕಾನೂನು ಮೂಲಕ ಹೋರಾಟ ಮಾಡುತ್ತಿದ್ದರು. ಅದನ್ನು ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಿರುವುದು ನೋಡಿದಾಗ ಅವರ ಹುಳುಕು ಹೊರಗೆ ಬರುತ್ತದೆ ಎಂಬ ಭಯದಿಂದಲೇ ಈ ಕೃತ್ಯ ಎಸಗಿದ್ದಾರೆ. ಆದರೆ ತಮ್ಮ ಅಧಿಕಾರ ಮತ್ತು ಹಣದ ಬಲದಿಂದ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಸಭೆಯಲ್ಲಿದ್ದವರು ಪ್ರಕರಣವನ್ನು ಖಂಡಿಸಿದರು.
ಈ ಸಂದರ್ಭ ಮಾತನಾಡಿದ ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಸಂಘಟಿತ ಹೋರಾಟದ ಮೂಲಕ ನಾವು ಮುಂದಿನ ಹೆಜ್ಜೆ ಇಡಬೇಕಾಗಿದೆ. ಹತಾಶೆ ಭಾವನೆಯನ್ನು ಬಿಟ್ಟು ಧನಾತ್ಮಕವಾಗಿ ಮುನ್ನಡೆಯಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿರುವ ಶಂಕರ ಶಾಂತಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಶಂಕರ್ ಶಾಂತಿಯವರಿಗೆ ಧೈರ್ಯ ತುಂಬುವ ಕಾರ್ಯದೊಂದಿಗೆ ದುಷ್ಕರ್ಮಿಗಳನ್ನು ಪೋಲಿಸ್ ಇಲಾಖೆ ಬಂಧಿಸಿ ಸರಿಯಾದ ಶಿಕ್ಷೆ ಸಿಗುವವರೆಗೆ ಹೋರಾಡಬೇಕಿದೆ ಎಂದು ರಾಮ ಮಾಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಮುಂದಾಳು ಕಿರಣ್ ಕುಂದಾಪುರ ಮಾತನಾಡಿ, ಶಂಕರ್ ಪೂಜಾರಿ ನಿಸ್ವಾರ್ಥ ಸಮಾಜ ಸೇವಕರಾಗಿ ಸಮಾಜದಲ್ಲಿ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವ ಕಾರ್ಯ ಮಾಡುತ್ತಿದ್ದರು. ಜನಸಾಮಾನ್ಯರಿಗೆ ಉಪಯೋಗವಾಗುವ ಆದರೆ ಭ್ರಷ್ಟರಿಗೆ ಕಂಟಕವಾಗಿರುವ ಈ ಕಾರ್ಯ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ ಪೂರ್ವಯೋಜಿತ ಹಲ್ಲೆ ಇದು ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ,ನ್ಯಾಯವಾದಿ ಪ್ರವೀಣ್ ಎಂ ಪೂಜಾರಿ ಮಾತನಾಡಿ ಸಮಾಜದಲ್ಲಿಯ ಅನ್ಯಾಯಕ್ಕೆ ತುಡಿಯುವ ಮನಸ್ಥಿತಿಯ ಶಂಕರ್ ಶಾಂತಿಯವರ ಹೋರಾಟ ಮುಂದೆಯೂ ಸಾಗಲು ನಾವೆಲ್ಲ ಅವರಿಗೆ ಧೈರ್ಯ ತುಂಬಬೇಕಾಗಿದೆ. ಕೆಲವು ಕ್ಷುಲ್ಲಕ ಮನಸಿನ ವ್ಯಕ್ತಿಗಳು ಈ ಹೋರಾಟದ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಘಟನೆ ನಡೆದು ವಾರ ಕಳೆದರೂ ಇನ್ನೂ ದುಷ್ಕರ್ಮಿಗಳನ್ನು ಬಂಧಿಸದಿರುವುದು ಪೋಲಿಸ್ ಇಲಾಖೆಯ ಮೇಲೆ ನಮಗೆ ಅನುಮಾನ ಮೂಡಿಸುತ್ತಿದೆ. ಒಂದು ವೇಳೆ ಬಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳೋಣ ಎಂದು ತಿಳಿಸಿದರು.
ಮಾನವೀಯ ಮತ್ತು ಸತ್ಯದ ನೆಲೆಯಲ್ಲಿ ನಾವೆಲ್ಲರೂ ಶಂಕರ ಶಾಂತಿಯ ಪರ ಇರೋಣ, ಭ್ರಷ್ಟರ ವಿರುದ್ಧ ಇರೋಣ. ಇದು ಬಿಲ್ಲವರಿಗೆ ಸೀಮಿತವಾಗದೇ ನ್ಯಾಯ ಪರ ಇರುವ ಎಲ್ಲ ಸಮಾಜಗಳು ಒಟ್ಟುಗೂಡಿ ಹೋರಾಟ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಕೂಡಲೇ ಕಾನೂನು ಕ್ರಮ ಕೈಗೊಳ್ಳದೇ ಹೋದರೆ ಎಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಲು, ನ್ಯಾಯ ಸಿಗುವವರೆಗೆ ಹೋರಾಟ ಮಾಡಲು ನಿರ್ಧರಿಸಲಾಯಿತು.
ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.