ಕರಾವಳಿ

ಇನ್ನು 2 ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರವಾದ ಹೋರಾಟ : ಬಿಲ್ಲವ ಯುವ ವೇದಿಕೆ

ಉಡುಪಿ: ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಇಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬನ್ನಂಜೆ ನಾರಾಯಣ ಗುರು ಸಭಾ ಭವನದಲ್ಲಿ ಪ್ರತಿಭಟನಾ ಸಭೆ ನಡೆಯಿತು.


ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ಆರೋಪಿ ಬಂದು ಕೇಸ್ ದಾಖಲಿಸಿದ ಬಳಿಕ ಹಲ್ಲೆಗೊಳಗಾದವರ ದೂರು ದಾಖಲಾಗುತ್ತದೆ. ಪ್ರಕರಣದ ಆರೋಪಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದಾಗಲೇ ಆರೋಪಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು.

ಆದರೆ ಆ ಸಮಯದಲ್ಲಿ ಪೊಲೀಸ್ ಇಲಾಖೆ ಅವರನ್ನು ಕೈಬಿಟ್ಟಿದೆ. ಆದ್ದರಿಂದ ಇಂದು ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಈಗಾಗಲೇ ಮನವಿಯನ್ನು ಕೊಟ್ಟಿದ್ದು, ಇಲಾಖೆಯಿಂದ ಯಾವುದೇ ಕಾರ್ಯ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಇನ್ನು 2 ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದರು.

ಈ ವೇಳೆ ಅನಿ ಅಮೀನ್ ಬಂಟ್ವಾಳ್ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿ ಸಚಿವರು ನೀಡಿರುವ ಭರವಸೆಗಳು ಈಡೇರಿಲ್ಲ. ಶಂಕರ್ ಶಾಂತಿಯವರು ಯಾವಾಗಲೂ ಸಮಾಜಕ್ಕಾಗಿ ಹೋರಾಡಿದವರು. ಹಾಗಾಗಿ ಸಮಾಜ ಅವರಿಗೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಶಂಕರ್ ಶಾಂತಿಯಂತವರು ಮೂಲೆ ಗುಂಪಾಗುವುದರ ಜೊತೆಗೆ ಸಮಾಜದಲ್ಲಿ ಮರೆಯಾಗುತ್ತಾರೆ. ಇದಕ್ಕೆ ಅವಕಾಶ ನೀಡದೆ ಸಮಾಜದ ಧ್ವನಿಯಾಗಿ ಸಮಾಜದಲ್ಲಿ ಆಗುವ ಅನ್ಯಾಯವನ್ನು ಪ್ರತಿಭಟಿಸಬೇಕು. ಈ ಪ್ರತಿಭಟನೆ ಒಂದು ಕ್ರಾಂತಿಯಾಗಬೇಕು ಎಂದರು. ಇದೇ ವೇಳೆ ಶಂಕರ್ ಶಾಂತಿಯವರಿಗೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು, ಈ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಡಾ. ಆಶಾ ರಾಜ್ ಜೈನ್, ದಯಾನಂದ ಉಗ್ಗೆಲ್ ಬೆಟ್ಟು, ವಿಶ್ವನಾಥ ಕಲ್ಮಾಡಿ, ಮಾಧವ ಬನ್ನಂಜೆ, ಸುಂದರ್ ಕಲ್ಮಾಡಿ, ಸುಲೋಚನಾ ದಾಮೋದರ್, ಮದನ್ ಎಸ್,ಕಿರಣ್ ಕುಂದಾಪುರ,ಪ್ರವೀಣ್ ಕುಮಾರ್ ಕಾಪು, ದೀಪಕ್ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!