ಕವಿವರ್ಯ ಎನ್ ಎಸ್ ಎಲ್ ರಿಗೆ ನುಡಿ ಪುಷ್ಪಾಂಜಲಿ

ಕರ್ನಾಟಕ ಅನೇಕ ಪ್ರಸಿದ್ಧ ಕವಿಗಳನ್ನು ಈಗಾಗಲೇ ಕಳೆದು ಕೊಂಡಿದೆ. ಹಾಗೆ ಕಳೆದು ಕೊಂಡವರಲ್ಲಿ ಇಂದು ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಎನ್ ಎಸ್ ಎಲ್ ರು ಕೂಡಾ ಅವರೆಲ್ಲರಲ್ಲೊಬ್ಬರಾಗಿ ಬಿಟ್ಟರು. ಕವಿಗಳು ಕಣ್ಣೆದುರಿಗೆ ಇಲ್ಲದಿರುವದು ಅದೆಷ್ಟು ಸತ್ಯವೋ ಅವರೆಲ್ಲರ ಕಾವ್ಯ ಇಂದಿಗೂ ಅವರನ್ನು ಜೀವಂತವಾಗಿ ಇರಿಸಿದೆ ಎನ್ನುವುದು ಕೂಡಾ ಅಷ್ಟೇ ಸತ್ಯ. ಎನ್ ಎಸ್ ಎಲ್ ರು ಮೂಲತಃ ಶಿವಮೊಗ್ಗ ಜಿಲ್ಲೆಯವರು. 1936 ರಲ್ಲಿ ಅವರ ಜನನ. ಅವರಿಗೆ ಈಗ 85 ವರ್ಷ ವಯಸ್ಸಾಗಿತ್ತು .
ಇವರು ಕಾಲೇಜಿನ ಪ್ರಾಧ್ಯಾಪಕ ವೃತ್ತಿಯ ನಡುವೆ ಕವಿತ್ವ ಮತ್ತು ಇತರೇ ಸಾಹಿತ್ಯ ಪ್ರಕಾರಗಳನ್ನು ವೃತ್ತಿಯ ನಡುವೆ ಪ್ರವೃತ್ತಿಯಾಗಿಸಿ ಮೈಗೂಡಿಸಿಕೊಂಡವರಾಗಿ ಅದರಲ್ಲಿ ಸಾರ್ಥಕತೆ ಪಡೆದವರಾಗಿದ್ದರು. ಅವರು ಕೇವಲ ಕನ್ನಡದ ಭಾಷೆಯಲ್ಲಿ ಮಾತ್ರ ಪ್ರಭುತ್ವ ಹೊಂದಿದವರಲ್ಲ. ಸಂಸ್ಕೃತ, ಇಂಗ್ಲಿಷ್ ಭಾಷೆಯಲ್ಲಿ ಕೂಡ ಸಾಹಿತ್ಯ ಸಾಧಕರಾಗಿದ್ದ ಅವರು ಷೇಕ್ಸಪಿಯರ್ ನ ಹಾಗೂ ಅನೇಕ ಇನ್ನಿತರರ ಇಂಗ್ಲಿಷ್ ಭಾಷೆಯ ಕಾವ್ಯವನ್ನು ಕನ್ನಡ ಭಾಷೆಗೆ ತರ್ಜುಮೆಗೊಳಿಸಿದವರಾಗಿದ್ದರು. ಅವರ ಕವನಗಳ ಭಾವನಾತ್ಮಕ ಸಾಲುಗಳು ಹಾಡುವ ಮನಸ್ಸುಗಳಿಗೆ ಹರ್ಷೋಲ್ಲಾಸ ಕೊಡುತ್ತಿತ್ತು. ಅವರ ಕವನ ಪ್ರಕಟಗೊಂಡ ಆ ಕ್ಷಣದಲ್ಲಿ ಗಾಯಕರು ಅದನ್ನು ಪಡೆದು ಮುಕ್ತವಾಗಿ ಹಾಡಿ ಜನರ ಮನ ತಣಿಸುತ್ತಿದ್ದರು.
” ಎಲ್ಲಿ ಜಾರಿತೋ, ಮನವು ಎಲ್ಲೇ ಮೀರಿತೋ. . . ” ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ” ” ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ ” ಇಂತಹ ಅದೆಷ್ಟೋ ಗೀತೆಗಳನ್ನು ಕೇಳಿದ ಮನಸ್ಸುಗಳು ಅವರನ್ನು ಸದಾ ಕಾಲ ಹಂಬಲಿಸುತ್ತವೆ. ನಿತ್ಯ ನಿರಂತರ ಅವರ ಸಾಲುಗಳು ಜನ ಮನದಲ್ಲಿ ಕಂಠಸ್ಥವಾಗಿ ಧ್ವನಿಸುತ್ತದೆ.
ಅನೇಕ ಪ್ರಶಸ್ತಿ , ಸನ್ಮಾನಗಳು ಅವರು ಸ್ವೀಕರಿಸಿದ್ದರು. ಇವೆಲ್ಲವೂಗಳಿಗಿಂತ ಜನಪ್ರಿಯತೆ ಅವರನ್ನು ಅತೀ ಎತ್ತರಕ್ಕೆ ಒಯ್ದದ್ದು.
ಕೆಲವು ಕಾಲ ಹಾಡುವವರ ಮುಂದೆ ಕವಿಗಳು ನೇಪತ್ಯಕ್ಕೆ ಸೇರುತ್ತಿದ್ದರು. ಆದರೆ ರಾಷ್ಟ್ರ ಕವಿ ಬೇಂದ್ರೆ , ಗೋವಿಂದ ಪೈ , ಕುವೆಂಪು , ಕೆ ಎಸ್ ಎನ್ , ನಿಸ್ಸಾರ ಅಹ್ಮದ್ , ಎನ್ ಎಸ್ ಎಲ್ , ಇವರುಗಳ ಭಾವನಾತ್ಮಕ ಕವನದ ಸಾಲುಗಳು ಜನ ಕವಿಗಳನ್ನು ಮೊದಲು ಗಮನಿಸುವಂತೆ ಮಾಡಿದರು. ಈ ಹಿರಿಯರ ಕಾರಣಕ್ಕಾಗಿ ಕವನದ ಸಾಲುಗಳು ಕೇವಲ ಹಾಡಿ ಕೇಳುವ ಸಂಗತಿಯಾಗದೇ ಓದುವ ಆಸಕ್ತಿಯನ್ನೂ ಜನರಲ್ಲಿ ಮೂಡಿಸುವಂತಾದವು. ಆ ಕವಿಗಳೆಲ್ಲರ ಬರವಣಿಗೆ ಕಿರಿಯರನೇಕರಿಗೆ ಪ್ರೇರಣೆ ನೀಡಿತ್ತು . ಅನೇಕರು ಆ ಕಾರಣಕ್ಕಾಗಿ ಬರಹಕ್ಕೆ ತೊಡಗಿಕೊಂಡು ಕವಿಗಳಾದವರು ಅದೆಷ್ಟೋ ಮಂದಿ ನಮ್ಮ ನಡುವೆ ಇಂದಿಗೂ ಇದ್ದಾರೆ .
ನಾಡಿನ ಹೆಮ್ಮೆಯ ಕವಿ ಹೃದಯದ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ಇಂದು ಅಸ್ತಂಗತರಾಗಿದ್ದು ಅವರಿಗೆ ಅಂತಿಮ ನಮನ ಸಲ್ಲಿಸಿ ಆತ್ಮಕ್ಕೆ ಚಿರ ಶಾಂತಿ ಕೋರುತ್ತೇನೆ.