ರಾಜ್ಯ

48 ಲಕ್ಷ ಮೌಲ್ಯದ ಕೈಗಡಿಯಾರ ಒಡೆದು ಎಡವಟ್ಟುಮಾಡಿಕೊಂಡ ಕಸ್ಟಮ್ಸ್ ಅಧಿಕಾರಿಗಳು: ವ್ಯಕ್ತಿಯಿಂದ ದೂರು ದಾಖಲು

ಭಟ್ಕಳ: ಕೈಗಡಿಯಾರದಲ್ಲಿ ಚಿನ್ನ ಅಡಗಿಸಿಟ್ಟು ಸಾಗಿಸಿರುವ ಶಂಕೆಯ ಮೇಲೆ ವಿಮಾನದಿಂದ ಇಳಿದ ಭಟ್ಕಳ ಮೂಲದ ವ್ಯಕ್ತಿಯನ್ನು ತಪಾಸಣೆಗೆಂದು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಆತನ ಕೈಯಲ್ಲಿದ್ದ ದುಬಾರಿ ಬೆಲೆಯ ( 48 ಲಕ್ಷಕ್ಕೂ ಅಧಿಕ ಮೌಲ್ಯ ) ಆಡಿಮೂವರ್ಸ ಪಿಗುಯೆಟ್ ಕಂಪೆನಿಯ ಕೈಗಡಿಯಾರವನ್ನು ಜಪ್ತಿ ಪಡಿಸಿಕೊಂಡು ಗಡಿಯಾರದ ಮೌಲ್ಯವನ್ನು ಅರಿಯದೇ ಅದನ್ನು ಪುಡಿಗಟ್ಟಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದ ಘಟನೆ ಕೇರಳ ಕ್ಯಾಲಿಕಟ್ ನಲ್ಲಿ ನಡೆದಿದೆ. ದೂರು ದಾಖಲಿಸಿದ ವ್ಯಕ್ತಿಯನ್ನು ಭಟ್ಕಳ ಕಾರಗದ್ದೆಯ ಮಹ್ಮದ್ ಇಸ್ಮೈಲ್ ಎಂದು ಗುರುತಿಸಲಾಗಿದೆ. ಇವರ ಸಹೋದರ ದುಬೈನಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದು, ವಿಸಿಟಿಂಗ್ ವೀಸಾ ಪಡೆದುಕೊಂಡು ಇವರು ಕೂಢಾ ಸಹೋದರನಿದ್ದಲ್ಲಿಗೆ ತೆರಳಿದ್ದರು.

ಊರಿಗೆ ವಾಪಸ್ಸಾಗುವ ನಿಟ್ಟಿನಲ್ಲಿ ಮಾ.3ರಂದು ಕೇರಳ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿ ಹಾಜರಿದ್ದ ಕಸ್ಟಮ್ಸ್ ಅಧಿಕಾರಿಗಳು ಇಸ್ಮೈಲ್ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ಕೈಯಲ್ಲಿದ್ದ ಗಡಿಯಾರವನ್ನು ಪಡೆದುಕೊಂಡ ಅಧಿಕಾರಿಗಳು ಕೋಣೆಯೊಳಗೆ ತೆಗೆದುಕೊಂಡು ಹೋಗಿ ಅದನ್ನು ಒಡೆದು ಪುಡಿಗೈದಿದ್ದಾರೆ. ಗಡಿಯಾರದಲ್ಲಿ ಚಿನ್ನ ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪುಡಿಯಾದ ಗಡಿಯಾರವನ್ನು ಟ್ರೇನಲ್ಲಿ ಇಟ್ಟು ಇಸ್ಮೈಲ್ರಿಗೆ ಹಿಂದಿರುಗಿಸಿದ್ದಾರೆ.

ಒಡೆದ ಗಡಿಯಾರವನ್ನು ಕಂಡು ಕಂಗಾಲಾದ ಇಸ್ಮೈಲ್, ತನ್ನ ಗಡಿಯಾರವನ್ನು ತನಗೆ ವಾಪಸ್ಸು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಗಡಿಯಾರದ ಮೌಲ್ಯವನ್ನು ಕೇಳಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳೂ ತಬ್ಬಿಬ್ಬಾಗಿದ್ದಾರೆ. ಈ ಕುರಿತು ಇಸ್ಮೈಲ್ ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಏನಿದು ದುಬಾರಿ ಬೆಲೆಯ ಗಡಿಯಾರ? ಅರಬ್ ರಾಷ್ಟ್ರ ದುಬೈನಲ್ಲಿ ದುಬಾರಿ ಬೆಲೆಯ ಬಳಸಲಾದ ಕೈ ಗಡಿಯಾರ ಮಾರಾಟ ಮಳಿಗೆಯೊಂದಿದೆ. ಆ ಮಳಿಗೆಯಲ್ಲಿ ಪ್ರಖ್ಯಾತ ಆಡಿಮೂವರ್ಸ್ ಪಿಗುಯೆಟ್ ಕಂಪೆನಿಯ ಸರಿಸುಮಾರು ರು.60 ಲಕ್ಷ ಮೌಲ್ಯದ (ಮೂಲ ಬೆಲೆ) ಬಳಸಲಾದ ಕೈಗಡಿಯಾರವನ್ನು, ಇಸ್ಮೈಲ್ ಸಹೋದರ ರು.48 ಲಕ್ಷವನ್ನು ನೀಡಿ 2017ರಲ್ಲಿ ಖರೀದಿಸಿದ್ದಾರೆ. 3-4 ವರ್ಷ ತಾನೇ ಕೈಯಲ್ಲಿ ಕಟ್ಟಿಕೊಂಡು ಓಡಾಡಿಕೊಂಡಿದ್ದ ಆತ, ಕಳೆದ ತಿಂಗಳಷ್ಟೇ ದುಬೈಗೆ ಬಂದ ತನ್ನ ಸಹೋದರನಿಗೆ ನೀಡಿದ್ದಾರೆ.

ದುಬಾರಿ ಬೆಲೆಯ ಕೈಗಡಿಯಾರದೊಂದಿಗೆ ಇಸ್ಮೈಲ್ ಭಾರತಕ್ಕೆ ವಾಪಸ್ಸಾಗಿದ್ದು, ಗಡಿಯಾರದ ಮೌಲ್ಯವರಿಯದ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಒಡೆದು ಚಿನ್ನಕ್ಕಾಗಿ ತಲಾಶೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪುಟ್ಟ ಕೈಗಡಿಯಾರದಲ್ಲಿ ಎಷ್ಟು ಕೆಜಿ ಚಿನ್ನವನ್ನು ಸಾಗಿಸಲು ಸಾಧ್ಯ, ಗಡಿಯಾರದ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳುವುದು ಬೇಡವೇ, ಅಧಿಕಾರಿಗಳು ನನಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker