ಕರಾವಳಿತಾಜಾ ಸುದ್ದಿಗಳು

ಶಂಕರ್ ಶಾಂತಿ ಹಲ್ಲೆ ಪ್ರಕರಣ : ನೈಜ ಆರೋಪಿಗಳ ಬಂಧನಕ್ಕೆ ಆಗ್ರಹ, ಜಿಲ್ಲಾಧಿಕಾರಿಗೆ ಮನವಿ

ಉಡುಪಿ ಮಾ.15: ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ನೈಜ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಅವರ ಪತ್ನಿ ಪೂರ್ಣಿಮಾ ಶಂಕರ್, ಮಕ್ಕಳು ಹಾಗೂ ಕುಟುಂಬ ವರ್ಗದ ಉಪವಾಸ  ಸತ್ಯಾಗ್ರಹಕ್ಕೆ  ಬೆಂಬಲವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ  ವೇದಿಕೆ, ದಲಿತ ಸಂಘರ್ಷ ಸಮಿತಿ, ಉಡುಪಿ ಆರ್ ಟಿ ಐ  ಕಾರ್ಯಕರ್ತರ ಸಮಿತಿ, ಜಿಲ್ಲೆಯ ವಿವಿಧ ಬಿಲ್ಲವ ಸಂಘಗಳು, ಸಮಾನ ಮನಸ್ಕರು ಮಣಿಪಾಲದಲ್ಲಿ  ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಶಂಕರ್ ಶಾಂತಿ ಅವರ ಪತ್ನಿ ಪೂರ್ಣಿಮ ಶಂಕರ್ ದೇವರ ಭಯವಿಲ್ಲದೆ ದೇವಸ್ಥಾನದಲ್ಲಿಯೇ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ಪೊಲೀಸರ ಭಯವಿಲ್ಲದಾಗಿದೆ. ಈ ಬೆಳವಣಿಗೆ ಅನುಮಾನವನ್ನು ಉಂಟು ಮಾಡುತ್ತಿದೆ. ಶಂಕರ್ ಶಾಂತಿ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಸುಳ್ಳು ಆರೋಪದ ವಿರುದ್ಧ ಯಾವುದೇ ದೇವರ ಮುಂದೆ ನಾನು ಆಣೆ-ಪ್ರಮಾಣಕ್ಕೂ ಸಿದ್ಧನಾಗಿದ್ದೇನೆ ಎಂದರು. ದುಷ್ಕರ್ಮಿಗಳನ್ನು ಬಂಧಿಸಿ  ನ್ಯಾಯ ದೊರಕಿಸಿ ಎಂದು ಎಂದರು.

ಇದೇ ಸಂದರ್ಭ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಶೇಖರ್ ಹಾವಂಜೆ  ರಾಜಕೀಯದ ಮಂದಿ ಜಿಲ್ಲೆಯಲ್ಲಾದ  ಹಲ್ಲೆಯ  ಬಗ್ಗೆ ಮಾತನಾಡುತ್ತಿಲ್ಲ. ಅಂದರೆ ಅವರಿಗೆ ಓಟು ನೀಡುವ ತನಕ ಮಾತ್ರ ಜನರು ಬೇಕೇ?  ಎಂದು ಪ್ರಶ್ನಿಸಿದರು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯದಲ್ಲಿ ಇಂತಹ ಅನಾಚಾರ ನಡೆದಾಗಲೂ ಸಂಬಂಧಪಟ್ಟ ಇಲಾಖೆ ಪ್ರಶ್ನಿಸುತ್ತಿಲ್ಲ ಇದರ ಬಗ್ಗೆ ಜಿಲ್ಲಾಧಿಕಾರಿಯವರು ಗಮನಹರಿಸಬೇಕಾಗಿದೆ. ಅದೇ ರೀತಿಯಾಗಿ ಮುಂದಿನ ದಿನಗಳಲ್ಲಿ ಶಂಕರ್ ಶಾಂತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಬಿಲ್ಲವ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಮಾತನಾಡಿ ಹಲವಾರು ಬಾರಿ ಪ್ರತಿಭಟನೆ ಆದಾಗ ಮಾತ್ರ ಪೊಲೀಸ್ ಇಲಾಖೆಯು ದುಷ್ಕರ್ಮಿಗಳನ್ನು ಬಂಧಿಸುತ್ತದೆ. ಆದರೆ ನೈಜ ಆರೋಪಿಗಳು  ರಾಜಾರೋಷವಾಗಿ ತಿರುಗಾಡುತ್ತಿದ್ದು ಆ ಮೂಲಕ ಪೊಲೀಸ್ ಇಲಾಖೆಗೆ ಸಡ್ಡು ಹೊಡೆಯುತ್ತಿದ್ದಾರೆ. ಇದು ಇಲಾಖೆಯ ಮೇಲೆ ನಮ್ಮಲ್ಲಿ ಅನುಮಾನ ಮೂಡಿಸುತ್ತಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಬಂದಾಗ ಪ್ರತಿಭಟನಾಕಾರು ಜಿಲ್ಲಾಧಿಕಾರಿಯವರೇ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದಾಗ ಪ್ರತಿಭಟನಾಕಾರರ ಮನವಿ ಮೇರೆಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು ದುಷ್ಕರ್ಮಿಗಳನ್ನು  ಬಂಧಿಸುವ ಭರವಸೆ ನೀಡಿದರು.

ಪ್ರತಿಭಟನಾ ಸಭೆಯಲ್ಲಿ  ಉಡುಪಿ ಜಿಲ್ಲೆಯ ಬಿಲ್ಲವ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಗೂ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಸದಸ್ಯರು, ಆರ್ ಟಿ ಐ ಕಾರ್ಯಕರ್ತರುಗಳು, ಉಡುಪಿ ಜಿಲ್ಲಾ ಬಿಲ್ಲಾ ವೇದಿಕೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾನಮನಸ್ಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker