ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಟಾಸ್ಕ್ ಪೋರ್ಸ್ ತಂಡದ ಸಭೆ

ಕೋವಿಡ್ – 19 ನಿಯಂತ್ರಿಸುವ ಸಂಬಂಧ ರಚಿಸಲಾಗಿರುವ ಟಾಸ್ಕ್ ಫೋರ್ಸ್ ತಂಡದ ಜವಾಬ್ದಾರಿ ಮತ್ತು ಕಾರ್ಯಭಾರದ ಕುರಿತು ಶಾಸಕ ರಘುಪತಿ ಭಟ್ ಇಂದು ದಿನಾಂಕ 17-05-2021 ರಂದು ಸಭೆ ನಡೆಸಿದರು.
ಉಡುಪಿ ನಗರಸಭಾ ವ್ಯಾಪ್ತಿಯ ಪರ್ಕಳ, ಸರಳಬೆಟ್ಟು, ಈಶ್ವರನಗರ, ಮಣಿಪಾಲ, ಇಂದ್ರಾಳಿ, ಮೂಡುಸಗ್ರಿ, ಶೆಟ್ಟಿಬೆಟ್ಟು ವಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ಭಾಗದ ನಗರಸಭೆ ಸದಸ್ಯರುಗಳು, ಆಶಾ ಕಾರ್ಯಕರ್ತರು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್ ರೋಗ ಲಕ್ಷಣ ಇರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸುವುದು ಹಾಗೂ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದವರನ್ನು ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಶಾಸಕರು ಸೂಚಿಸಿದರು.
ಉಡುಪಿಯ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್ ಮತ್ತು ಆಕ್ಸಿಜನ್ ಬೆಡ್ ಗಳ ಕೊರತೆಯಿರುವುದಿಲ್ಲ. ಕೋವಿಡ್ ಸೋಂಕಿತರ ಚಿಕಿತ್ಸೆ ಆಯುಷ್ಮಾನ್ ಯೋಜನೆಯಡಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಲ್ಲದೆ ಐಸೋಲೇಷನ್ ಆಗಲು ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ ಸಂಪೂರ್ಣ ಉಚಿತವಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲು 24 ಗಂಟೆಯೂ ವೈದ್ಯಕೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದಂತೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಕೋವಿಡ್ – 19 ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿ ಐಸೋಲೇಷನ್ ಆದವರ ಮನೆಗೆ ಪ್ರತಿನಿತ್ಯ ಭೇಟಿ ನೀಡಿ ಅವರ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಮಣಿಪಾಲ ಠಾಣಾ ನಿರೀಕ್ಷಕರಾದ ಮಂಜುನಾಥ್ ನಾಯ್ಕ್, ನಗರಸಭೆ ಆಯುಕ್ತರಾದ ಉದಯ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಆರ್. ನಾಯಕ್, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.